ನಾರಾಯಣಪುರ: ನಿತ್ಯ ನಿಯಮ ಬದ್ಧ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯ ಮಾನಸಿಕ ಹಾಗೂ ಶಾರೀರಿಕವಾಗಿ ಬಲವರ್ಧನೆ ಹೊಂದಲು ಸಾಧ್ಯ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೇಕಾರ ಹೇಳಿದರು.
ಸಮೀಪದ ರಾಜನಕೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಐದು ದಿನಗಳ ಯೋಗ ಶಿಬಿರ ಮುಕ್ತಾಯ ಕಾರ್ಯಕ್ರಮದಲ್ಲಿ ಯೋಗ ಪಟುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮನುಷ್ಯನ ಒತ್ತಡದ ಜೀವನದಲ್ಲಿ ಯೋಗ, ವ್ಯಾಯಾಮವನ್ನು ಮರೆತು ನಾನಾ ರೋಗಗಳಿಗೆ ತುತ್ತಾಗಿ ಪರದಾಡುವುದಕ್ಕಿಂತ, ಪ್ರಾಚೀನ ಕಾಲದ ನಮ್ಮ ಪೂರ್ವಜರ ಕೊಡುಗೆಯಾದ ಯೋಗವನ್ನು ನಿಯಮಿತವಾಗಿ, ಸರಳ ರೀತಿಯಿಂದ ಅಭ್ಯಾಸ ಮಾಡಿದರೆ ಆರ್ಯೋಗಕರ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ನೌಕರರ ಸಂಘದ ಮಾಜಿ ಅಧ್ಯಕ್ಷ ಬಸನಗೌಡ ವಠಾರ ಮಾತನಾಡಿ, ಯೋಗ ಗುರುವಿನ ಮಾರ್ಗದರ್ಶನದಲ್ಲಿ ಯೋಗದ ವಿವಿಧ ಆಸನಗಳನ್ನು ನಿಯಮಿತ, ಪರಿಣಾಮಕಾರಿಯಾಗಿ ನಿರ್ವಹಿಸುವುದರಿಂದ ಆರ್ಯೋಗ ಸುಧಾರಣೆ ಆಗುವುದು ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗದ ವಿವಿಧ ಆಸನಗಳನ್ನು ಸಂಪನ್ಮೂಲ ಶಿಕ್ಷಕರಾದ ವಿಶ್ವನಾಥ, ಬಸವರಾಜ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ನೀಲಮ್ಮ ಸಾಲವಡಗಿ, ಗ್ರಾಪಂ ಅಧ್ಯಕ್ಷೆ ಉಮಾದೇವಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಪೊಲೀಸ್ ಪಾಟೀಲ, ಮುಖ್ಯಗುರು ವಿ.ಜಿ. ಹಂಡಗಿ, ವೀರಣ್ಣಗೌಡ, ಸುವರ್ಣಾ ಲಿಂಗದಳ್ಳಿ, ಅಮರಣ್ಣ ಬಡಿಗೇರ, ವೆಂಕನಗೌಡ ಮಾಲಿಪಾಟೀಲ ಇದ್ದರು.