ಕೊಪ್ಪಳ: ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಬಿಜೆಪಿ ಅಧಿಕಾರ ಹಿಡಿಯಲು ಮಾಡಬಾರದ್ದನ್ನೆಲ್ಲ ಮಾಡಿದ್ದರಿಂದ ನಮಗೆ ಸೋಲಾಗಿದೆ. ಬಿಜೆಪಿಯಿಂದ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವೇ ಇಲ್ಲ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಹೋರಾಟ ಮಾಡಿದೆ. ನಮ್ಮ ಪಕ್ಷಕ್ಕೆ ಯಾವ ಜಾತಿಯಿಲ್ಲ. ಸೋಲು ಸಹಜ 1969ರಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ದೇವರಾಜ ಅರಸು ಸೇರಿ ಇತರೆ ನಾಯಕರು ರಾಜ್ಯ ಸುತ್ತಿ ಪಕ್ಷ ಸಂಘಟಿಸಿದರು. ಹಲವು ಬಾರಿ ಕಾಂಗ್ರೆಸ್ ಇಬ್ಭಾಗವಾಗಿದೆ. ಕಾಂಗ್ರೆಸ್‌ಗೆ ಜನರು ಮುಖ್ಯವೇ ಹೊರತು. ನಾಯಕರು ಮುಖ್ಯವಲ್ಲ. ಸೋಲು ಅನುಭವಿಸಿದಾಗ ಹಿಂಜೆರಿಯುವುದು. ಗೆದ್ದಾಗ ಅಧಿಕಾರಕ್ಕೆ ಬಡಿದಾಡುವುದು ಮುಖ್ಯವಲ್ಲ. ಜನರ ಕೆಲಸ ಮಾಡಿಕೊಡುವುದು ಮುಖ್ಯ ಎಂದರು.
ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನೇ ಬೇಡ ಅಂದರು. ಆದರೆ ವಿಪಕ್ಷಗಳು ನೆಹರೂ ಕುಟುಂಬದ ಬಗ್ಗೆ ಮಾತನಾಡುತ್ತಿವೆ. ನೆಹರು ಕುಟುಂಬ ದೇಶಕ್ಕೆ ದೊಡ್ಡ ತ್ಯಾಗ ಮಾಡಿದೆ. ನೆಹರು ಕುಟುಂಬದವರು ದೊಡ್ಡ ಶ್ರೀಮಂತವಾಗಿದ್ದರು. ಅವರು ಬ್ರಿಟೀಷರ ಗುಂಡಿಗೂ ಹೆದರದೆ ಹೋರಾಟ ಮಾಡಿದರು. ಕಾಂಗ್ರೆಸ್‌ನ ಹಲವು ನಾಯಕರು ಜೈಲು ಸೇರಿದ್ದಾರೆ. ಆದರೆ ಬಿಜೆಪಿಗೆ ಪೂಜೆ ಮಾಡಲು ಒಬ್ಬರೇ ನಾಯಕರಿಲ್ಲ. ವಲ್ಲಬಾಯಿ ಪಟೇಲ್ ನಮ್ಮ ನಾಯಕ ಎನ್ನುತ್ತಿದ್ದಾರೆ. ಈಗ ಅಧಿಕಾರಕ್ಕಾಗಿ ಏನೇನೋ ಮಾಡುತ್ತಿದ್ದಾರೆ. ನಾವು ಮಾಡಿದ್ದನ್ನು ಹೇಳಿಲ್ಲ, ದೇಶದ ಭದ್ರತೆ ವಿಷಯದಲ್ಲಿ ನಾವು ರಾಜಕೀಯ ಮಾಡಿಲ್ಲ. ಆದರೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದರು.
1974ರಲ್ಲಿ ಬಿಜೆಪಿಯ ಬೆರಳೆಣಿಕೆ ಶಾಸಕರಿದ್ದರು. ಈಗ ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಖ್ಯಾ ಬಲದ ಮೇಲೆ ಅಧಿಕಾರ ನಡೆಸುತ್ತಿದೆ. ಬಿಜೆಪಿ ನಾಯಕರು ನಮ್ಮ ಒಬ್ಬೊಬ್ಬ ಶಾಸಕರಿಗೆ 40-50 ಕೋಟಿ ಆಫರ್ ಕೊಡ್ತಿದ್ದಾರೆ. ಆ ಹಣ ಏಲ್ಲಿಂದ ಬಂತು? ಒಬ್ಬೊಬ್ಬರ ಮನೆಯಲ್ಲಿ ನೋಟು ಎಣಿಕೆ ಮಾಡುವ ಯಂತ್ರ ಸಿಕ್ಕಿದೆ ಎಂದು ಗುಡುಗಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರಿಗೆ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆ ಜಾರಿ ಮಾಡಿದೆ. ನಮ್ಮ ಯೋಜನೆಗಳು ಜನತೆಗೆ ಗೊತ್ತಾಗಬೇಕು. ಅಂತಹ ಯೋಜನೆಗಳನ್ನು ಕಾರ್ಯಕರ್ತರು ಜನತೆಗೆ ತಲುಪಿಸಬೇಕು. ಬೂತ್‌ಗಳಲ್ಲಿ ನಮಗೆ ಮತ ಬಂದ್ರೆ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಆದರೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೋಗುತ್ತಿಲ್ಲ. ನಾವು ಬರಿ ಚುನಾವಣೆ ಬಂದಾಗ ಅವರ ಮನೆಗೆ ತೆರಳಬಾರದು.
ಬಿ ಫಾರಂ ಸಿಕ್ಕಾಗ ಜನರೊಂದಿಗೆ ನಂಟು ಬೆಳೆಸಬಾರದು. ನಿರಂತರ ಅವರೊಂದಿಗೆ ಕೆಲಸ ಮಾಡಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಈ. ತುಕಾರಾಂ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಶಾಸಕರು ಸೋತಿದ್ದಾರೆ. ಸೋಲೆ ಗೆಲುವಿನ ಮೆಟ್ಟಿಲು ಎಂದು ಮುನ್ನುಗ್ಗಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಈ ಹಿಂದಿನ ಸರ್ಕಾರದಲ್ಲಿ ಹಲವು ಯೋಜನೆಗಳು ಬಂದಿವೆ. ಅವುಗಳ ಕುರಿತು ಜನತೆಗೆ ತಿಳಿಸೋಣ. ಮೈತ್ರಿ ಸರ್ಕಾರವೂ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಲಿದೆ. ಇತ್ತೀಚೆಗೆ ಎಲ್ಲ ಮಕ್ಕಳಿಗೂ ಲ್ಯಾಪ್‌ಟಾಪ್ ಕೊಡುವ ಕುರಿತು ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ ಎಂದರು. ರಾಜಶೇಖರ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಮಾಲತಿ ನಾಯಕ್, ವಿಶ್ವನಾಥರಡ್ಡಿ, ಇಂದಿರಾ ಬಾವಿಕಟ್ಟಿ, ಸುರೇಶ ಭೂಮರಡ್ಡಿ, ಜನಾರ್ದನ ಹುಲಿಗಿ, ಟಿ. ರತ್ನಾಕರ, ಕಾಟನ ಪಾಷಾ, ಬಾಲಚಂದ್ರನ್ ಇತರರಿದ್ದರು.