Advertisement

ಸಮಾಜದಲ್ಲಿರಲಿ ಸಂಘಟನೆ-ಶಿಸ್ತು: ಪ್ರಮೋದ್‌ ಮಧ್ವರಾಜ್‌

11:20 AM Jul 04, 2017 | Team Udayavani |

ಕಂಪ್ಲಿ: ಸಮಾಜದಲ್ಲಿ ಒಗ್ಗಟ್ಟು, ಶಿಸ್ತು ಇರದಿದ್ದರೆ ಸಮಾಜಗಳು ಹಾಳಾಗುತ್ತವೆ. ಪಕ್ಷ ಭೇದ, ನಂಬಿಕೆ, ಸಿದ್ದಾಂತ ಬೇರೆ ಬೇರೆಯಾದರೂ ಸಮಾಜದಲ್ಲಿ ಸಂಘಟನೆ, ಒಗ್ಗಟ್ಟು ಮತ್ತು ಶಿಸ್ತು ಇರಬೇಕು ಎಂದು ಮೀನುಗಾರಿಕೆ ಹಾಗೂ ಯುವ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಪಟ್ಟಣದಲ್ಲಿ ಕಂಪ್ಲಿ ಫಿರ್ಕಾ ಗಂಗಾಮತ ಸಂಘದ ಆಶ್ರಯದಲ್ಲಿ ಜರುಗಿದ ಗಂಗಾ ಜಯಂತಿ ಪ್ರಯುಕ್ತ ಸರ್ಕಾರವು ಘೋಷಣೆ ಮಾಡಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಸರ್ಕಾರಕ್ಕೆ ಅಭಿನಂದನೆ ಮತ್ತು ಕಂಪ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಗಂಗೋತ್ರಿ ಸಮುದಾಯ ಭವನ ಅಡಿಗಲ್ಲು
ಸಮಾರಂಭದಲ್ಲಿ ಅವರು ಮಾತನಾಡಿದರು. ಗಂಗಾಮತ ಸಮಾಜವು ಇತರೆ ಸಮಾಜಗಳಿಗೆ ಮಾದರಿ ಸಮಾಜವಾಗಿ ಅಭಿವೃದ್ಧಿಗೊಳ್ಳಬೇಕು. ಶಿಸ್ತು ಮತ್ತು ಸಂಘಟನೆ ಸಮಾಜದ ಮೂಲ ಉದ್ದೇಶವಾಗಲಿ. ವಿವಿಧ 36 ಉಪಜಾತಿಗಳಲ್ಲಿ
ಗುರುತಿಸಿಕೊಂಡಿರುವ ಗಂಗಾಮತ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅನೇಕ ಪ್ರಯತ್ನಗಳಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಮತ್ತೆ ಪರಿಶಿಷ್ಟ ವರ್ಗಕ್ಕೆ 
ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. 

ಗಂಗಾಮತ ಸಮಾಜದ ಅಭಿವೃದ್ಧಿಗೆ ಸಮಾಜದ ಕುಲಕಸುಬಾದ ಮೀನುಗಾರಿಕೆಗಾಗಿ ಬಾಗಲಕೋಟೆಯಲ್ಲಿ ಮೀನುಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು. 2, 20 ಕೋಟಿ ರೂ. ಮಂಜೂರಾಗಿದ್ದು, ಕಟ್ಟಡ 
ಆರಂಭಿಸಿ, ಈ ಕೇಂದ್ರಕ್ಕೆ ಅಂಬಿಗರ ಚೌಡಯ್ಯ ಮೀನುಗಾರಿಕಾ ಸಂಶೋಧನಾ ಕೇಂದ್ರ ಎಂದು ನಾಮಕರಣ ಮಾಡಲಾಗಿದೆ ಎಂದರು.

ಪಟ್ಟಣಕ್ಕೆ ಮೀನುಗಾರಿಕೆ ಇಲಾಖೆಯಿಂದ 100 ಮನೆಗಳನ್ನು ಪ್ರಥಮ ಹಂತದಲ್ಲಿ ನೀಡಲಾಗುವುದು ನಂತರ ಇನ್ನಷ್ಟು ಮನೆಗಳನ್ನು ಒದಗಿಸುವ ಭರವಸೆ ನೀಡಿದರು. ಗಂಗೋತ್ರಿ ಸಮುದಾಯ ಭವನ ನಿರ್ಮಿಸುವ ಯೋಜನೆ ರೂಪಿಸಿದ್ದು, ಇದಕ್ಕೆ ಕಂಪ್ಲಿ ಶಾಸಕರು 20 ಲಕ್ಷ ರೂ. ಮಂಜೂರು ಮಾಡಿದ್ದು, ಕಂಪ್ಲಿ ಗಂಗಾಮತ ಸಮಾಜದವರು ನಿಯೋಗದಲ್ಲಿ ಬೆಂಗಳೂರಿಗೆ ಭೇಟಿ ನೀಡಿದರೆ ಮುಖ್ಯಮಂತ್ರಿಗಳಿಂದ ಹೆಚ್ಚಿನ ಅನುದಾನ ಕೊಡಿಸುವುದಾಗಿ ಹೇಳಿದರು.

ಕಂಪ್ಲಿ ಶಾಸಕ ಟಿ.ಎಚ್‌. ಸುರೇಶಬಾಬು ಗಂಗೋತ್ರಿ ಸಮುದಾಯ ಭವನಕ್ಕೆ ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿ
ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಚಲನಚಿತ್ರ ನಟಿ ಗಂಗಾಮತ ಸಮಾಜದವರಾದ ನಟಿ ಭಾವನಾ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ರಾಯಚೂರು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಮಾಜದ ಜಿಲ್ಲಾಧ್ಯಕ್ಷ ಬಿ.ಮೌಲಾಲಿ, ಜಿಪಂ ಸದಸ್ಯರಾದ
ಎ.ಬನಶಂಕರಿ, ಕೆ. ಶ್ರೀನಿವಾಸರಾವು, ಪುರಸಭೆ ಅಧ್ಯಕ್ಷ ಮಾದಿನೇನಿ ಸುರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಸುರೇಶ್‌, ಕಟ್ಟೆ ಉಮಾಪತಿ, ಕಟ್ಟೆ ಅಯ್ಯಪ್ಪ, ಬಿ.ನಾಗರಾಜ,ಕರೇಕಲ್‌ ಮನೋಹರ್‌, ಮಣ್ಣೂರು ನಾಗರಾಜ ಸಾರಿಗೆ ಇಲಾಖೆಯ ಶ್ರೀನಿವಾಸ್‌, ಟಿ.ಸೋಮಶೇಖರಪ್ಪ, ವೈ.ಉಮೇಶ್‌, ಕಂಬತ್ತು ರಮೇಶ್‌, ಬಿ.ರಮೇಶ್‌ ಭಾಗವಹಿಸಿದ್ದರು. ಕಂಪ್ಲಿ ಫಿರ್ಕಾ ಗಂಗಾಮತ ಸಮಾಜದ ಅಧ್ಯಕ್ಷ ಜೆಜಿ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿದ್ದಪ್ಪ ಸ್ವಾಗತಿಸಿದರು. ಅಂಬಿಗರ 
ಮಂಜುನಾಥ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next