Advertisement

ಹಾವೇರಿ ನಗರಸಭೆ ಆದಾಯಕ್ಕೆ ‘ವರದಾ’ನ

08:19 PM Apr 20, 2021 | Team Udayavani |

ವರದಿ : ವೀರೇಶ ಮಡ್ಲೂರ

Advertisement

ಹಾವೇರಿ: ಸ್ಥಳೀಯ ನಗರಸಭೆ ಈಗ ಕಸದಲ್ಲಿಯೇ ರಸ ತೆಗೆದು ನಗರಸಭೆ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು, ಮನೆ-ಮನೆಯಿಂದ ಸಂಗ್ರಹಿಸಿದ ತ್ಯಾಜ್ಯದಲ್ಲಿ ಸಾವಯವ ಗೊಬ್ಬರ ತಯಾರಿಸಿ “ವರದಾ ರಸಗೊಬ್ಬರ’ ಎಂಬ ಬ್ರ್ಯಾಂಡ್‌ನ‌ಡಿ ಮಾರಾಟ ಮಾಡಿ ಆದಾಯ ತರುವಲ್ಲಿ ನಗರಸಭೆ ಸಿದ್ಧತೆ ನಡೆಸಿದೆ.

ತಾಲೂಕಿನ ಗೌರಾಪುರದ ಗುಡ್ಡದಲ್ಲಿರುವ 10 ಎಕರೆ ಜಾಗೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಬಹುವರ್ಷಗಳ ಹಿಂದೆಯೇ ಸ್ಥಾಪಿಸಲಾಗಿತ್ತು. ನಗರದಿಂದ ಹತ್ತಾರು ಕಿ.ಮೀ ದೂರದಲ್ಲಿದ್ದ ಘಟಕಕ್ಕೆ ನಗರದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ನಿತ್ಯ ಟ್ರ್ಯಾಕ್ಟರ್‌ ಗಳ ಮೂಲಕ ಸಂಗ್ರಹಿಸಿಕೊಂಡು ಹೋಗಿ ಸುರಿದು ಬರಲಾಗುತ್ತಿತ್ತು. ಕೆಲವೊಮ್ಮೆ ಟ್ರ್ಯಾಕ್ಟರ್‌ ಚಾಲಕರು ನಗರದ ಹೊರಭಾಗದಲ್ಲಿಯೇ ತ್ಯಾಜ್ಯ ಸುರಿದು ಹೋಗುತ್ತಿದ್ದರು. ಇದರಿಂದ ನಗರಸಭೆಗೆ ಅನೇಕ ದೂರು ಬರುತ್ತಿದ್ದವು. ಈ ಬಗ್ಗೆ ಎಷ್ಟು ಸೂಚನೆ ನೀಡಿದರೂ ಈ ಪ್ರಕ್ರಿಯೆ ನಿಂತಿರಲಿಲ್ಲ. ಹೀಗಾಗಿ ನಗರದಲ್ಲಿನ ತ್ಯಾಜ್ಯ ವಿಲೇವಾರಿಯದ್ದು ಬಹು ದೊಡ್ಡ ಸಮಸ್ಯೆಯೇ ಆಗಿತ್ತು. ಇದೀಗ ತ್ಯಾಜ್ಯದಿಂದ ರಸಗೊಬ್ಬರ ತಯಾರಿಕೆ ಪ್ರಕ್ರಿಯೆ ಆರಂಭಗೊಂಡ ನಂತರ ನಿತ್ಯ ನಗರದಿಂದ ಎಷ್ಟು ಕಸ ಸಂಗ್ರಹವಾಗುತ್ತದೆ.

ಎಷ್ಟು ವಾಹನಗಳು ಅದನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರುತ್ತವೆ ಎಂಬ ಲೆಕ್ಕ ಹಾಕಲಾಗುತ್ತಿದೆ. ಇದರಿಂದ ನಗರದ ಹೊರಭಾಗದಲ್ಲಿ ತ್ಯಾಜ್ಯ ಸುರಿದು ಹೋಗುವ ಸಮಸ್ಯೆಯೂ ತಪ್ಪಿದೆ. ಸಾವಯವ ಗೊಬ್ಬರ ತಯಾರಿ: ನಗರಸಭೆ ನಗರದಲ್ಲಿನ ಮನೆ-ಮನೆಯಿಂದ ಸಂಗ್ರಹಿಸುವ ಹಸಿ ಕಸ ಹಾಗೂ ಚರಂಡಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಇದಕ್ಕೆ ಬೇಕಾದ ಯಂತ್ರವನ್ನು ಈಗಾಗಲೇ ಅಲ್ಲಿ ಸ್ಥಾಪಿಸಲಾಗಿದೆ. ಮನೆಯಿಂದ ಸಂಗ್ರಹಿಸುವ ಹಸಿ ಕಸ ಆರಂಭದಲ್ಲಿಯೇ ಬೇರ್ಪಡಿಸಿ ಪ್ರತ್ಯೇಕವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಹೀಗೆ ಬಂದ ಕಸ ಸಾವಯವ ಗೊಬ್ಬರ ತಯಾರಿಕೆ ತೊಟ್ಟಿಯಲ್ಲಿ ಹಾಕಿ ಎರೆಹುಳು ಬಿಟ್ಟು ಕೊಳೆಸಿ ಗೊಬ್ಬರ ತಯಾರಿಸಲಾಗುತ್ತಿದೆ. ಇನ್ನು ನಗರದಲ್ಲಿನ ಮಾರುಕಟ್ಟೆ, ಚರಂಡಿಗಳಲ್ಲಿ ದೊಡ್ಡ ಮಟ್ಟದಲ್ಲಿ ಬರುವ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಿ ಅದು ಕೊಳೆತು ಒಣಗಿದ ಮೇಲೆ ಯಂತ್ರಗಳ ಸಹಾಯದಿಂದ ಗೊಬ್ಬರ ಪ್ರತ್ಯೇಕಿಸಲಾಗುತ್ತಿದೆ.

ಗೊಬ್ಬರ ಬ್ಯಾಗ್‌ ತಯಾರಿ: ಕಳೆದ ಮಾರ್ಚ್‌ನಿಂದ ಗೊಬ್ಬರ ತಯಾರಿಕೆ ಘಟಕ ಆರಂಭವಾಗಿದ್ದು, ಈಗಾಗಲೇ ಹತ್ತಾರು ಟನ್‌ ಗೊಬ್ಬರ ಉತ್ಪಾದನೆಯಾಗಿದೆ. ಅದರ ಮಾರಾಟಕ್ಕೂ ನಗರಸಭೆ ಚಿಂತನೆ ನಡೆಸಿದೆ. ಅಲ್ಲದೇ ವರದಾ ಸಾವಯವ ರಸಗೊಬ್ಬರ ಎಂಬ ಹೆಸರಿಟ್ಟು 1 ಕೆ.ಜಿ, 5 ಕೆ.ಜಿ, 10 ಕೆ.ಜಿ, 25 ಕೆ.ಜಿ ಬ್ಯಾಗ್‌ ತಯಾರಿಸಿ ಮಾರಾಟ ಮಾಡಲು ಯೋಜನೆ ಸಿದ್ಧಗೊಂಡಿದೆ. ಸದ್ಯ ರಸಗೊಬ್ಬರವನ್ನು ಕೆ.ಜಿಗೆ 3 ರಿಂದ 5 ರೂ. ದರದಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ನಗರಸಭೆ ಪಕ್ಕದಲ್ಲೇ ಒಂದು ಮಳಿಗೆ ತೆರೆದು ಮಾರಾಟ ಮಾಡಲು ಉದ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next