Advertisement
ಸಾಮಾಜಿಕ ಕ್ಷೇತ್ರದಲ್ಲೂ ಸೈತೊಡಿಕಾನ ಗ್ರಾಮದ ದೊಡ್ಡಡ್ಕ ಉರಿಮಜಲು ಮನೆತನದ ಪ್ರಗತಿಪರ ಕೃಷಿಕ ವಸಂತ ಭಟ್ ಅವರ ಪತ್ನಿ ಪ್ರೇಮಾ ಅವರು ಕೆ.ಎಂ.ಎಫ್. ಮಂಗಳೂರು ಒಕ್ಕೂಟದ ನಿರ್ದೇಶಕಿಯಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ, ಸ್ಥಳೀಯ ಪಯಸ್ವಿನಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ತೊಡಿಕಾನ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಉನ್ನತಿಯತ್ತ ಮುನ್ನಡೆಸಿದ್ದಾರೆ. ಅವರ ಅವಧಿಯಲ್ಲಿ ಇಲ್ಲಿ ಹಾಲು ಸಂಗ್ರಹಕ್ಕೆ ಶೀತಲಿಕರಣ ಘಟಕ ಅಳವಡಿಸಲಾಗಿದೆ. ಇದೀಗ ಅವರು ಹಾಲು ಉತ್ಪಾದಕರ ಸಹಕಾರಿ ಕೇಂದ್ರದ ಸದಸ್ಯೆಯಾಗಿದ್ದು, ದಿನನಿತ್ಯ 15 ಲೀ. ಹಾಲನ್ನು ಡೈರಿಗೆ ಸರಬರಾಜು ಮಾಡುತ್ತಿದ್ದಾರೆ. ಸಹಕಾರ, ಸಾಮಾಜಿಕ ರಂಗಳಲ್ಲಿದ್ದರೂ ಆಸಕ್ತಿಯಿಂದ ಕೈತೋಟದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ.
ಘಟ್ಟದ ಮೇಲೆ ಜಾಸ್ತಿಯಾಗಿ ಬೆಳೆಯುವ ಮಗೆ ಸೌತೆ, ಅಲಸಂಡೆ, ಬೆಂಡೆಕಾಯಿ, ಮುಳ್ಳು ಸೌತೆ, ಪಡುವಲಕಾಯಿ, ಹೀರೆಕಾಯಿ, ಕುಂಬಳವನ್ನು ಮನೆಯಂಗಳದ ಸುಮಾರು 10 ಸೆಂಟ್ಸ್ ಜಾಗದಲ್ಲಿ ಬೆಳೆದಿದ್ದಾರೆ. ಒಂದು ಮಗೆ ಸೌತೆ 4ರಿಂದ 8 ಕೆ.ಜಿ. ತೂಗುತ್ತದೆ. ಫಸಲು ಚೆನ್ನಾಗಿದೆ. ತರಕಾರಿ ಕೃಷಿಗೆ ಜೀವಾಮೃತ, ಸಗಣಿ, ಇತರ ಸಾವಯವ ಗೊಬ್ಬರ ನೀಡುತ್ತಾರೆ. ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಅಂಗಳದ ಸುತ್ತಲೂ ನೆಟ್ಟಿದ್ದಾರೆ. ಇದರಲ್ಲಿ ಮುಖ್ಯವಾಗಿ 8 ತಳಿಯ ಪೇರಳೆ ಹಣ್ಣಿನ ಗಿಡ, ಮಾವು, ವಿವಿಧ ತಳಿಯ ಹಲಸು, ಸ್ಟ್ರಾಬೆರಿ ಗಿಡ – ಹೀಗೆ ಅನೇಕ ಹಣ್ಣಿನ ಗಿಡಗಳು ಬೆಳೆದು ನಿಂತಿವೆ. ಇತರರಿಗೆ ಪ್ರೇರಣೆಯಾಗುವಂತೆ ಅವರ ಕಾರ್ಯ ಸಾಗುತ್ತಲಿದೆ. ಮನೆಗೇ ಬಂದು ಖರೀದಿಸುತ್ತಾರೆ
ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗೆ ಉತ್ತಮ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತದೆ. ಕೆಲವರು ಮನೆಗೆ ಬಂದು ತರಕಾರಿ ಖರೀದಿಸಿಕೊಂಡು ಹೋಗುತ್ತಾರೆ. ಉತ್ತಮ ಆದಾಯದ ಜತೆಗೆ ತರಕಾರಿ ಕೃಷಿ ಮಾನಸಿಕವಾಗಿಯೂ ನೆಮ್ಮದಿ ನೀಡುತ್ತಿದೆ. ಸಾವಯವ ತರಕಾರಿಯನ್ನು ಸೇವಿಸುವುದರಿಂದ ನಮ್ಮೆಲ್ಲರ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಬಹುದು.
– ಪ್ರೇಮಾ ವಸಂತ್ ಭಟ್,
ತೊಡಿಕಾನ