ಮಂಗಳೂರು: ಸಾರ್ವಜನಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳನ್ನು ಪ್ರಾರಂಭಿಸುವುದು ಸುಲಭದ ಕೆಲಸ. ಆದರೆ ಅದನ್ನು ಬೆಳೆಸುವಾಗ ಬರುವಂತಹ ಕಿರುಕುಳ ಅಡಚಣೆಗಳನ್ನು ಸವಾಲಾಗಿ ಎದುರಿಸಲು ಸಂಘಟನೆಗಳ ಪ್ರಾಮಾಣಿಕ ಸೇವೆ ಅತ್ಯಗತ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.
ಅವರು ಪಾವಂಜೆಯ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕ್ಷೇತ್ರದ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟದ ಉದ್ಘಾಟನೆಯಲ್ಲಿ ಮಾತನಾಡಿದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಸತೀಶ್ ಪಟ್ಲ ಮಾತನಾಡಿ, ಯಕ್ಷಗಾನಕ್ಕೆ ಸಂಬಂಧಪಟ್ಟ ಮತ್ತು ಕಲಾವಿದರಿಗೆ ಬೆಳೆಯುವ ಅವಕಾಶ ಮಾಡುವ ಯಕ್ಷಗಾನ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಒಕ್ಕೂಟ, ಸಂಸ್ಥೆ ಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ “ಮಗನ ಆಟ ಅಪ್ಪನ ಪೇಚಾಟ’ ಎಂಬ ಯಕ್ಷಗಾನ ಪ್ರದರ್ಶನ ಯೂ ಟ್ಯೂಬ್ ಮೂಲಕ ಪ್ರಸಾರವಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ವಕೀಲ ಅರುಣ್ ಬಂಗೇರ, ಒಕ್ಕೂಟದ ಗೌರವ ಸಲಹೆಗಾರ ಸೀತಾರಾಂ ಕುಮಾರ್ ಕಟೀಲು, ಅಖೀಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಮೂಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಹಾಸ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ದಿನೇಶ್ ಕೊಡಪದವು ಸ್ವಾಗತಿಸಿ, ಕಾರ್ಯದರ್ಶಿ ಕಡಬ ದಿನೇಶ್ ರೈ ವಂದಿಸಿದರು. ಸಂಚಾಲಕ ಪ್ರಶಾಂತ್ ಸಿ. ಕಾವೂರು ನಿರೂಪಿಸಿದರು.