ಜಮಖಂಡಿ: ಸರಕಾರದ ಎಲ್ಲ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬೇಕಾದರೆ ಸಂಘಟನೆ ಅವಶ್ಯವಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ನಗರದ ಬಸವಭವನದಲ್ಲಿ ತಾಲೂಕು ಮಟ್ಟದ ವಿಕಲಚೇತನ ನೌಕರರ ಸಭೆ ಅಧ್ಯಕ್ಷತೆ ವಹಿಸಿ ಮಾತಾಡಿದ ಅವರು, ಸರಕಾರದಿಂದ ಸಿಗುವ ಸೌಲಭ್ಯವನ್ನು ಸುಲಭವಾಗಿ ಪಡೆಯಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಸಂಘಟನೆ ಅಗತ್ಯವಿದೆ ಎಂದರು. ಸಂಘಟನೆಯಿಲ್ಲದೇ ಸುಲಭವಾಗಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಶಿಕ್ಷಕರ ವರ್ಗಾವಣೆ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಪದೇ ಪದೇ ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣ ಪತ್ರ ತರಲು ಸೂಚಿಸುತ್ತಿದ್ದು, ವಿಕಲಚೇತನ ಶಿಕ್ಷಕರು ನೇಮಕಾತಿಯ ಪೂರ್ವದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾದ ಮೇಲೆ ನೇಮಕಾತಿ ಆದೇಶ ನೀಡುತ್ತಿದ್ದು ಪ್ರಮಾಣ ಪತ್ರ ಕೇಳುವ ಕ್ರಮ ಕೈಬಿಡಬೇಕು ಎಂದರು.
ಒಂದು ಶಾಲೆಯಲ್ಲಿ 3 ವರ್ಷ ಕೆಲಸ ನಿರ್ವಹಿಸಬೇಕೆಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕೆಂಬ ಅನೇಕ ಬೇಡಿಕೆಗಳ ಬಗ್ಗೆ ಶೀಘ್ರದಲ್ಲೆ ಶಿಕ್ಷಣ ಸಚಿವರಿಗೆ ಮನವಿ ಪತ್ರ ನೀಡಲಾಗುತ್ತದೆ. ವಿಕಲಚೇತನರು ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಅಂಗವೈಕಲ್ಯತೆಯನ್ನು ಮಟ್ಟಿ ನಿಂತು ಅನೇಕ ಸಾಧನೆಯನ್ನು ಮಾಡಿದಪಂಡಿತ ಪುಟ್ಟರಾಜ ಗವಾಯಿ ಸಹಿತ ಹಲವಾರು ವ್ಯಕ್ತಿಗಳು ಸಾಧನೆ ಮಾಡಿದ್ದಾರೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನವರ ಮಾತನಾಡಿ, ವಿಕಲಚೇತನರ ಬೇಡಿಕೆಗಳು, ಸಮಸ್ಯೆಗಳ ಕುರಿತು ಸಂಘ ಉತ್ತಮ ರೀತಿಯಲ್ಲಿ ಕಾರ್ಯ ಮಾಡುವುದರ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿದೆ. ವಿಕಲಚೇತನ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳ ಬಗ್ಗೆ ಸರಕಾರ ಹೆಚ್ಚು ಗಮನ ಹರಿಸಿ ಈಡೇರಿಸಬೇಕಾಗಿದೆ. ವಿಕಲಚೇತನರ ನೌಕರರಲ್ಲಿ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ವಿಕಲಚೇತನ ನೌಕರರ ಬೇಡಿಕೆಗಳ ಈಡೇರಿಕೆಗೆ ಹಮ್ಮಿಕೊಳ್ಳುವ ಹೋರಾಟಕ್ಕೆ ಹಾಗೂ ಕಾರ್ಯಕ್ರಮಗಳಿಗೆ ಶಿಕ್ಷಕರ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಒತ್ತಾಯ ಮಾಡಲಾಗುವದು ಎಂದರು.
ವಿಕಲಚೇತನ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ ಲಮಾಣಿ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಿ.ಬಿ. ಅಜ್ಜನವರ ಮಾತನಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಹೂಗಾರ, ಸಿ.ಜಿ. ಕಡಕೋಳ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ಎಚ್. ಗುಬಚೆಟ್ಟಿ, ಶ್ರೀಶೈಲ ಅರಕೇರಿ, ಪಿ.ಎಂ. ಹಿರೇಹಾಳ, ವಿಕಲಚೇತನ ನೌಕರರ ಸಂಘದ ವಿಭಾಗೀಯ ಸಹ ಕಾರ್ಯದರ್ಶಿ ಚಂದ್ರಪ್ಪ ಸಿದಗೊಂಡ, ಚಂದ್ರಕಲಾ, ಸದಾಶಿವ ನಾಟೀಕಾರ, ಸತ್ಯಪ್ಪ, ರಮೇಶ ದೇಸಾಯಿ, ಆರ್.ಎ. ಪಾಟೀಲ, ಎಚ್ .ಎ. ಗಲಗಲಿ ಸಹಿತ ಹಲವರು ಇದ್ದರು.
ಸಂಘದ ನಿರ್ದೇಶಕ ಎಸ್.ಜಿ. ಔರಸಂಗ್ ಸ್ವಾಗತಿಸಿದರು. ವಿಕಲಚೇತನ ನೌಕರರ ಸಂಘದ ನಿರ್ದೇಶಕ ಸಂತೋಷ ಮೂಡಗಿ ನಿರೂಪಿಸಿದರು. ಹುಸೇನಸಾಬ ಹನಗಂಡಿ ವಂದಿಸಿದರು.