ತಿಪಟೂರು:ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿಗೆ ನೀರು ಮೀಸಲಿಡಲು ಆಗ್ರಹಿಸಿ ಹಾಗೂ ಭೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ರೈತ ಮತ್ತು ಜನಪರ ಸಂಘಟನೆಗಳು ನಿರ್ಧರಿಸಿವೆ.
ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಎಪಿಎಂಸಿಯ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಹೋರಾಟದ ನಿರ್ಣಯ ಕೈಗೊಳ್ಳಲಾಯಿತು.
ನೀರಿನ ಸೌಲಭ್ಯ ಸಿಗುತ್ತಿಲ್ಲ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ತುಮಕೂರು ಜಿಲ್ಲೆಯಲ್ಲಿ ಕಾಮಗಾರಿ ಆರಂಭಕ್ಕೆ ಪ್ರಾಥಮಿಕ ಹಂತದಲ್ಲಿ ನೋಟಿಸ್ ಜಾರಿ ಹಾಗೂ ಸರ್ವೆ ಕಾರ್ಯ ನಡೆ ಯುತ್ತಿದೆ. ಆದರೆ ಭೂಮಿ ಕಳೆದುಕೊಳ್ಳುವ ರೈತರ ಅಹವಾಲನ್ನು ಸರ್ಕಾರ ನಿರ್ಲಕ್ಷಿಸಿದೆ. ಎತ್ತಿನಹೊಳೆ ಮುಖ್ಯ ಕಾಲುವೆ ಹಾದು ಹೋಗುತ್ತಿದ್ದರೂ ತೀವ್ರ ಬರ ಪ್ರದೇಶದ ತಿಪಟೂರಿಗೆ ಯೋಜನೆಯಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಮುಖಂಡರು ಆರೋಪಿಸಿದರು.
ಸೂಕ್ತವಾಗಿ ಸ್ಪಂದಿಸದ ಜಿಲ್ಲಾಡಳಿತ: ಎತ್ತಿನ ಹೊಳೆ ಯೋಜನೆಯಲ್ಲಿ ತಾಲೂಕಿಗೆ ಅಗತ್ಯ ಹಂಚಿಕೆ ಆಗಬೇಕು. ಇಲ್ಲಿನ ಕರೆಗಳನ್ನು ತುಂಬಿಸಬೇಕು. ಯೋಜನೆಯ ಸಂತ್ರಸ್ತ ರೈತರ ಭೂಮಿ, ಮನೆ, ನಿವೇಶನಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಈ ಹಿಂದೆ ಬೃಹತ್ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾ ಡಳಿತ ಸ್ಪಂದಿಸಿಲ್ಲವೆಂದು ದೂರಿದರು.
ಕಾಲ್ನಡಿಗೆ ಜಾಥಾ: ಹಾಗಾಗಿ ಹೋರಾಟ ತೀರ್ವ ಗೊಳಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು. ಹೋರಾಟದ ಭಾಗವಾಗಿ ಪ್ರತಿ ಗ್ರಾಮಗಳಲ್ಲೂ ಹೋರಾಟ ಸಮಿತಿಗಳ ರಚನೆ, ಪಂಚಾಯಿತಿವಾರು ಗ್ರಾಮಸಭೆ ನಡೆಸಿ ಜನರನ್ನು ಜಾಗೃತಗೊಳಿಸುವುದು. ಕೊನೆಹಳ್ಳಿಯಿಂದ ಕೆ.ಬಿ. ಕ್ರಾಸ್‌ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಯಿತು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ದೇವರಾಜ್, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವ ರಾಜ್, ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಆನಂದ, ಸಂಚಾಲಕ ಭೈರನಾಯಕನ ಹಳ್ಳಿ ಲೋಕೇಶ್, ಯೋಜನಾ ಸಂತ್ರಸ್ತರ ಸಮಿತಿ ಮನೋಹರ್ ಪಾಟೀಲ್, ಸೌಹಾರ್ದ ವೇದಿಕೆಯ ಅಲ್ಲಾ ಬಕಾಶ್, ಜನ ಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿಬಿ ಶಶಿಧರ್, ಹೋರಾಟಗಾರರಾದ ವಿಜಯ ಕುಮಾರ್, ಸಿದ್ದು, ಕೋದಂಡರಾಮಯ್ಯ, ಚಿಕ್ಕ ಬಿದರೆ ರಾಜಶೇಖರಪ್ಪ, ತಿಮ್ಲಾಪುರ ಭೈರೇಶ್, ಬೊಮ್ಲಾಪುರ ದಕ್ಷಿಣಮೂರ್ತಿ, ಉಜ್ಜಜ್ಜಿ ರಾಜಣ್ಣ, ನೀಲಕಂಠ ಸ್ವಾಮಿ ಸೇರಿದಂತೆ ನಾಗತಿಹಳ್ಳಿ, ಮಾದಿಹಳ್ಳಿ, ಕಲ್ಲೇಗೌಡನ ಪಾಳ್ಯ, ಭೈರನಾಯಕನ ಹಳ್ಳಿ, ಹಳೇಪಾಳ್ಯ, ಕಂಚೇಘಟ್ಟ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.