Advertisement

ಸ್ನಾತಕೋತ್ತರ ಪದವೀಧರನಿಂದ ಸಾವಯವ ಹೈಟೆಕ್‌ ತೋಟಗಾರಿಕೆ

09:52 AM Jan 01, 2020 | mahesh |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಹೆಸರು: ರಾಮಚಂದ್ರ ಪೈ
ಏನೇನು ಕೃಷಿ: ತೆಂಗು, ಅಡಿಕೆ, ಕಾಳುಮೆಣಸು
ಎಷ್ಟು ವರ್ಷ: 6
ಕೃಷಿ ಪ್ರದೇಶ: 35 ಎಕ್ರೆ ಸಂಪರ್ಕ:9482823456

ಶಿರ್ವ: ಉನ್ನತ ಶಿಕ್ಷಣ ಪಡೆದವ‌ರಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂಬ ಮಾತಿಗೆ ಅಪವಾದವೆಂಬಂತೆ ಕಾಪು ತಾಲೂಕಿನ ಶಿರ್ವಸಮೀಪದ ಕೃಷಿಕ ಎಂ.ರಾಮಚಂದ್ರ ಪೈ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿ ಹೈಟೆಕ್‌ ತೋಟಗಾರಿಕೆ ನಡೆಸುತ್ತಿದ್ದಾರೆ.

ಸುಮಾರು 35 ಎಕ್ರೆ ಭೂಮಿಯಲ್ಲಿ 3.22 ಎಕ್ರೆ ಜಾಗದಲ್ಲಿ ತೆಂಗು,ಅಡಿಕೆ,ಕಾಳುಮೆಣಸು, ಗೇರು,ಮಾವು ಬೆಳೆದಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತು ಕಳೆದ 6 ವರ್ಷಗಳಿಂದ ಅರ್ಧ ಎಕರೆ ಜಾಗದಲ್ಲಿ ಪಾಲಿ ಹೌಸ್‌ (ಹಸುರು ಮನೆ) ನಿರ್ಮಿಸಿಕೊಂಡು ಹೈಟೆಕ್‌ ತೋಟಗಾರಿಕೆ ನಡೆಸುತ್ತಿದ್ದಾರೆ.50 ಮೀx50 ಮೀ x 5 ಮೀ. ಸುತ್ತಳತೆಯೊಂದಿಗೆ ಉಬ್ಬಿಕೊಂಡಿರುವ ರಚನೆಯ ಚೌಕಟ್ಟುಗಳನ್ನು ರಚಿಸಿಕೊಂಡು ಇಸ್ರೇಲ್‌ನಿಂದ ಆಮದು ಮಾಡಿಕೊಂಡ 200ಮೈಕ್ರಾನ್‌ ದಪ್ಪವಿರುವ ಅಲ್ಟ್ರಾವೈಲೆಟ್‌ ನಿರೋಧಕ, ಕಡಿಮೆ ಸಾಂದ್ರತೆಯ ಪಾಲಿಥಿಲೀನ್‌ ಸಿಂಗಲ್‌ಫಿಲ್ಮ್ ಅಳವಡಿಸಿಕೊಂಡು ಅದರೊಳಗಡೆ ನಿಯಂತ್ರಿತ ತಾಪಮಾನದಲ್ಲಿ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿ ಸೊಪ್ಪು ತರಕಾರಿ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಹೊರಗಡೆಯ ವಿಷ ಪದಾರ್ಥಗಳು ಪಸರಿಸುವ ಸಾಧ್ಯತೆ ಕಡಿಮೆಯಿದ್ದು,ನೀರಿನ ಮಿತ ಬಳಕೆ, ಗೊಬ್ಬರ ನಿರ್ವಹಣೆ,ಕೀಟ ನಿಯಂತ್ರಣ ಮಾಡಬಹುದಾಗಿದೆ.

ಪರಾಗ ಸ್ಪರ್ಶ ಬೇಕಿಲ್ಲದ ತರಕಾರಿಗಳಾದ ಅಲಸಂಡೆ,ಬೆಂಡೆಯೊಂದಿಗೆ ಎಲೆಕೋಸು, ನವಿಲು ಕೋಸು, ಕಾಲಿಫ್ಲವರ್‌, ಮೂಲಂಗಿ,ಕಾಡು ಹೀರೆ ಹಾಗೂ ಬಸಳೆ, ಪುದಿನ, ಹರಿವೆ, ಪಾಲಕ್‌, ಕೊತ್ತಂಬರಿ, ಮೆಂತೆ, ಸಬ್ಬಸಿಗೆ ಸಹಿತ ಸುಮಾರು 8 ಬಗೆಯ ಸೊಪ್ಪುಗಳನ್ನು ಬೆಳೆಸುತ್ತಿದ್ದಾರೆ. ವಾರಕ್ಕೊಮ್ಮೆ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸುತ್ತಿರುವ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

Advertisement

ಕೃಷಿಕನಾದ ಸೆಲ್ಕೊ ಸೋಲಾರ್‌ ನಿರ್ದೇಶಕ
ಬೆಂಗಳೂರಿನಲ್ಲಿ ಸೆಲ್ಕೊ ಸೋಲಾರ್‌ನ ಕಾರ್ಯಕಾರಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದರೂ, ಅನಿವಾರ್ಯವಾಗಿ ಹೆತ್ತವರ ಪೋಷಣೆಗಾಗಿ ಊರಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಾಗ ಪ್ರಯೋಗಶೀಲ ಚಿಂತನೆ ಹೊಂದಿರುವ ಪೈಯವರಿಗೆ ಹೊಳೆದದ್ದು ಆಯುರ್ವೆàದಿಕ್‌ ಸಸ್ಯಗಳನ್ನು ಬೆಳೆಸುವ ಯೋಜನೆ. ಉಡುಪಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪ್ರೇರಣೆಯಿಂದ ಸಹಾಯಧನದೊಂದಿಗೆ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದರೂ ಸೂಕ್ತ ಮಾರುಕಟ್ಟೆಯಿರಲಿಲ್ಲ. ಬಳಿಕ ಜೀವಾಮೃತ, ಬೀಜಾಮೃತದೊಂದಿಗೆ ಬ್ರಹ್ಮಾವರ ಕೃಷಿ ಕೇಂದ್ರದ ಡಾ|ಧನಂಜಯ ಮತ್ತು ಡಾ|ಚೈತನ್ಯ ಅವರ ಮಾರ್ಗದರ್ಶನದಲ್ಲಿ ಸೊಪ್ಪು ತರಕಾರಿ, ಬೆಂಡೆ, ಅಲಸಂಡೆ ಬೆಳೆದು ಲಾಭಗಳಿಸುತ್ತಿದ್ದಾರೆ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಡಾಕ್ಟರೇಟ್‌ ಪದವಿ ಪಡೆದ ಪತ್ನಿ ಅನಿತಾ ಪೈಯವರು ಪತಿಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ. ಜೀವಾಮೃತ, ಬೀಜಾಮೃತ, ಪಂಚಗವ್ಯ, ಸಾವಯವ ಕೀಟನಾಶಕ ತಯಾರಿಸಲು ರೈತರಿಗೆ ಮಾರ್ಗದರ್ಶನ,ಆಸಕ್ತ ಕೃಷಿಕರಿಗೆ ಮತ್ತು ಯುವಕರಿಗೆ ತರಬೇತಿ ನೀಡುತ್ತಿದ್ದು ತೋಟಗಾರಿಕೆ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೇಷ್ಠ ಕೃಷಿಕ ಪ್ರಶಸ್ತಿ
ಕೃಷಿ ಸಾಧನೆಗಾಗಿ ಕರ್ನಾಟಕ ಸರಕಾರದ ಜಿ.ಪಂ. ಕೃಷಿ ಇಲಾಖೆಯಿಂದ 25000 ರೂ. ನಗದು ಪುರಸ್ಕಾರದೊಂದಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರೆತಿದ್ದು , ರೋಟರಿ,ಲಯನ್ಸ್‌ ಮುಂತಾದ ಸೇವಾ ಸಂಸ್ಥೆಗಳಿಂದ ಉತ್ತಮ ಕೃಷಿಕ ಪ್ರಶಸ್ತಿಯೂ ಲಭಿಸಿದೆ.

ನೀರಿನ ಇಂಗು ಗುಂಡಿ
ತನ್ನ ಕೃಷಿ ಜಮೀನಿನ ಬಾವಿಯಲ್ಲಿರುವ ನೀರಿನ ಬರವನ್ನು ಮನಗಂಡ ಪೈಯವರು 22x22x4ಮೀ. ಸುತ್ತಳತೆಯ 15 ಲಕ್ಷ ಲೀ. ನೀರಿನ ಸಾಮರ್ಥ್ಯದ ನೀರಿನ ಇಂಗುಗುಂಡಿ ನಿರ್ಮಿಸಿದ್ದಾರೆ.ಪಾಲಿ ಹೌಸ್‌ನಿಂದ ಸಂಗ್ರಹಿಸಲಾದ ನೀರನ್ನು ಪೈಪ್‌ಗ್ಳ ಮೂಲಕ ಇಂಗುಗುಂಡಿಗೆ ಹರಿಸಿ ಅಂತರ್ಜಲ ವೃದ್ಧಿಸಿಕೊಂಡು ಅದರಲ್ಲಿ ಸುಮಾರು 6 ತಿಂಗಳಿಗೆ ಬೇಕಾಗುವಷ್ಟು ನೀರನ್ನು ಶೇಖರಿಸಿಟ್ಟುಕೊಂಡು ನೀರಿನ ಬರವನ್ನು ನೀಗಿಸಿದ್ದಾರೆ.

ಮಣ್ಣಿಗೆ ವಿಷ ಸೇರಿಸುವುದುಸಲ್ಲ ನಮ್ಮ ಜೀವಿತ ಕಾಲದಲ್ಲಿ ಯಾವುದೇ ಕೆಲಸ ಮಾಡಿದರೂ,ಮಣ್ಣಿಗೆ ಯಾವುದೇ ಕಾರಣಕ್ಕೂ ವಿಷ ಸೇರಿಸಬಾರದು.ರಾಸಾಯನಿಕ ಕೀಟನಾಶಕ ಸಿಂಪಡಿಸಿದರೆ ಅದು ಮಣ್ಣಿನಲ್ಲಿಯೇ ಉಳಿದುಕೊಂಡು ಕುಡಿಯುವ ನೀರಿನೊಂದಿಗೆ ನಮ್ಮ ಹೊಟ್ಟೆ ಸೇರುತ್ತದೆ. ಕೃಷಿಕರಾಗಿದ್ದುಕೊಂಡು ರಾಸಾಯನಿಕ ಬಳಸದೆ ದೇಶೀಯ ಗೋವುಗಳನ್ನು ಸಾಕಿ ಗೋಮೂತ್ರ,ಗಂಜಲ, ಅಡುಗೆ ಮನೆಯ ಪದಾರ್ಥಗಳಾದ ಹಿಂಗು,ಹಳದಿ ಹುಡಿ,ಖಾರ ಮೆಣಸು,ಬೇವಿನೆಣ್ಣೆ ಬಳಸಿಕೊಂಡು ಸಾವಯವ ಕೀಟನಾಶಕ ತಯಾರಿಸಿ ಸಿಂಪಡಿಸಿದಾಗ ಕೀಟಗಳು ಸಾಯದೆ ಓಡಿಹೋಗುವುದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿದ್ದು ವಾರಕ್ಕೊಂದರ ಬದಲು ಎರಡು ಸಂತೆಯಲ್ಲಿ ಮಾರಾಟ ಮಾಡಿದರೆ ಸರಾಸರಿ ವರ್ಷಕ್ಕೆ 4 ಲ.ರೂ.ಆದಾಯ ಗಳಿಸಿ ಸ್ವಾವಲಂಬಿಗಳಾಗಬಹುದು ನಾನು ಸಾವಯವ ತರಕಾರಿ ತಿಂದು ಆರೋಗ್ಯ ವಂತನಾಗಿದ್ದು,ಇತರರಿಗೆ ತಿನ್ನಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ.
ಮಟ್ಟಾರು ರಾಮಚಂದ್ರ ಪೈ, ಕೃಷಿಕ

ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next