ಕಾಪು: ಸಮಾಜದ ಅಭಿವೃದ್ಧಿಗೆ ದುಡ್ಡೇ ಮುಖ್ಯವಲ್ಲ. ನಮ್ಮಲ್ಲಿರುವ ಸಂಘಟನ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸಮಾಜದ ಅಭಿವೃದ್ಧಿಗಾಗಿ ಮೊದಲು ನಾವು ಸಂಘಟಿತರಾಗಬೇಕು. ನಾವು ಸಂಘಟಿತರಾಗಿ ಎಲ್ಲ ಪಕ್ಷದವರೊಂದಿಗೂ ಉತ್ತಮ ರೀತಿಯ ಸಂಬಂಧವನ್ನು ಇರಿಸಿಕೊಂಡು ಬಂದಲ್ಲಿ ಸಮಾಜದ ಅಭಿವೃದ್ಧಿಗೆ ಎಲ್ಲ ಮೂಲಗಳಿಂದಲೂ ಸವಲತ್ತು-ಸಹಕಾರಗಳನ್ನು ಪಡೆಯಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಜಿ. ರಘು ಆಚಾರ್ ಹೇಳಿದರು.
ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ವಾರ್ಷಿಕೋತ್ಸವದ ಅಂಗವಾಗಿ ಸೆ. 3ರಂದು ನಡೆದ ಸಾಮೂಹಿಕ ಚಂಡಿಕಾ ಹೋಮ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣದಲ್ಲಿ ಯಾರೂ ಶಾಶ್ವತರಲ್ಲ. ಎಲ್ಲವೂ ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿದ್ದಾಗ ನಡೆಸುವ ಸೇವಾ ಕಾರ್ಯಗಳು ಮಾತ್ರ ಜನರ ಮನಃಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ರಾಜಕಾರಣವನ್ನು ಸೇವೆಗಾಗಿ ಮೀಸಲಿಡಬೇಕೇ ಹೊರತು, ಅದನ್ನೇ ಬದುಕನ್ನಾಗಿಸಿ ಕೊಳ್ಳಬಾರದು. ನಾವು ಪ್ರಾಮಾಣಿಕರಾಗಿದ್ದಲ್ಲಿ ನಮ್ಮನ್ನು ಎಲ್ಲರೂ ನಂಬುತ್ತಾರೆ. ಜನ ನಂಬುವ ರೀತಿಯಲ್ಲಿ ನಾವು ಮುನ್ನಡೆಯಬೇಕಿದೆ ಎಂದರು.
ವೇ| ಮೂ| ಬ್ರಹ್ಮಶ್ರೀ ಪುರೋಹಿತ ವಿಶ್ವನಾಥ ಆಚಾರ್ಯ ಉದ್ಯಾವರ ಮತ್ತು ಪುರೋಹಿತ ಪಿ. ಕೆ. ಶ್ರೀಧರಾಚಾರ್ಯ ಪಾದೂರು ಅವರ ಆಚಾರ್ಯತ್ವ ಹಾಗೂ ಇನ್ನಿತರ ವೈದಿಕ ಮಾರ್ಗದರ್ಶನದೊಂದಿಗೆ ದಾನಿಗಳ ನೆರವಿನಿಂದ ಸಾಮೂಹಿಕ ಚಂಡಿಕಾ ಹೋಮ ಮತ್ತು ಸಾಮೂಹಿಕ ವಿವಾಹ ಸಮಾರಂಭ ನೆರವೇರಿತು.
ಕಟಪಾಡಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಆಚಾರ್ಯ ಪಡು ಕುತ್ಯಾರು, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಬಿ. ಪಿ. ಸತ್ಯವತಿ, ಸ್ವರ್ಣೋದ್ಯಮಿ ಧನಂಜಯ ಪಾಲ್ಕೆ, ಮಾಜಿ ಆಡಳಿತ ಮೊಕ್ತೇಸರ ವಿಶ್ವನಾಥ ಆಚಾರ್ಯ ಕರಂಬಳ್ಳಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು. ಕೆ. ಎಸ್. ಸೀತಾರಾಮ್ ಆಚಾರ್ಯ, ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಗಣ್ಯರಾದ ಕೆ. ವಿಶ್ವನಾಥ್ ರಾವ್, ಕೃಷ್ಣ ವಿ. ಆಚಾರ್ಯ ಮುಂಬೈ, ಪ್ರಕಾಶ್ ಆಚಾರ್ಯ ಕಾರ್ಕಳ, ಶೇಖರ್ ಆಚಾರ್ಯ ಕಾಪು, ನಾಗರಾಜ್ ಆಚಾರ್ಯ ಅಲೆವೂರು, ಪ್ರಸಾದ್ ಅತ್ತಾವರ, ಗೋಪಾಲ್ ಆಚಾರ್ಯ ಪಾಣೆ ಮಂಗಳೂರು, ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಕೇಶವ ಆಚಾರ್ಯ ಸಗ್ರಿ, ಕಟಪಾಡಿ ಕಾಳಿ ಕಾಂಬಾ ದೇವಸ್ಥಾನದ ತಂತ್ರಿ ವಿಶ್ವನಾಥ ಪುರೋಹಿತ್ ಮುಖ್ಯ ಅತಿಥಿಗಳಾಗಿದ್ದರು.
ಸಮಾಜದ ಸಾಧಕ ಗಣ್ಯರಾದ ಬಿ. ಅನಂತಯ್ಯ ಆಚಾರ್ಯ ಮಣಿಪಾಲ, ಎಂ. ಡಿ. ಶ್ಯಾಮರಾಯ ಆಚಾರ್ಯ ಬಂಟ್ವಾಳ, ಡಿ. ಪದ್ಮನಾಭ ಕುಮಾರ್, ರಾಜಗೋಪಾಲ ಆಚಾರ್ಯ ಕೋಟೇಶ್ವರ, ಪಿ. ಎನ್. ಆಚಾರ್ಯ ಉಡುಪಿ, ಹರೀಶ್ ಆಚಾರ್ಯ ಕಲ್ಲಮುಂಡ್ಕೂರು, ಸೌಮ್ಯಾ ಜಿ. ಆಚಾರ್ಯ ಹಿರೇಬೆಟ್ಟು ಅವರನ್ನು ಸಮ್ಮಾನಿಸಲಾಯಿತು. ವಿಶ್ವಕರ್ಮ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ವೈ. ಗಣೇಶ ಆಚಾರ್ಯ ಉಚ್ಚಿಲ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜೇಶ್ ಬಿಳಿಯಾರು ವಂದಿಸಿದರು. ಎನ್. ಆರ್. ದಾಮೋದರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
13 ಜೋಡಿ; 7 ಸಾವಿರಕ್ಕೂ ಅಧಿಕ ಮಂದಿ ಭಾಗಿ
ವಿಶ್ವಕರ್ಮ ಯುವ ಸಂಘಟನೆಯ ಮೂಲಕ ಎರಡು ವರ್ಷಗಳ ಹಿಂದೆ ನಡೆಸಿದ ವಧು-ವರರ ಸಮಾವೇಶದ ಮುಂದುವರಿದ ಭಾಗವಾಗಿ ಆಯೋಜಿಸಲಾಗದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 13 ಜೋಡಿ ಸಪ್ತಪದಿಯನ್ನು ತುಳಿದು ಸತಿ-ಪತಿಗಳಾದರು. ವಧುವಿಗೆ ಚಿನ್ನದ ತಾಳಿಗುಂಡು, ಬೆಳ್ಳಿ ಕರಿಮಣಿ ಸರ, ಕಾಲುಂಗುರ, ಸೀರೆ ಮತ್ತು ರವಿಕೆ, ವರನಿಗೆ ಪಂಚೆ, ಶಾಲು, ಪೇಟ, ಬಾಸಿಂಗ ಸಹಿತ ವಿವಿಧ ಕೊಡುಗೆಗಳನ್ನು ನೀಡಲಾಯಿತು. ಏಳು ಸಾವಿರಕ್ಕೂ ಅಧಿಕ ಮಂದಿ ಅನ್ನಸಂರ್ತಣೆ ಸ್ವೀಕರಿಸಿದರು.