Advertisement

ತ್ಯಾಜ್ಯ ಘಟಕದಲ್ಲಿ ಸಾವಯವ ಗೊಬ್ಬರ

12:24 PM Jul 24, 2019 | Suhan S |

ಕೊಪ್ಪಳ: ನಗರಸಭೆಯ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಾವಯವ ಗೊಬ್ಬರ ತಯಾರು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

Advertisement

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿಯೇ ಸಾವಯುವ ಗೊಬ್ಬರ ಸಿದ್ಧಪಡಿಸಿದ್ದು, ರೈತರು ಇದರ ಬಳಕೆಗೆ ಮುಂದಾಗಲು ಸಂದೇಶ ನೀಡಿದೆ.

ಹೌದು. ಈ ಮೊದಲು ನಗರದಲ್ಲಿನ ಚರಂಡಿ ಸ್ವಚ್ಛತೆ ಇಲ್ಲದೇ ಇರುವ ಬಗ್ಗೆ, ಶೌಚಾಲಯ ನಿರ್ಮಾಣದಲ್ಲಿ ವಿಳಂಬ ಮಾಡುವ ಬಗ್ಗೆ, ರಸ್ತೆ ಅವ್ಯವಸ್ಥೆ ಸೇರಿದಂತೆ ಬಡಾವಣೆಗಳ ಬಗ್ಗೆ ನಿಷ್ಕಾಳಜಿ ವಹಿಸಿದ ಬಗ್ಗೆ ನಗರಸಭೆ ಜನರಿಂದ ಹಲವು ಟೀಕೆಗಳನ್ನು ಎದುರಿಸುತ್ತಿತ್ತು. ಅಂತೂ ಇಂತು ಈಗ ಒಂದು ಉಪಯುಕ್ತ ಕಾರ್ಯ ಮಾಡಿ ಜನರಿಂದ ಸೈ ಎನಿಸಿಕೊಳ್ಳುವ ತವಕದಲ್ಲಿದೆ.

ಪ್ರತಿ ನಿತ್ಯ ನಗರದಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ನಗರದಾಚೆಗಿರುವ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಸಂಸ್ಕರಣೆ ಮಾಡಿ ಎರೆ ಹುಳುಗಳನ್ನು ಬಿಡುವ ಮೂಲಕ ಪೌಷ್ಟಿಕ ಹಾಗೂ ಸಾವಯುವ ಗೊಬ್ಬರವನ್ನು ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದೆ.

Advertisement

ನಿತ್ಯ 35 ಟನ್‌ ತ್ಯಾಜ್ಯ: ನಗರ 31 ವಾರ್ಡ್‌ನಲ್ಲಿ ನಿತ್ಯ 35 ಟನ್‌ಗೂ ಅಧಿಕ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹಸಿ ಸೇರಿದಂತೆ ಒಣ ಕಸವೂ ತುಂಬಿಕೊಂಡಿರುತ್ತದೆ. ಅಂದರೆ ಒಂದು ತಿಂಗಳಿಗೆ 1050 ಟನ್‌ನಷ್ಟು ತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ತರಕಾರಿ ಮಾರುಕಟ್ಟೆ ಭಾಗದಿಂದ ಬರುವ ತ್ಯಾಜ್ಯವನ್ನು ಮಾತ್ರ ಕೊಳೆಯಿಸಿ ಅದರಲ್ಲಿ ಸಗಣಿ ಗೊಬ್ಬರ ಬಳಸಿ, ಎರೆ ಹುಳುಗಳನ್ನು ಬಿಟ್ಟು ಸಾವಯವ ಗೊಬ್ಬರ ಮಾಡುವ ಕಾರ್ಯ ತ್ಯಾಜ್ಯ ಘಟಕದಲ್ಲಿ ಸದ್ದಿಲ್ಲದೇ ನಡೆದಿದೆ.

5 ಟನ್‌ ಗೊಬ್ಬರ ತಯಾರು: ನಗರ ಪ್ರದೇಶದಲ್ಲಿ ಮಿತಿಮೀರಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡಲು ಹಾಗೂ ಅದನ್ನು ವೈಜ್ಞಾನಿಕವಾಗಿ ಪುನರ್‌ಬಳಕೆ, ಗೊಬ್ಬರ ತಯಾರು ಮಾಡುವ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆ ನಡೆದಿದ್ದವು. ಆಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದ ವಾಮನ್‌ ಆಚಾರ್‌ ಅವರೇ ಈ ಹಿಂದೆ ನಗರಸಭೆ ವ್ಯಾಪ್ತಿಯ ತ್ಯಾಜ್ಯ ಘಟಕಕ್ಕೆ ಆಗಮಿಸಿ ಇದನ್ನು ಕೊಪ್ಪಳ ಮಾದರಿ ಮಾಡಬೇಕೆಂದು ನಿರ್ಧರಿಸಿದ್ದರು. ಪ್ರಾಯೋಗಿಕವಾಗಿ ಆರಂಭ ಮಾಡಿದ್ದರು. ಆದರೆ ಅದೇನೋ ತಾಂತ್ರಿಕ ಕಾರಣದಿಂದ ತ್ಯಾಜ್ಯ ತುಂಡರಿಸುವ ಯಂತ್ರವೂ ಸ್ಥಗಿತಗೊಂಡಿತ್ತು. ಆದರೆ ಈಗ ನಗರದಲ್ಲಿನ ಮಾರುಕಟ್ಟೆಯ ತ್ಯಾಜ್ಯವನ್ನು ಸಾವಯವ ಗೊಬ್ಬರ ಮಾಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು 4-5 ತಿಂಗಳಲ್ಲಿ 5 ಟನ್‌ನಷ್ಟು ಸಾವಯವ ಗೊಬ್ಬರ ತಯಾರು ಮಾಡಿದೆ.

ಗೊಬ್ಬರ ಮಾರಾಟಕ್ಕೆ ಆಹ್ವಾನ: ಸಾವಯವ ಗೊಬ್ಬರ ರೈತರಿಗೆ ತುಂಬ ಉಪಯುಕ್ತವಾಗಲಿದೆ. ಉತ್ಪತ್ತಿಯಾದ 5 ಟನ್‌ ಗೊಬ್ಬರ ಮಾರಾಟಕ್ಕೆ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗೊಬ್ಬರ ಹರಾಜು ಮಾಡಲು ತಯಾರಿ ನಡೆಸಿದೆ. ಯಾವುದೇ ರೈತರು ಗೊಬ್ಬರ ಖರೀದಿಗೆ ಮುಂದೆ ಬಂದರೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡಲಿದ್ದೇವೆ. ಸರ್ಕಾರ ಪ್ರತಿ ಕೆಜಿ ಗೊಬ್ಬರಕ್ಕೆ 3 ರೂ.ಗಿಂತ ಹೆಚ್ಚಿನ ದರದಲ್ಲಿ ಬಿಡ್ಡಿಂಗ್‌ ಮಾಡಿದರೆ ಗೊಬ್ಬರ ಕೊಡಲಿದ್ದೇವೆ ಎನ್ನುವ ಮಾತುಗಳು ಅಧಿಕಾರಿಗಳಿಂದ ಕೇಳಿ ಬಂದಿವೆ.

ವಿಶೇಷ ಪ್ರಯತ್ನ: ಸಾಮಾನ್ಯವಾಗಿ ಖಾಸಗಿ ತ್ಯಾಜ್ಯ ಸಂಗ್ರಹಣಾ ಘಟಕಗಳು ತಮ್ಮ ಲಾಭ ಹಾಗೂ ಇತರೆ ಕಾರ್ಯಕ್ಕೆ ಸಾವಯವ ಗೊಬ್ಬರ ತಯಾರು ಮಾಡಿಕೊಂಡು ರೈತರಿಗೆ ಮಾರಾಟ ಮಾಡುತ್ತಿವೆ. ಆದರೆ, ಸರ್ಕಾರದಿಂದ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಮೊದಲ ಬಾರಿಗೆ ಸಾವಯವ ಗೊಬ್ಬರ ತಯಾರು ಮಾಡಿ ರೈತರಿಗೆ ಮಾರಾಟ ಮಾಡಲು ಮುಂದಾಗಿರುವುದು ಇದೇ ಮೊದಲು. ಅದೂ ಹೈಕ ಭಾಗದಲ್ಲಿಯೇ ಕೊಪ್ಪಳ ನಗರಸಭೆಯು ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಎಲ್ಲರ ಗಮನ ಸೆಳೆದಿದೆ.

ಒಟ್ಟಿನಲ್ಲಿ ತ್ಯಾಜ್ಯವೆಂದರೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿ ನಗರಸಭೆಯು ಅದನ್ನೇ ಸಾವಯವ ಗೊಬ್ಬರವನ್ನಾಗಿ ಮಾಡಿ ಮಾರಾಟಕ್ಕೆ ಮುಂದಾಗಿರುವುದು ಗಮನ ಸೆಳೆದಿದೆ.

ನಮ್ಮ ನಗರಸಭೆಯಿಂದ ಹೆಚ್ಚಿನ ಕಾಳಜಿ ವಹಿಸಿ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಮಾರುಕಟ್ಟೆಯ ತ್ಯಾಜ್ಯವನ್ನು ಬಳಕೆ ಮಾಡಿ ಸಾವಯವ ಗೊಬ್ಬರ ಸಿದ್ಧಪಡಿಸಿದ್ದೇವೆ. ವಿಜಾಪೂರ ಸೇರಿ ಇತರೆ ಭಾಗದಿಂದ ಎರೆಹುಳು ತಂದು ಗೊಬ್ಬರ ತಯಾರಿ ಮಾಡಿದ್ದೇವೆ. ಎಲ್ಲ ತ್ಯಾಜ್ಯದಿಂದಲೂ ಗೊಬ್ಬರ ಆಗಲ್ಲ. ಮಾರುಕಟ್ಟೆ ತ್ಯಾಜ್ಯ ಮಾತ್ರ ಗೊಬ್ಬರವಾಗಲಿದೆ. ಅದರಿಂದ ಬಂದಷ್ಟು ಗೊಬ್ಬರ ಸಿದ್ದಪಡಿಸಿದ್ದು, ಶೀಘ್ರದಲ್ಲೇ ಅದರ ಹರಾಜು ಪ್ರಕ್ರಿಯೆ ನಡೆಯಲಿದೆ. ಇನ್ನೂ ನಮ್ಮ ನಗರಸಭೆಯಿಂದ ಮೊದಲ ಬಾರಿಗೆ ಸಸಿಗಳ ನರ್ಸರಿ ಆರಂಭಿಸಿದ್ದೇವೆ.•ಸುನೀಲಕುಮಾರ ಪಾಟೀಲ್, ನಗರಸಭೆ ಪೌರಾಯುಕ್ತ

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next