ಚಿನ್ನ ಉಳಿತಾಯ ಯೋಜನೆಗಳ ಮೂಲ ಮಧ್ಯಮ ಮತ್ತು ಸಾಮಾನ್ಯ ವರ್ಗದವರು ಸುಲಭದಲ್ಲಿ ಚಿನ್ನ ಖರೀದಿಸುವುದು ಸಾಧ್ಯ ಎಂಬುದನ್ನು ನಾವು ಮನಗಂಡೆವು. ಚಿನ್ನ ಉಳಿತಾಯದ ಸ್ಕೀಮುಗಳ ಬಗ್ಗೆ ಚರ್ಚಿಸುತ್ತಿದ್ದಂತೆಯೇ ಚಿನ್ನದ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಿರುವುದನ್ನು ಕೂಡ ನಾವು ಗಮನಿಸಿದೆವು.
ಭಾರತದಲ್ಲಿ ವ್ಯಾಪಕವಾಗಿ ಒಡವೆ ತಯಾರಿಗೆ ಬಳಸಲಾಗುವ 22 ಕ್ಯಾರೆಟ್ ಚಿನ್ನ ಗ್ರಾಮಿಗೆ ಈಗ 3,050 ರೂ. ಆಸುಪಾಸಿನಲ್ಲಿ ಇದೆ. ನಿಜಕ್ಕಾದರೆ ಈ ದರದಿಂದ ಸಾಮಾನ್ಯ ಜನರು ಮೈಲುದೂರು ಉಳಿಯುವುದಲ್ಲದೇ ಬೇರೆನೂ ಮಾಡಲಾರರು. ಹಾಗಾಗಿಯೇ ಚಿನ್ನ ವ್ಯಾಪಾರಿಗಳಿಗೆ ಈ ದಿನದಲ್ಲಿ ಸಾಮಾನ್ಯ ವರ್ಗದ ಗ್ರಾಹಕರು ಕಡಿಮೆಯಾಗಿದ್ದಾರೆ ಎನ್ನುವುದು ಗಮನಾರ್ಹ.
ಚಿನ್ನದ ಬೆಲೆ ಏರಲಿ, ಇಳಿಯಲಿ, ಮಧ್ಯಮ ಮತ್ತು ಸಾಮಾನ್ಯ ವರ್ಗದವರಾಗಿರುವ ನಮಗೆ ಉಳಿತಾಯದ ಮೂಲಕವಲ್ಲದೆ ಚಿನ್ನ ಖರೀದಿಸುವ ಅನ್ಯ ಮಾರ್ಗವೇ ಇಲ್ಲ. ಏಕೆಂದರೆ ಈ ವರ್ಗದವರಿಗೆ ಚಿನ್ನ ಯಾವತ್ತೂ ಗಗನ ಕುಸುಮ. ಆದರೂ ಚಿನ್ನ ಒಂದು ಆಪದ್ಧನ ಎಂಬ ಕಾರಣಕ್ಕೆ ಚಿನ್ನಕ್ಕಾಗಿ, ಚಿನ್ನ ಖರೀದಿಗಾಗಿ, ಸ್ಕೀಮುಗಳ ಮೂಲಕ ಕ್ರಮಬದ್ಧವಾಗಿ ಹಣ ಉಳಿತಾಯ ಮಾಡುವುದಲ್ಲದೆ ಬೇರೆ ಗತ್ಯಂತರವಿಲ್ಲ ಎನ್ನುವುದು ಕೂಡ ಸತ್ಯ.
ಹಾಗಿದ್ದರೂ ಚಿನ್ನದ ಬೆಲೆಯಲ್ಲಿ ಏರಿಳಿಕೆ ಯಾವತ್ತೂ ಕಂಡು ಬರುತ್ತಿರುತ್ತದೆ ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜವೇ. ಇದಕ್ಕೆ ಕಾರಣಗಳು ಹಲವಿವೆ. ಅತೀ ಮುಖ್ಯ ಕಾರಣವೆಂದರೆ ಚಿನ್ನ ಮತ್ತು ಅಮೆರಿಕನ್ ಡಾಲರ್ ನಡುವೆ ನೇರವಾಗಿರುವ ವಾಣಿಜ್ಯ ಸಂಬಂಧ. ಡಾಲರ್ ಬೆಲೆ ಕುಸಿದಾಗ ಚಿನ್ನದ ಬೆಲೆ ಏರುತ್ತದೆ ಮತ್ತು ಇವು ಪರಸ್ಪರ ರಿವರ್ಸ್ ಸಂಬಂಧವನ್ನು ಹೊಂದಿರುತ್ತವೆ. ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಇಳಿದಾಗ ಇತರ ದೇಶಗಳ ಕರೆನ್ಸಿ ದರ ಏರುತ್ತದೆ. ಇದರ ಪರಿಣಾಮವಾಗಿ ಚಿನ್ನ ಸಹಿತ ವಾಣಿಜ್ಯ ವಸ್ತುಗಳ ಬೇಡಿಕೆ ಏರುತ್ತದೆ. ಆದ್ಯತೆಯಲ್ಲಿ ಅಗ್ರ ಸ್ಥಾನ ಹೊಂದಿರುವ ಚಿನ್ನದ ಬೆಲೆ ಸಹಜವಾಗಿಯೇ ಮುನ್ನುಗ್ಗುತ್ತದೆ.
ಇನ್ನೊಂದು ಅತೀ ಮುಖ್ಯ ವಿಷಯವೆಂದರೆ ಹಣದುಬ್ಬರ. ಗ್ರಾಹಕ ವಸ್ತುಗಳು ಮತ್ತು ಸೇವೆಗಳ ಬೆಲೆ ಏರುತ್ತಲೇ ಹೋಗುತ್ತಿರುವ ಸ್ಥಿತಿಯಲ್ಲಿ ಕರೆನ್ಸಿ ಯ ಖರೀದಿ ಸಾಮರ್ಥ್ಯ ತಗ್ಗುತ್ತಲೇ ಹೋಗುತ್ತದೆ. ಮಾರುಕಟ್ಟೆಯಲ್ಲಿರುವ ವಸ್ತುಗಳಿಗೆ ಬೇಡಿಕೆ ಹೆಚ್ಚಿದಂತೆ ಅವುಗಳ ಬೆಲೆ ಹೆಚ್ಚುತ್ತದೆ; ಏಕೆಂದರೆ ಪೂರೈಕೆಯು ಬೇಡಿಕೆಗೆ ಅನುಗುಣವಾಗಿ ಏರದಿರುವುದೇ ಇದಕ್ಕೆ ಕಾರಣ. ಇದರ ಪರಿಣಾಮಕ್ಕೆ ಚಿನ್ನವೂ ಹೊರತಲ್ಲ. ಹಾಗಾಗಿ ಹಣದುಬ್ಬರ ಏರಿದಂತೆ ಚಿನ್ನದ ಬೆಲೆಯೂ ಏರುತ್ತದೆ; ಹಣದುಬ್ಬರ ಕಡಿಮೆಯಾದಂತೇ ಚಿನ್ನದ ಬೆಲೆಯೂ ಕಡಿಮೆಯಾಗುತ್ತದೆ.
ಇನ್ನೊಂದೆದರೆ ಶೇರು ಮಾರುಕಟ್ಟೆಗೂ ಚಿನ್ನಕ್ಕೂ ಅವಿನಾಭಾವ ಸಂಬಂಧ ಇರುತ್ತದೆ. ಶೇರು ದರಗಳು ಗಗನ ಮುಖಿಯಾದಾಗ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗಿ ಜನರ ಕೈಯಲ್ಲಿರುವ ದುಡ್ಡು ಹೆಚ್ಚಿನ ಲಾಭ ಗಳಿಸುವ ಸಲುವಾಗಿ ಶೇರು ಮಾರುಕಟ್ಟೆಯತ್ತ ತಿರುಗತ್ತದೆ. ಶೇರು ಮಾರುಕಟ್ಟೆ ಕುಸಿಯಲಾರಂಭಿಸಿದ ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದತ್ತ ತಿರುಗಿಸುತ್ತಾರೆ. ಹೀಗಾಗಿ ಶೇರು ಮತ್ತು ಚಿನ್ನ ವಿರೋಧಾತ್ಮಕ ಸಂಬಂಧವನ್ನು ಹೊಂದಿರುತ್ತವೆ.
ಠೇವಣಿ ಬಡ್ಡಿ ದರಗಳಿಗೂ ಚಿನ್ನಕ್ಕೂ ಒಂದು ರೀತಿಯ ವಿರೋಧಾತ್ಮಕ ಸಂಬಂಧ ಇರುತ್ತದೆ. ಬ್ಯಾಂಕ್ ಠೇವಣಿ ಬಡ್ಡಿದರ ಏರಿದಾಗ ಜನರು ಅತ್ಯಂತ ಅಸ್ಥಿರತೆಯಲ್ಲಿ ಓಲಾಡುವ ಶೇರು ಮಾರುಕಟ್ಟೆಯಿಂದ ಹೊರಬಂದು ತಮ್ಮ ಹಣವನ್ನು ನಿಶ್ಚಿತ ಮತ್ತು ನಿಶ್ಚಿಂತೆಯ ಇಳುವರಿಯ ಬಡ್ಡಿ ಆದಾಯವನ್ನು ನೆಚ್ಚಿ ಕೊಳ್ಳಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆ ಕುಗ್ಗುತ್ತದೆ; ಪರಿಣಾವಾಗಿ ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇರುತ್ತದೆ.
ಈ ರೀತಿಯ ಸ್ಥಿತಿಯಲ್ಲಿ ಚಿನ್ನದ ಮೇಲೆ ಹಣ ಹೂಡುವುದು ಬುದ್ಧಿವಂತಿಕೆಯ ಮಾತೇ ? ಎಂಬ ಪ್ರಶ್ನೆ ಏಳುತ್ತದೆ. ಅನೇಕ ಪರಿಣತರ ಪ್ರಕಾರ ಚಿನ್ನವನ್ನು ನೇರವಾಗಿ, ಹೂಡಿಕೆ ದೃಷ್ಟಿಯಿಂದ, ಖರೀದಿಸುವ ಬದಲು, ಚಿನ್ನದ ಬಾಂಡ್ ಖರೀದಿಸುವುದೇ ಕ್ಷೇಮ ಎಂದಾಗಿರುತ್ತದೆ. ಚಿನ್ನವನ್ನು ಭೌತಿಕ ರೂಪದಲ್ಲಿ ಹೊಂದುವಾಗ ಒಡವೆಗಿಂತಲೂ ಚಿನ್ನದ ನಾಣ್ಯ, ಚಿನ್ನದ ಬಿಸ್ಕತ್, ಗಟ್ಟಿ ಇತ್ಯಾದಿ ರೂಪದಲ್ಲಿ ಹೊಂದುವುದೇ ಉತ್ತಮ ಎಂಬ ಅಭಿಪ್ರಾಯ ಕೂಡ ಹೆಚ್ಚು ಸರಿಯಾದದ್ದು. ಏಕೆಂದರೆ ಈ ರೂಪದಲ್ಲಿ ಚಿನ್ನದ ತೇಮಾನು ವೆಚ್ಚ ಹೂಡಿಕೆದಾರರ ಮೇಲೆ ಬೀಳುವುದಿಲ್ಲ.
ಚಿನ್ನದ ದರ ನಿಗದಿಯಾಗುವುದು ಹೇಗೆ ಎಂಬ ಪ್ರಶ್ನೆ ಕೂಡ ಹೂಡಿಕೆದಾರರಿಗೆ ಮುಖ್ಯವಾಗುತ್ತದೆ. ಚಿನ್ನ ಒಂದು ಜಾಗತಿಕ ಬಿಕರಿಯ ವಸ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಮತ್ತು ಬೇಡಿಕೆಯೇ ಅದರ ದರವನ್ನು ತೀರ್ಮಾನಿಸುತ್ತದೆ. ಪೂರೈಕೆ ಹೆಚ್ಚಿದ್ದಾಗ ಬೇಡಿಕೆ ಕಡಿಮೆ ಇದ್ದಾಗ ಚಿನ್ನದ ಬೆಲೆ ಇಳಿಯುವುದು ಸಾಮಾನ್ಯ. ಇದೇ ರೀತಿ ವಿರೋಧಾತ್ಮಕ ಸ್ಥಿತಿ ಮಾರುಕಟ್ಟೆಯಲ್ಲಿ ಏರ್ಪಡುವುದು ಸಹಜ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 9 ಕ್ಯಾರೆಟ್, 10 ಕ್ಯಾರೆಟ್, 14 ಕ್ಯಾರೆಟ್, 15 ಕ್ಯಾರೆಟ್ ಚಿನ್ನದ ದರಗಳು ಕೂಡ ನಿಗದಿಯಾಗುತ್ತವೆ. ಗ್ರಾಮ್ ನೆಲೆಯಲ್ಲಿ ಟ್ರಾಯ್ ಔನ್ಸ್ ದರಗಳಲ್ಲಿ ಇವುಗಳ ಬೆಲೆ ಪ್ರಕಟವಾಗುತ್ತದೆ.
ಭಾರತದಲ್ಲಿ ಚಿನ್ನಾಭರಣ ತಯಾರಿಗೆ ವ್ಯಾಪಕವಾಗಿ 22 ಕ್ಯಾರೆಟ್ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲೀಗ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮಿಗೆ 3,030 ರೂ. ಗೆ ಜಿಗಿದಿರುವುದನ್ನು ನಾವು ತಿಳಿದಿದ್ದೇವೆ. ಅಂತೆಯೇ ಈ ಸಂದರ್ಭದಲ್ಲಿ ಚಿನ್ನದ ಪರಿಶುದ್ಧತೆ ಮತ್ತು ಅದನ್ನು ಕ್ಯಾರೆಟ್ನಲ್ಲಿ ಅಳೆಯಲಾಗುವ ಬಗೆಯನ್ನು ತಿಳಿದಿರುವುದು ಅಗತ್ಯ. ಅದು ಈ ಕೆಳಗಿನಂತಿರುತ್ತದೆ :
* 24 ಕ್ಯಾರೆಟ್ : 99.99%
* 23 ಕ್ಯಾರೆಟ್ : 95.80%
* 22 ಕ್ಯಾರೆಟ್ : 91.66%
* 21 ಕ್ಯಾರೆಟ್ ; 87.50%
* 18 ಕ್ಯಾರೆಟ್ : 75.00%
* 14 ಕ್ಯಾರೆಟ್ : 58.30%
22 ಕ್ಯಾರೆಟ್ ಅಂದರೆ 91.66 ಶುದ್ಧ ಚಿನ್ನ: ಉಳಿದ ಭಾಗ ಲೋಹ
24 ಕ್ಯಾರೆಟ್ ಚಿನ್ನವನ್ನು 22 ಕ್ಯಾರೆಟ್ಗೆ ಪರಿವರ್ತಿಸಲು ಬೇಕಿರುವ ಲೋಹ ತಾಮ್ರ ಮತ್ತು ಬೆಳ್ಳಿ.
ವಜ್ರಾಭರಣಗಳ ತೆರೆದ ಸೆಟ್ಟಿಂಗ್ ಗೆ 18 ಕ್ಯಾರೆಟ್ ಚಿನ್ನ ಬಳಸಲಾಗುತ್ತದೆ; ಮುಚ್ಚಿದ ವಜ್ರಾಭರಣಗಳ ಸೆಟ್ಟಿಂಗ್ ಗ 22 ಕ್ಯಾರೆಟ್ ಬಳಸಲಾಗುತ್ತದೆ.
ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ನಿಂದ ಸ್ಥಾಪಿಸಲ್ಪಟ್ಟ ಹಾಲ್ ಮಾರ್ಕಿಂಗ್ ಸೆಂಟರ್ಗಳು ಚಿನ್ನಾಭರಣಗಳನ್ನು ಪ್ರಮಾಣೀಕರಿಸುತ್ತವೆ.