Advertisement

ಜೆಡಿಎಸ್‌ಗೆ ಸಂಘಟನೆ ಸವಾಲು!: ಪ್ರತಿಪಕ್ಷಗಳ ತಂತ್ರಗಾರಿಕೆಯಿಂದ ಆತಂಕಕ್ಕೀಡಾದ ದಳ ಪಡೆ

03:56 PM Aug 20, 2022 | Team Udayavani |

ರಾಯಚೂರು: ಹಿಂದಿನ ಕಾಂಗ್ರೆಸ್‌ ಶಾಸಕರ ವಿರೋಧಿ ಅಲೆ ಜತೆಗೆ ಸತತ ಸೋಲಿನ ಅನುಕಂಪದಡಿ ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕರನ್ನು ಮಾನ್ವಿ ಕ್ಷೇತ್ರದ ಮತದಾರ ಗೆಲುವಿನ ದಡ ಸೇರಿಸಿದ್ದ. ಆದರೆ, ಒಂದೇ ಅವಧಿಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ ಹಾದಿ ಮತ್ತಷ್ಟು ಜಟಿಲಗೊಂಡಿದ್ದು, ಪಕ್ಷ ಸಂಘಟನೆ ಸವಾಲು ಎದುರಾಗಿದೆ.

Advertisement

ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಲು ಕೆಲ ನಾಯಕರು ಆಸಕ್ತಿ ತೋರುತ್ತಿರುವುದು ಒಂದೆಡೆಯಾದರೆ, ಕ್ಷೇತ್ರದಲ್ಲೇ ಕಾಂಗ್ರೆಸ್‌, ಬಿಜೆಪಿ ತಮ್ಮ ಬೇರು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್‌ ಗೆ ಟಕ್ಕರ್‌ ನೀಡುತ್ತಿರುವುದು ಮತ್ತೂಂದೆಡೆ. ಈಚೆಗೆ ದೇವದುರ್ಗ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕರು ಮಾನ್ವಿಯಲ್ಲಿ ತಮ್ಮ ಜನ್ಮದಿನವನ್ನು ಭಾರೀ ಪ್ರಮಾಣದಲ್ಲಿ ಆಚರಿಸಿಕೊಂಡಿದ್ದರು. ಇದು ಸಾಕಷ್ಟು ಚರ್ಚೆಗೀಡು ಮಾಡಿದ್ದು, ಬಿಜೆಪಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಂದೇ ವ್ಯಾಖ್ಯಾನಿಸಲಾಯಿತು. ಅದಕ್ಕೆ ಪ್ರತ್ಯುತ್ತರ ನೀಡಲೆಂದೇ ಇಷ್ಟು ದಿನ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ತಮ್ಮ ಜನ್ಮದಿನವನ್ನೂ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರತಿಷ್ಠೆ ಎನ್ನುವಂತೆ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಅನೇಕ ಮುಖಂಡರನ್ನು ಕರೆಯಿಸಿ ಜನರನ್ನು ಸೆಳೆಯುವ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ನಿರೀಕ್ಷಿತ ಮಟ್ಟದಲ್ಲಿ ಮತ ಪಡೆಯದಿರುವುದು ಹಾಗೂ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿರುವುದು ಜೆಡಿಎಸ್‌ಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಈ ಬಾರಿ ಕ್ಷೇತ್ರದಲ್ಲಿ ಚಿತ್ರಣ ಬದಲಾಗಿದೆ.

ಬಿಜೆಪಿಯಿಂದ ವಲಸಿಗರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಕಾಂಗ್ರೆಸ್‌ ಕೂಡ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಅದರ ಜತೆಗೆ ಶಾಸಕರ ವಿರೋಧಿ ಅಲೆ ಕೂಡ ಹೆಚ್ಚುತ್ತಿದ್ದು, ಜೆಡಿಎಸ್‌ ಹಾದಿ ಮತ್ತಷ್ಟು ಕಷ್ಟವಾದರೂ ಅಚ್ಚರಿಪಡುವಂತಿಲ್ಲ. ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಲ್ಲಿ ಜೆಡಿಎಸ್‌ ಬಲ ಕುಗ್ಗಿರುವುದು ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಸಾಬೀತಾಗಿದೆ. ಮಾನ್ವಿಯಲ್ಲಿ ಮತ್ತೂಮ್ಮೆ ಅಂಥ ಸನ್ನಿವೇಶ ಏರ್ಪಟ್ಟಿದ್ದೇ ಆದರೆ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಬಹುದೇ ವಿನಃ ಜೆಡಿಎಸ್‌ ಪ್ರಾಬಲ್ಯ ಸಾಧಿಸುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

ಬಲ ಪ್ರದರ್ಶನ ಮಾಡಿದ್ದು ಯಾಕೆ?: ಮಾನ್ವಿ ಕ್ಷೇತ್ರದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಜನ್ಮದಿನಾಚರಣೆ ಮಾಡಿಕೊಳ್ಳುವ ಮೂಲಕ ಅದ್ಧೂರಿ ಕಾರ್ಯಕ್ರಮ ನಡೆಸಿದ್ದರು. ಅದರ ಬೆನ್ನಲ್ಲೇ ಶಾಸಕ ರಾಜಾ ವೆಂಕಟಪ್ಪ ನಾಯಕ ಇಂಥ ಕಾರ್ಯಕ್ರಮ ಆಯೋಜಿಸುವ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಆತಂಕದಿಂದಲೇ ಜೆಡಿಎಸ್‌ ಇಂಥ ಹೆಜ್ಜೆ ಇಟ್ಟಿದೆಯಾ ಎಂಬ ಚರ್ಚೆಗಳು ಶುರುವಾಗಿದೆ.

Advertisement

ಜೆಡಿಎಸ್‌ಗೆ ಪದೇ-ಪದೇ ಹಿನ್ನಡೆ

ಕೆಲ ದಿನಗಳ ಹಿಂದೆ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರ ವ್ಯಾಪ್ತಿಯ ಮಾನ್ವಿ ಪುರಸಭೆ ಹಾಗೂ ಸಿರವಾರ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್‌ ಹಿನ್ನಡೆ ಅನುಭವಿಸಿತ್ತು. ಕ್ಷೇತ್ರದಲ್ಲಿ ಜೆಡಿಎಸ್‌ ಅಧಿಕಾರದಲ್ಲಿ ಇದ್ದಾಗ್ಯೂ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿತ್ತು. ಸಿರವಾರ ಪಟ್ಟಣ ಪಂಚಾಯಿತಿಯಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್‌ 9, ಬಿಜೆಪಿ 6 ಸ್ಥಾನಗಳಲ್ಲಿ ಗೆಲುವು ಕಂಡರೆ ಜೆಡಿಎಸ್‌ ಕೇವಲ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎರಡು ಪಕ್ಷೇತರರು ಗೆಲುವು ಸಾಧಿಸಿದ್ದರು. ಮಾನ್ವಿ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷೇತರರ ನೆರವಿನೊಂದಿಗೆ ಚುಕ್ಕಾಣಿ ಹಿಡಿಯುವ ಮೂಲಕ ಅಲ್ಲೂ ಜೆಡಿಎಸ್‌ಗೆ ಮುಖಭಂಗವಾಗಿತ್ತು.

ಜೆಡಿಎಸ್‌ಗೆ ಜಿಲ್ಲೆಯಲ್ಲಿ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಆತಂಕ ಎದುರಾಗಿದೆ. ಇದರಿಂದ ಜನರನ್ನು ಸಂಘಟಿಸುವ ಪ್ರಯತ್ನ ನಡೆಸಲು ಪಕ್ಷ ಮುಂದಾಗಿದೆ. ಜಿಲ್ಲೆಯಲ್ಲಿ ನಾಯಕ ಜನ್ಮ ದಿನಾಚರಣೆಗಳು ಜೋರಾಗಿ ನಡೆಯುತ್ತಿದ್ದು, ನಾಯಕರು ಜನರ ಓಲೈಕೆ ತಂತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. -ಆರ್‌.ಮಾನಸಯ್ಯ, ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next