ದೇವನಹಳ್ಳಿ: ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ ಬೆಳೆದು ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ತಿಳಿಸಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ತಾಲೂಕು ತೋಟಗಾರಿಕ ಇಲಾಖೆ ವತಿಯಿಂದ ಕೈ ಮತ್ತು ತಾರಸಿ ತೋಟಗಳ ಉತ್ತೇಜನ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ತರಬೇತಿ ಮತ್ತು ಮಿನಿ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಅಭಿವೃದ್ಧಿಗಾಗಿ ಇರುವ ಜಾಗವನ್ನೆಲ್ಲ ಕಳೆದುಕೊಂಡು ಇರುವಷ್ಟು ಜಾಗದಲ್ಲಿಯೇ ಕೈತೋಟ ತೋಟ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ. ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿದರೂ ಆರೋಗ್ಯ ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಯಾಂತ್ರೀಕರಣ: ಗೋಬಿ ಮಂಚೂರಿಯನ್ನು ಹೊರಗಡೆ ಹೆಚ್ಚು ತಿನ್ನಬೇಡಿ ಮನೆಯಲ್ಲಿಯೇ ನೀವೇ ಹೂ ಕೋಸನ್ನು ಬೆಳೆದು ಅದರಲ್ಲಿ ಮಂಚೂರಿ ಮಾಡಿ ಸವಿಯಿರಿ. ಸಣ್ಣ ಕುಂಡಗಳಲ್ಲಿ ಇಲಾಖೆ ನೀಡುವ ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ, ಹೂ, ಸೊಪ್ಪು, ಹಣ್ಣು ಹೀಗೆ ವಿವಿಧ ರೀತಿಯಲ್ಲಿ ದಿನ ಬಳಕೆ ನೀರನ್ನು ಬಳಸಿ ಬೆಳೆಸಬಹುದು. ಮಾರುಕಟ್ಟೆಗೆ ಹೋಗಿ ಇಷ್ಟ ಬಂದ ತರಕಾರಿಗಳನ್ನು ತರುತ್ತೇವೆ. ಅವು ವಿಷದಿಂದ ಹೊರತಲ್ಲ, ಇವುಗಳ ಸೇವನೆಯಿಂದ ದೈಹಿಕ ಚಟುವಟಿಕೆಗಳು ಸಹ ಕಡಿಮೆಯಾಗುತ್ತಿದೆ. ನಿತ್ಯದ ಜೀವನ ಬಹುತೇಕ ಯಾಂತ್ರೀಕರಣವಾಗಿದೆ ಎಂದು ಹೇಳಿದರು.
ತಾರಸಿ ತೋಟ ಬೆಳೆಯಿರಿ: ಸ್ತ್ರೀಶಕ್ತಿ ಸಂಘಗಳಿಗೆ ಕೈ ತೋಟ ಮತ್ತು ತಾರಸಿ ತೋಟಗಳ ಉತ್ತೇಜನ ತರಬೇತಿ ನೀಡಿ ಸಾವಯವ ಗೊಬ್ಬರದ ಮಹತ್ವವನ್ನು ತಿಳಿಸಲಾಗಿದೆ. ಮಹಿಳೆಯರು ಇಲ್ಲಿ ತರಬೇತಿ ಪಡೆದು ಹೋದರೆ ಸಾಲದು, ನಿಮ್ಮ ಮನೆಯ ಮೇಲೆ ಯಾವ ರೀತಿ ತಾರಸಿ ತೋಟ ಮಾಡಬೇಕು ಎಂಬುವುದರ ವಿಧಾನ ತಿಳಿದು ಅದನ್ನು ಅನುಸರಿಸಬೇಕು. ಈ ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಮಿನಿ ಕಿಟ್ ನೀಡುತ್ತಿದ್ದೇವೆ ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಉತ್ತಮ ಪರಿಸರ: ಕೈ ಮತ್ತು ತಾರಸಿ ತೋಟಗಳಲ್ಲಿ ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ ಬೆಳೆದರೆ ಆರೋಗ್ಯ ವಂತರಾಗಬಹುದು. ನೈಸರ್ಗಿಕ ಸಂಪನ್ಮೂಲಗಳಿಗೆ ದಕ್ಕೆ ಆಗದಂತೆ ಪರಿಸರ ಸಮತೋಲನ ಹಾಗೂ ಜೀವ ವೈವಿಧ್ಯತೆ ಕಾಪಾಡಿಕೊಂಡು ನಡೆಸುವ ಪರಿಪೂರ್ಣ ಕೃಷಿ ಪದ್ಧತಿಯೇ ಸಾವಯವ ಕೃಷಿಯಾಗಿದೆ ಎಂದು ಹೇಳಿದರು. ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳನ್ನು ವೀಕ್ಷಿಸುವುದರ ಬದಲಿಗೆ ತರಬೇತಿಯಲ್ಲಿ ಕಲಿತಿರುವ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಬೇಕು.
ಹಿಂದೆ ಮನೆಯ ಹಿಂಬದಿಯಲ್ಲಿಯೇ ಕೈ ತೋಟ ಮಾಡಲಾಗುತ್ತಿತ್ತು. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ ಅಭಿವೃದ್ಧಿಗಾಗಿ ಇರುವ ಜಾಗವನ್ನೆಲ್ಲ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ನಾಗರಾಜಯ್ಯ, ತರಬೇತಿದಾರ ವಿಶ್ವನಾಥ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯೋಜಕ ವಿಶ್ವನಾಥ್, ಹರೀಶ್ ಮತ್ತಿತರರು ಭಾಗವಹಿಸಿದ್ದರು.