Advertisement

ಒಡವೆ ಇರುವಾಗ ಓಡುವಿರೇಕೆ?

09:06 AM Jun 06, 2019 | keerthan |

ವಿವೇಚನೆಯುಳ್ಳ ಆಧುನಿಕ ನಾರಿಗೆ, ಬಂಗಾರದ ಒಡವೆಯನ್ನು ಸರಿ ರೀತಿಯಲ್ಲಿ ಬಳಸಿಕೊಳ್ಳುವ ಜಾಣ್ಮೆ ಇದೆ. ವಿದ್ಯಾವಂತ ಸ್ತ್ರೀಗೆ ಸಾಲದ ಹೊರೆ ಬೇಕಿಲ್ಲ. ತವರಿನಿಂದ ಬಂದ ಒಡವೆ, ಕಾಸಿಗೆ ಕಾಸು ಸೇರಿಸಿ ಕೊಂಡ ಆಭರಣವನ್ನು ತಿಜೋರಿಯಲ್ಲಿಟ್ಟು ಸಂಭ್ರಮಿಸುವ ಬದಲು, ಕಷ್ಟ ಕಾಲದಲ್ಲಿ ಹಣವಾಗಿ ಪರಿವರ್ತಿಸುವುದು ಜಾಣತನ…

Advertisement

ಸ್ವಂತಕ್ಕೊಂದು ಮನೆ ಮಾಡಿಕೊಳ್ಳಬೇಕು ಎನ್ನುವ ಬಹುಕಾಲದ ಹಂಬಲ ಬಜೆಟ್‌ ದಾಟಿ ಮೇಲೇರಿ ನಿಂತಾಗ ನವೀನ್‌ಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಇದ್ದಬಿದ್ದ ದುಡ್ಡನ್ನೆಲ್ಲ ಒಟ್ಟು ಮಾಡಿದರೂ ಸಾಲದು. ಇನ್ನೂ ಲಕ್ಷಗಟ್ಟಲೆ ಹಣ ಬೇಕು ಅಂತ ಗೊತ್ತಾದಾಗ ಅವನು ದಿಕ್ಕು ತೋಚದೆ ಕುಳಿತ. ಸಪ್ಪೆ ಮೋರೆ ಹೊತ್ತ ಪತಿಯ ಎದುರು ನೀತಾ ಹಿಡಿದಿದ್ದು ಒಡವೆಗಳ ಬಾಕ ನವೀನ್‌ಗೂ ಗೊತ್ತು- ಅದರಷ್ಟೇ ಮೊತ್ತದ ಚಿನ್ನಾಭರಣಗಳಿವೆ ಅಂತ. ಪತ್ನಿಗೆ ತವರಿನಿಂದ ಕೊಟ್ಟಿದ್ದು, ಕಾಸಿಗೆ ಕಾಸು ಸೇರಿಸಿ ಆಕೆ ಒಡವೆ ಖರೀದಿಸಿದ್ದೆಲ್ಲ ಅಲ್ಲಿದೆ ಎಂದು ಆತ ತಿಳಿಯದವನಲ್ಲ.

“ತಗೊಳ್ಳಿ. ಇದರಿಂದ ಸಿಕ್ಕುವ ಹಣದಿಂದ ಮನೆ ಕೊಂಡುಕೊಳ್ಳಬಹುದು’, ನೀತಾಳ ಅನುನಯದ ದನಿ. “ಬೇಡ, ಒಳಗಿಡು ಅದನ್ನು. ನಿನ್ನ ತವರಿನವರು ಕೊಟ್ಟಿದ್ದು ನಿನಗೆ. ನಾನಂತೂ ನಿನಗೆ ಏನೂ ಮಾಡಿಸಿಕೊಟ್ಟಿಲ್ಲ. ಮನೆ ಕೊಳ್ಳುವ ಯೋಗ ನಮ್ಮ ಪಾಲಿಗೆ ಇನ್ನೂ ಬಂದಿಲ್ಲ ಅಂದುಕೊಳ್ಳೋಣ’.

“ಆಪತ್ಕಾಲಕ್ಕೆ ಇರಲಿ ಅಂತ್ಲೆ ತವರಿನವರು ಹೆಣ್ಣಿಗೆ ಒಡವೆಗಳನ್ನ ಕೊಡೋದೇ ಹೊರತು, ಹಾಕ್ಕೊಂಡು ಪ್ರದರ್ಶನಕ್ಕೆ ಮಾಡ್ಲಿ ಅಂತಲ್ಲ’.
ಪತ್ನಿ ನಗುನಗುತ್ತಲೇ ಕೈಗಿತ್ತ ಒಡವೆಗಳನ್ನು, ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಬಳಸಿಕೊಂಡು, ಬಹು ದಿನದ ಕನಸಿನ ಮನೆಯನ್ನು ಸ್ವಂತವಾಗಿಸಿದ್ದ ನವೀನ್‌.
***
ಸ್ನೇಹಿತೆ ಮೈನಾಳ ಮಗಳಿಗೆ ಅನಿರೀಕ್ಷಿತವಾಗಿ ಉತ್ತಮ ಸಂಬಂಧ ಹುಡುಕಿಕೊಂಡು ಬಂದಾಗ, ಅವಳ ಪತಿ- “ಈ ವರ್ಷ ಮದುವೆ ಸಾಧ್ಯವೇ ಇಲ್ಲ. ಅವಸರವೇನಿಲ್ಲ, ಇನ್ನೂ ಎರಡು ವರ್ಷ ಹೋಗಲಿ’ ಎಂದರು. ಅದನ್ನು ಕೇಳಿ ಮಗಳ ಮುಖ ಸಣ್ಣದಾಗಿದ್ದನ್ನು ಗಮನಿಸಿದ್ದ ಮೈನಾ, ಮಗಳ ಆಸೆ ಈಡೇರಿಸಲು ನಿಂತಳು. “ವರನ ಕಡೆಯವರು ಒಡವೆಗಳನ್ನೇನೂ ಕೇಳಿಲ್ಲ. ಸರಳವಾಗಿ ಮದುವೆ ಮಾಡಿಕೊಡಿ ಎಂದಿ¨ªಾರೆ. ಮಗಳ ಬಳಿ ಇರುವ ಆಭರಣಗಳೇ ಸಾಕಾಗುತ್ತದೆ. ಉಳಿದ ವೆಚ್ಚಕ್ಕೆ ನನ್ನ ಒಡವೆಗಳನ್ನು ನಗದಾಗಿ ಬದಲಾಯಿಸೋಣ’ ಎಂದು ಗಂಡನನ್ನು ಒಪ್ಪಿಸಿ, ಎಲ್ಲೂ, ಏನೂ ಕೊರತೆಯಾಗದಂತೆ ಮಗಳ ಮದುವೆ ಮುಗಿಸಿದಳು.
* * *
ಮಗ ಮಧುಕರನಿಗೆ ಎಂಬಿಬಿಎಸ್‌ ಸೀಟು ಸಿಕ್ಕಿದಾಗಲೂ ಲೋನ್‌ ಮಾಡಲು ಅಮ್ಮ ಒಪ್ಪಿರಲೇ ಇಲ್ಲ. “ಸಾಲದ ಉರುಳು ಬೇಡ. ಮನೆಯಲ್ಲಿ ಹಣ ಇಟ್ಕೊಂಡು ಲೋನ್‌ ಮಾಡಬೇಕಾ? ನನ್ನ ಒಡವೆ ಸುಮ್ನೆ ಲಾಕರ್‌ನಲ್ಲಿದೆ. ಕಷ್ಟ ಕಾಲಕ್ಕಾಗದ ಒಡವೆ ಇದ್ದರೇನು ಪ್ರಯೋಜನ? ಕಳ್ಳರಿಗೆ ಹೆದರಿ ನಾನು ಚಿನ್ನ ಹಾಕೋದನ್ನೇ ಬಿಟ್ಟಿದ್ದೇನೆ. ಒಡವೆಯ ಹಣದಿಂದ ಮಗ ವೈದ್ಯನಾದರೆ, ಅದರ ಹತ್ತು ಪಾಲು ಒಡವೆ ಹಾಕಿದಷ್ಟು ಸಂತೋಷವಾಗುತ್ತೆ ನಂಗೆ’ ಅಂದಿದ್ದಳು ಅಮ್ಮ.
* * *
ಮಹಿಳೆಯರಿಗೆ ಬಂಗಾರದ ಮೋಹ ಜಾಸ್ತಿ. ಚಿನ್ನ ಅಂದ್ರೆ ಬಾಯಿ ಬಿಡ್ತಾರೆ ಅಂತ ಹೇಳುವುದು ನಿಜ ಇರಬಹುದು. ಆದರೆ, ಆಪತ್ಕಾಲದಲ್ಲಿ ಅವರ ಒಡವೆಗಳೇ ಮನೆಯವರ ಮೊಗದಲ್ಲಿ ನಗೆ ಅರಳಿಸುವುದೂ ಇದೆ. ರಚ್ಚೆ ಹಿಡಿದು ಚಿನ್ನ ಮಾಡಿಸ್ಕೊಂಡಿದ್ದಾಳೆ ಎನ್ನುವವರಿಗೆ, ಕಷ್ಟದ ದಿನಗಳಲ್ಲಿ ಆಕೆ ನಗುತ್ತಲೇ ಅದನ್ನು ಕಳಚಿ ಕೊಡುವಾಗ ಚಿನ್ನ ಅಂದರೆ, ಮಹಿಳೆಯ ಬಳಿಯಿರುವ ರೆಡಿ ಕ್ಯಾಶ್‌ ಎಂಬುದು ಅರ್ಥವಾಗುತ್ತದೆ. ಪತಿಯ ವ್ಯಾಪಾರಕ್ಕೋ, ಬೆಳೆದ ಮಗ, ಮಗಳ ವಿದ್ಯಾಭ್ಯಾಸಕ್ಕೋ, ಮನೆ ಕಟ್ಟಿಸಲೋ ಲೋನ್‌ ಮಾಡಬಹುದು. ಆದರೆ, ಸಾಲ ತೀರಿಸಲು ಅವರು ಹಗಲಿರುಳು ಶ್ರಮಿಸಿ, ಬದುಕಿನ ಸಣ್ಣಪುಟ್ಟ ಸಂತೋಷಗಳನ್ನು ಕಳೆದುಕೊಳ್ಳುವುದರ ಮುಂದೆ ಪೆಟ್ಟಿಗೆಯಲ್ಲಿರುವ ಆಭರಣದ ಮೌಲ್ಯ ಮಹತ್ತರವಲ್ಲ.

ಜೀವ ಹೋದರೂ ಒಡವೆ ಕೊಡಲಾರೆ ಎನ್ನುವ ಹೆಣ್ಣಮಕ್ಕಳು ಇಲ್ಲವೇ ಎಂದು ಕೇಳಿದರೆ, ಅಂಥವರೂ ಇರಬಹುದು. ಆದರೆ, ವಿವೇಚನೆಯುಳ್ಳ ಆಧುನಿಕ ನಾರಿಗೆ, ಬಂಗಾರದ ಒಡವೆ ಸರಿ ರೀತಿಯಲ್ಲಿ ಬಳಸಿಕೊಳ್ಳುವ ಜಾಣ್ಮೆ ಇದೆ. ವಿದ್ಯಾವಂತ ಸ್ತ್ರೀಗೆ ಸಾಲದ ಹೊರೆ ಬೇಕಿಲ್ಲ. ತವರಿನಿಂದ ಬಂದ ಒಡವೆ, ಕಾಸಿಗೆ ಕಾಸು ಸೇರಿಸಿ ಕೊಂಡ ಆಭರಣವನ್ನು ತಿಜೋರಿಯಲ್ಲಿಟ್ಟು ಸಂಭ್ರಮಿಸುವ ಬದಲು, ಕಷ್ಟ ಕಾಲದಲ್ಲಿ ಹಣವಾಗಿ ಪರಿವರ್ತಿಸುವುದು ಜಾಣತನ.

Advertisement

ಕೃಷ್ಣವೇಣಿ ಕಿದೂರ್‌

Advertisement

Udayavani is now on Telegram. Click here to join our channel and stay updated with the latest news.

Next