ಕಾಳಗಿ: ನೇಕಾರ ಸಮುದಾಯದ ಜನರು ಸಂಘಟಿತರಾಗಿ ಕುಲಕಸುಬಿನಲ್ಲಿ ತೊಡಗಿದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತಿ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಹೇಳಿದರು.
ನಗರದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜವಳಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ನೇಕಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಯ ದಿನಗಳಲ್ಲಿ ಕೇಂದ್ರ ಸರ್ಕಾರ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ನೇಕಾರರ ಗಣತಿ ಮಾಡಲು ಆದೇಶಿಸಿದ್ದಾರೆ ಎಂದರು.
ಗಣತಿ ನಂತರ ಕೇಂದ್ರ ಸರ್ಕಾರ ನೂತನ ಯೋಜನೆಗಳನ್ನು ಜಾರಿಗೆ ತಂದು ನೇಕಾರರ ಅಭಿವೃದ್ಧಿಗೆ ಶ್ರಮಿಸಲಿದೆ. ಸರ್ಕಾರದಿಂದ ದೊರೆಯುವ ಯೋಜನೆಗಳ ಲಾಭ ಪಡೆಯಬೇಕಾದರೆ ನೇಕಾರರು ಸಹಕಾರಿ ಸಂಘಗಳನ್ನು ರಚನೆ ಮಾಡಿಕೊಂಡರೆ ಉತ್ತಮ ಎಂದರು.
ಜವಳಿ ಇಲಾಖೆ ಜಿಲ್ಲಾ ನಿರ್ದೇಶಕ ಶಿವರಾಜ ಕುಲಕರ್ಣಿ ಮಾತನಾಡಿ, ನೇಕಾರರು ಈಗ ಮೊದಲಿನಂತೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಬಟ್ಟೆಗಳನ್ನು ನೇಯುವುದಕ್ಕಾಗಿ ವಿದ್ಯುತ್ ಚಾಲಿತ ಮಗ್ಗಗಳು ಬಂದಿವೆ. ಮಹಿಳೆ ಅಥವಾ ಪುರುಷರು ಯಾರಾದರೂ ಆರಾಮವಾಗಿ ಕಡಿಮೆ ಅವಧಿಧಿಯಲ್ಲಿ ಹೆಚ್ಚಿನ ಬಟ್ಟೆ ನೇಯಬಹುದು ಎಂದು ಹೇಳಿದರು.
ಜಯಚಂದ್ರ ಸಜ್ಜನ ಮಾತನಾಡಿ, ಜವಳಿ ಇಲಾಖೆಯಿಂದ ನೇಕಾರರಿಗೆ ಸಿಗುವ ವಿವಿಧ ಸಬ್ಸಿಡಿಗಳ ಕುರಿತು ಮಾಹಿತಿ ನೀಡಿದರು. ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಹಣಮಂತ ಕಣ್ಣಿ, ಹನುಮಂತಪ್ಪ ಕಾಂತಿ ಮಾತನಾಡಿದರು.
ಶಂಕ್ರಯ್ಯಸ್ವಾಮಿ ದೇವಾಂಗ ಮಠ, ಬಾಲಚಂದ್ರ ಕಾಂತಿ, ಶಿವಾನಂದ ಸ್ವಾಮಿ, ವೀರೇಶ ಸಿಂಗಶೆಟ್ಟಿ, ಪಾಂಡುರಂಗ ಕಣ್ಣಿ, ಸುರೇಶ ಸಿಂಗಶೆಟ್ಟಿ, ಗಣಪತರಾವ ಸಿಂಗಶೆಟ್ಟಿ, ವಿಜಯಕುಮಾರ ಅಲ್ಲಾಪೂರ, ಗಣೇಶ ಸಿಂಗಶೆಟ್ಟಿ, ಚೌಡಪ್ಪ ಗುರಮಿಠಕಲ್, ವಿಠಲ ಗುರಮಿಠಕಲ್, ಶಶಿಕುಮಾರ ಟೆಂಗಳಿ, ಕಾಳು ಜಿಲ್ಲಿ ಇದ್ದರು.