Advertisement

ಮಿನಿ ವಿಧಾನಸೌಧದಲ್ಲಿ ಮೂಲ ಸೌಲಭ್ಯಗಳೇ ಮರೀಚಿಕೆ!

10:01 AM Jan 20, 2019 | Team Udayavani |

ಚನ್ನಗಿರಿ: ವಿವಿಧ ಕೆಲಸ ಕಾರ್ಯಗಳಿಗೆಂದು ತಾಲೂಕು ಕಚೇರಿಗೆ ಬರುವ ಸಾರ್ವಜನಿಕರು ಮೂಲ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ.

Advertisement

ಪಟ್ಟಣದ ತಾಲೂಕು ಕಚೇರಿಗೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ವಯೋ ವೃದ್ಧರು ಸೇರಿದಂತೆ ಮಹಿಳೆಯರು, ಯುವಕರು ಬರುತ್ತಾರೆ. ಕೆಲವೊಮ್ಮೆ ಕೆಲಸಕ್ಕಾಗಿ ಬೆಳಗಿನಿಂದ ಸಂಜೆಯವರೆಗೆ ಅಲ್ಲಿಯೇ ಕಾಯಬೇಕಾಗುತ್ತದೆ.

ಆಗ ಕನಿಷ್ಟಪಕ್ಷ ಜನರು ಕುಳಿತುಕೊಳ್ಳಲು ಕೂಡ ಕಚೇರಿಯಲ್ಲಿ ಆಸನದ ವ್ಯವಸ್ಥೆ ಇಲ್ಲ. ನಿಂತು ನಿಂತು ಸುಸ್ತಾಗಿ ಕಚೇರಿ ನೆಲದ ಮೇಲೆಯೇ ಕುಳಿತುಕೊಳ್ಳುವಂತಾಗಿದೆ. ಇಂತಹ ವ್ಯವಸ್ಥೆಯಿಂದ ತಾಲೂಕು ಕಚೇರಿಯೆಂದರೆ ಜನತೆ ಬೇಸತ್ತುಹೋಗಿದ್ದಾರೆ.

ಪಹಣಿ ಪಡೆಯಲು ಬಿಸಿಲಲ್ಲಿ ಕ್ಯೂ: ಪಹಣಿ ಮತ್ತು ಜಾತಿ, ಆದಾಯ ಪ್ರಮಾಣಪತ್ರ ಪಡೆಯವುದಕ್ಕೆ ಕಚೇರಿಯ ಬಲಭಾಗದಲ್ಲಿ ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ. ಪಹಣಿಗಾಗಿ ರೈತರು ದಿನವಿಡಿ ಬಿಸಿಲಲ್ಲಿ ಕ್ಯೂ ನಿಲ್ಲಬೇಕಿದೆ.

ಕುಡಿಯುವ ನೀರಿಗಾಗಿ ಪರದಾಟ: ಕಚೇರಿಯ ಒಳಗಡೆ ಕುಡಿಯುವ ನೀರಿಗಾಗಿ ಅಳವಡಿಸಲಾಗಿದ್ದ ಶುದ್ಧ ನೀರು ಘಟಕ ವರ್ಷದ ಹಿಂದೆ ರಿಪೇರಿಗೆ ಬಂದಿದ್ದು ಇನ್ನೂ ದುರಸ್ತಿ ಆಗಿಲ್ಲ.

Advertisement

ಮಹಿಳೆಯರಿಗಿಲ್ಲ ಶೌಚಾಲಯ: ಕಚೇರಿಯಲ್ಲಿ ಮಹಿಳೆಯರಿಗಾಗಿ ಶೌಚಾಲಯವಿದೆ. ಅದರೆ ಅದನ್ನು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಮಾತ್ರ ಉಪಯೋಗಿಸುತ್ತಿದ್ದಾರೆ. ಹೀಗಾಗಿ ಕೆಲಸ ಕಾರ್ಯಗಳಿಗೆ ಬರುವ ಗ್ರಾಮೀಣ ಮಹಿಳೆಯರು ಶೌಚಾಲಯವಿಲ್ಲದೇ ಪರದಾಡುವಂತಾಗಿದೆ. ಪುರುಷರ ಶೌಚಾಲಯ ನಿರ್ವಹಣೆಯಿಲ್ಲದೇ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.

ಮಿನಿ ವಿಧಾನಸೌಧದಲ್ಲಿ ಸೌಲಭ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಆದರೆ ಸದ್ಯಕ್ಕೆ ಅನುದಾನದ ಕೊರತೆ ಇದೆ. ಲೋಕಸಭೆ ಚುನಾವಣೆ ನಂತರ ಕುಡಿಯುವ ನೀರು, ಆಸನದ ವ್ಯವಸ್ಥೆ ಮಾಡಲಾಗುವುದು.
• ಎನ್‌.ಜೆ ನಾಗರಾಜ್‌, ತಹಶೀಲ್ದಾರ್‌,
  ಚನ್ನಗಿರಿ

ಕೆಲವೊಮ್ಮೆ ನಿಗದಿತ ಸಮಯದಲ್ಲಿ ಕೆಲಸಗಳು ಆಗದೇ ದಿನವಿಡಿ ಕಚೇರಿಯಲ್ಲಿ ಕಾಯಬೇಕಾಗಿ ಬರುತ್ತದೆ. ಕುಡಿಯುವ ನೀರು, ಆಸನದ ವ್ಯವಸ್ಥೆಯಿಲ್ಲದೆ ಕಚೇರಿ ಎದುರಿನ ಹೋಟೆಲ್‌, ಅಂಗಡಿಗಳನ್ನು ಅವಲಂಬಿಸಬೇಕಿದೆ. ಇನ್ನು ಅಂಗಡಿಗಳಲ್ಲಿ ದುಪ್ಪಟ್ಟು ಹಣ ನೀಡಿ ನೀರಿನ ಬಾಟಲಿಗಳನ್ನು ಖರೀದಿಸಬೇಕು. ಕಚೇರಿಗೆ ಬರುವಂತಹವರು ಬಡವರು. ಆದ್ದರಿಂದ ಮೂಲಸೌಕರ್ಯವನ್ನು ಒದಗಿಸಬೇಕು.
ಶಿವಕುಮಾರ್‌,
ಬುಳ್ಳುಸಾಗರ ಗ್ರಾಮಸ್ಥರು.

ಹಳ್ಳಿಯಿಂದ ದಣಿದು ಬರುವ ಜನರು ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಇನ್ನು ವಯಸ್ಸಾದವರಿಗೆ, ಅಂಗವಿಕಲರಿಗೆ ಕಚೇರಿಯ ಒಳಗಡೆ ಆಸನದ ವ್ಯವಸ್ಥೆಯಿಲ್ಲ. ಎಲ್ಲರೂ ನೆಲದ ಮೇಲೆಯೇ ಕುಳಿತುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಶೌಚಾಲಯ ಕೂಡ ಇಲ್ಲ. ಆದ್ದರಿಂದ ತಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.
ಗಾಂಧಿ ನಗರದ ಚಿತ್ರಲಿಂಗಪ್ಪ,
 ತಾಲೂಕು ಡಿಎಸ್‌ಎಸ್‌ ಸಂಚಾಲಕ.

Advertisement

Udayavani is now on Telegram. Click here to join our channel and stay updated with the latest news.

Next