ಹೊಸದಿಲ್ಲಿ : ”ಪಿಎನ್‌ಬಿ ಬಹುಕೋಟಿ ವಂಚನೆ ಹಗರಣದ ಮೂಲ ಅಪರಾಧವನ್ನು ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಎಸಗಿದ್ದು 2011ರಲ್ಲಿ; ಅಂದರೆ ಯುಪಿಎ ಅಧಿಕಾರಾವಧಿಯ ವೇಳೆಯಲ್ಲಿ” ಎಂದು ಹೇಳುವ ಮೂಲಕ ಬಿಜೆಪಿ, ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.
ಯುಪಿಎ ಕಾಲದಲ್ಲೇ ಪಿಎನ್‌ಬಿ ಬಹುಕೋಟಿ ವಂಚನೆ ಹಗರಣದ ಬೀಜಾಂಕುರವಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪಿಎನ್‌ಬಿ ಬಹುಕೋಟಿ ವಂಚನೆ ಹಗರಣದಲ್ಲಿ ಉನ್ನತ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು. ನೀರವ್ ಮೋದಿ ಅವರ ಕಂಪೆನಿಗಳಲ್ಲಿ ಫೈರ್ ಸ್ಟಾರ್ ಡೈಮಂಡ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಕೂಡ ಒಂದು. ಇದನ್ನು ಅವರು ಅದ್ವೆ„ತ್ ಹೋಲ್ಡಿಂಗ್ಸ್ ನಿಂದ ಖರೀದಿಸಿದ್ದರು. ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿ ಅವರು 2002ರಿಂದಲೂ ಈ ಕಂಪೆನಿಯ ಓರ್ವ ಶೇರುದಾರರಾಗಿದ್ದರು ಎಂದು ನಿರ್ಮಲಾ ಹೇಳಿದರು.
2013ರಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಆರು ತಿಂಗಳ ಕಾಲ ಗೀತಾಂಜಲಿ ಜೆಮ್ಸ್ ಕಂಪೆನಿಯನ್ನು ಅಮಾನತು ಮಾಡಲಾಗಿತ್ತು. ಜ್ಯುವೆಲ್ಲರಿ ಸಮೂಹದ ಈ ಕಂಪೆನಿಯ ಒಂದು ಪ್ರಮೋಶನಲ್ ಈವೆಂಟ್‌ನಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪಿಎನ್‌ಬಿ ಬಹುಕೋಟಿ ವಂಚನೆ ಹಗರಣದಲ್ಲೀಗ ವಿದೇಶಕ್ಕೆ ಪಲಾಯನ ಮಾಡಿರುವ ನೀರವ್ ಮೋದಿ ಅವರನ್ನು ಹಿಡಿಯುವುದಕ್ಕೇ ಕೇಂದ್ರ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಕಾಂಗ್ರೆಸ್ ಸರಕಾರ ಈ ಹಗರಣವನ್ನು ತನ್ನ ಆಡಳಿತಾವಧಿಯಲ್ಲಿ ಮುಚ್ಚಿ ಹಾಕಿತ್ತು. ಈಗ ಜನರನ್ನು ಅದು ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಸಚಿವೆ ಆರೋಪಿಸಿದರು.