ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್ ಅನಾಗರಿಕ ವರ್ತನೆ ಮತ್ತು ಕಿರು ಕುಳ ನೀಡುತ್ತಿದ್ದು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮಂಗಳವಾರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ನಿರ್ಧರಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ, ಜೆಡಿಎಸ್ ಮುಖಂಡರಾದ ಟಿ.ಎನ್.ಪ್ರಭುದೇವ್, ಆರ್. ಕೆಂಪರಾಜು, ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ್, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇ ಗೌಡ, ಡಾ.ರಾಜ್ ಕುಮಾರ್, ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂತಿ ಮಾತನಾಡಿ, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್ ನಾಗರಿಕರ ಮೇಲೆ ಹಲ್ಲೆ ಮಾಡುವುದು, ಬೂಟು ಕಾಲಿನಿಂದ ಒದೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದಾರೆಂದು ದೂರಿದರು.
ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದ ಮಗ್ಗದ ಕಾರ್ಮಿಕರನ್ನು ಠಾಣೆಗೆ ಕರೆ ದೊಯ್ದು ಮಾನಸಿಕ ಹಿಂಸೆ ನೀಡಿದ್ದಾರೆ. ಬೆಳಕಿಗೆ ಬಾರದ ಇಂತಹ ಇನ್ನು ಹಲವು ಪ್ರಕರಣಗಳು ಇವೆ. ಸಬ್‌ಇನ್ಸ್‌ಪೆಕ್ಟರ್ ಸೋಮ ಶೇಖರ್ ನಾಗರಿಕರೊಂದಿಗೆ ಪದೇ ಪದೆ ಸಂಘರ್ಷಕ್ಕಿಳಿಯುತ್ತಿದ್ದಾರೆ. ವಿಚಾರಣೆ ಮಾಡಿ ಇಲ್ಲಿಂದ ವರ್ಗಾವಣೆ ಮಾಡಿ ನಗರದ ನಾಗರಿಕರಿಗೆ ನೆಮ್ಮದಿ ನೀಡಬೇಕೆಂದು ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ರಾವ್, ಖಜಾಂಚಿ ಡಿ.ಎನ್.ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ವಿ.ಪರಮೇಶ್, ನಗರ ಘಟಕದ ಉಪಾಧ್ಯಕ್ಷ ಕೆ.ಕೆ. ವೆಂಕಟೇಶ್, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜಿ.ಆರ್.ರಮೇಶ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಂಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಹನುಮಂತರೆಡ್ಡಿ, ಕಾರ್ಯನಿರತ ಪತ್ರಕರ್ತ ಸಂಘ ಎಂ.ದೇವರಾಜ್, ವಿದ್ಯುತ್ ಚಾಲಿತ ನೇಕಾರರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ , ಅಖೀಲ ಭಾರತ ವಕೀಲರ ಸಂಘ ಎಸ್.ರುದ್ರಾರಾಧ್ಯ, ಸಿಐಟಿಯು ತಾಲೂಕು ಅಧ್ಯಕ್ಷ ರೇಣುಕಾರಾಧ್ಯ, ದಸಂಸ ಮುಖಂಡ ರಾಜುಸಣ್ಣಕ್ಕಿ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇ ಗೌಡ ಬಣ) ತಾಲೂಕು ಅಧ್ಯಕ್ಷ ಆರಾಧ್ಯ, ಕನ್ನಡ ಜಾಗೃತಿ ವೇದಿಕೆ ಎಚ್.ಎಸ್. ವೆಂಕಟೇಶ್, ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಬಷೀರ್,ಪು. ಮಹೇಶ್ ಇದ್ದರು.
ಕೋವಿಡ್ 19 ಸೋಂಕು ತಡೆಗಟ್ಟಲು ಸರ್ಕಾರದ ಆದೇಶದಂತೆ ಕೆಲಸ ಮಾಡಿದ್ದೇನೆ. ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕಡ್ಡಿಗಳನ್ನು ಅಡ್ಡಿಗಟ್ಟಿ ಜನ ಸಂಚಾರ ನಿರ್ಬಂಧಿಸಿದ್ದೇ ತಪ್ಪು ಎಂದು ಮಾತನಾಡಿದವರ ವಿರುದ್ಧ ಜೋರಾಗಿ ಮಾತನಾಡದಿದ್ದರೆ ಕೆಲಸ ಮಾಡುವುದಾದರೂ ಹೇಗೆ?. ಮಂಗಳವಾರ ಸಂಜೆ ಸಂಘಟನೆ ಮುಖಂಡರ ಸಭೆ ಕರೆದು ನಾವು ಮಾಡುತ್ತಿರುವ ಕೆಲಸದ ರೀತಿಯ ಬಗ್ಗೆ ವಿವರಣೆ ನೀಡಿದ್ದೇನೆ. ಯಾರೊಂದಿಗೂ ಕಾನೂನು ವ್ಯಾಪ್ತಿ ಮೀರಿ ನಡೆದುಕೊಂಡಿಲ್ಲ.
-ಸೋಮಶೇಖರ್, ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್