Advertisement

ರಾಜಕೀಯ ಶಕ್ತಿ ಪಡೆಯಲು ಸಂಘಟಿತರಾಗಿ

11:28 AM Sep 18, 2018 | Team Udayavani |

ಮೈಸೂರು: ವಿಶ್ವಕರ್ಮ ಸಮಾಜದವರು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ತ್ಯಾಗ ಮನೋಭಾವದಿಂದ ದುಡಿದ ಸಮಾಜ ನಿಮ್ಮದು, ಸಮುದಾಯದ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು. ಪುರಾಣಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ವಿಶ್ವಕರ್ಮರಿಗೆ ಪ್ರಥಮ ಸ್ಥಾನ ನೀಡಲಾಗಿದೆ.

ಆದರೆ, ದೇವಸ್ಥಾನ ಕಟ್ಟಿ, ಲಿಂಗ ಮಾಡಿಕೊಟ್ಟವರಿಗೆ ದೇವಸ್ಥಾನದೊಳಗೆ ಪ್ರವೇಶವಿರುವುದಿಲ್ಲ. ಅದೇ ರೀತಿಯಲ್ಲಿ ಎಲ್ಲರಿಗೂ ಮನೆ, ದೇವಸ್ಥಾನ ಕಟ್ಟಿಕೊಡುವ ವಿಶ್ವಕರ್ಮರಿಗೆ ಮನೆ ಇಲ್ಲದ ಪರಿಸ್ಥಿತಿ ಇದೆ. ಕೃಷಿಕರಿಗೆ ನೇಗಿಲು, ಮದುವೆಗೆ ತಾಳಿ ಮಾಡಿಕೊಡುವುದರಿಂದ ಹಿಡಿದು ಮನುಷ್ಯನ ಜೀವನದ ಪ್ರತಿಯೊಂದು ಕೆಲಸದಲ್ಲೂ ವಿಶ್ವಕರ್ಮರಿದ್ದಾರೆ. ದೈಹಿಕವಾಗಿ ದುಡಿದು ಸಮುದಾಯದ ಕಲ್ಯಾಣ ಮಾಡುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ನಿರುದ್ಯೋಗ ಸೃಷ್ಟಿ: ಇಂದು ಕಂಪನಿಗಳ ಮೂಲಕ ಕೃಷಿ ಸಲಕರಣೆಗಳು ಬಂದು ವಿಶ್ವಕರ್ಮರ ಕುಲಕಸುಬು ಕಸಿದುಕೊಂಡು ನಿರುದ್ಯೋಗ ಸೃಷ್ಟಿಸಿವೆ. ಜೊತೆಗೆ ಸಮಾಜ ಇಂದಿಗೂ ಅಸಂಘಟಿತವಾಗಿರುವುದರಿಂದ ಸರ್ಕಾರಿ ಸವಲತ್ತುಗಳು ದೊರೆಯದೆ ಬಡತನವಿದೆ. ಸಣ್ಣಪುಟ್ಟ ಸಮುದಾಯದವರೂ ಇಂದು ಶಾಸಕರಾಗುತ್ತಿದ್ದಾರೆ.

ಆದರೆ, ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವಕರ್ಮರಲ್ಲಿ ಇಬ್ಬರು ವಿಧಾನಸಭೆ ಸದಸ್ಯರನ್ನು ಹೊರತುಪಡಿಸಿದರೆ ರಾಜಕೀಯ ಪ್ರಾತಿನಿಧ್ಯ ಇಲ್ಲ. ಹೀಗಾಗಿ ರಾಜಕೀಯವಾಗಿ ಶಕ್ತಿ ಪಡೆಯಲು ಸಮುದಾಯದವರು ಸಂಘಟಿತರಾಗಬೇಕು. ಆ ಮೂಲಕ ಸರ್ಕಾರಿ ಸವಲತ್ತುಗಳನ್ನು ಪಡೆದು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿಸಲು ಯುವಕರು ಮುಂದಾಗಬೇಕು ಎಂದರು.

Advertisement

ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಎಂಜಿನಿಯರಿಂಗ್‌ ಸೇರಿದಂತೆ ವಿಶ್ವಕರ್ಮರ ಕೊಡುಗೆ ಇಲ್ಲದ ಕ್ಷೇತ್ರವಿಲ್ಲ. ಇಂತಹ ಸಮಾಜಕ್ಕೆ ಮನ್ನಣೆ ಸಿಗಬೇಕಾದರೆ ಸಂಘಟಿತರಾಗುವುದು ಮುಖ್ಯ. ಯುವಜನರು ತಮ್ಮ ಕುಲಕಸುಬು ಬಗ್ಗೆ ಗೌರವ ಬೆಳೆಸಿಕೊಳ್ಳಿ ಎಂದರು.

ಶಾಸಕ ಎಲ್‌.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಕುಮಾರಕವಿ ನಟರಾಜ್‌ ಮುಖ್ಯಭಾಷಣ ಮಾಡಿದರು. ನಗರಪಾಲಿಕೆ ಸದಸ್ಯರಾದ ಛಾಯಾದೇವಿ, ರಮೇಶ್‌, ವೇದಾವತಿ, ಪ್ರಮೀಳಾ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹುಚ್ಚಪ್ಪಾಚಾರ್‌, ಉಪಾಧ್ಯಕ್ಷ ನಂದಕುಮಾರ್‌, ಅಪರ ಜಿಲ್ಲಾಧಿಕಾರಿ ಯೋಗೇಶ್‌ ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮಕ್ಕೂ ಮುನ್ನ ಇರ್ವೀನ್‌ ರಸ್ತೆಯ ಶ್ರೀ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದಿಂದ ಕಲಾತಂಡಗಳೊಂದಿಗೆ ಕಲಾಮಂದಿರದವರೆಗೆ ಬೆಳ್ಳಿರಥದಲ್ಲಿ ವಿಶ್ವಕರ್ಮ ಮೂರ್ತಿಯ ಮೆರವಣಿಗೆ ನಡೆಯಿತು.

ನಿರೂಪಕಿಗೆ ರೇಗಿದ ಶಾಸಕ ನಾಗೇಂದ್ರ: ನಿಗದಿಯಂತೆ ಮಧ್ಯಾಹ್ನ 12.30ಕ್ಕೆ ಆರಂಭವಾಗ ಬೇಕಿದ್ದ ಸಭಾ ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಜಿ.ಟಿ.ದೇವೇಗೌಡ, ತಮ್ಮ ಭಾಷಣದ ನಂತರ ಹೊರಟು ನಿಂತರಾದರೂ ಸಂಸದ ಪ್ರತಾಪ್‌ ಸಿಂಹ ಮನವಿ ಮೇರೆಗೆ ಕುಳಿತರು.

ಪ್ರತಾಪ್‌ ಸಿಂಹ ಚುಟುಕಾಗಿ ಭಾಷಣ ಮುಗಿಸಿದ ನಂತರ ಸಚಿವ ಜಿಟಿಡಿ, ಪ್ರತಾಪ್‌ ಸಿಂಹ ಹೊರಟು ನಿಂತರು. ಆಗ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್‌.ನಾಗೇಂದ್ರ ಮೈಕ್‌ ಬಳಿ ಬಂದು ನಿಂತು ಭಾಷಣ ಮಾಡಲು ನೋಡಿದರು. ಆದರೆ, ಕಾರ್ಯಕ್ರಮದ ನಿರೂಪಕಿ ಮುಖ್ಯಭಾಷಣ ಮುಗಿದ ಮೇಲೆ ಅಧ್ಯಕ್ಷತೆ ವಹಿಸಿರುವ ನೀವು ಭಾಷಣ ಮಾಡಬೇಕು ಎಂದಿದ್ದರಿಂದ ಸಿಟ್ಟಿಗೆದ್ದ ನಾಗೇಂದ್ರ,

ನಿರೂಪಕಿಯ ಮೇಲೆ ಯಾರಿವಳು, ಒಬ್ಬ ಶಾಸಕ ಎಂದರೆ ಏನು ತಿಳಿದುಕೊಂಡಿದ್ದೀಯಾ? ಉದ್ಧಟತನ ತೋರಿಯಾ ಎಂದು ರೇಗಾಡಿದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ಶಾಸಕರನ್ನು ಸಮಾಧಾನಪಡಿಸಿ ಭಾಷಣಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next