ದೇವನಹಳ್ಳಿ: ರೈತರು ಬಹಳ ಶ್ರಮ ಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಸಿದವರ ಹೊಟ್ಟೆಗೆ ಹಸಿವಿನ ಬೆಲೆ ತಿಳಿಯುತ್ತದೆ. ಇದರ ಜ್ಞಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಕುಂದಾಣ ಗ್ರಾಪಂ ಅಧ್ಯಕ್ಷೆ ವಿಜಯ ಬಿ.ವಿ.ಸ್ವಾಮಿ ತಿಳಿಸಿದರು.
ತಾಲೂಕಿನ ಕುಂದಾಣ ಸರ್ಕಲ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ, ತಾಪಂ ಹಾಗೂ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ 2019ರ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಸಾಯನಿಕಗಳಿಂದ ಫಲವತ್ತತೆ ನಾಶ: ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕಯುಕ್ತ ಕೃಷಿ ಮಾಡುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಿಳಿದುಕೊಂಡು, ಸದುಪಯೋಗ ಪಡೆದುಕೊಳ್ಳಬೇಕು.
ನಾವು ಚಿಕ್ಕವರಾಗಿದ್ದಾಗ ನಮ್ಮ ಪೂರ್ವಜರು ತಟ್ಟೆಯಲ್ಲಿ ಅನ್ನದ ಒಂದು ಅಗಳನ್ನು ಸಹ ಬಿಡದೆ ತಿನ್ನುವಂತೆ ಹೇಳುತ್ತಿದ್ದರು. ರೈತರಿಗೆ ಇಂತಹ ಕೃಷಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಬೆಳೆಗಳನ್ನು ಹೇಗೆ ಬೆಳೆಯಬಹುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಸಿಗುತ್ತದೆ. ಎಂದು ಹೇಳಿದರು.
ಇಲಾಖೆಯಿಂದ ಸೌಲಭ್ಯ ತಿಳಿದುಕೊಳ್ಳಿ: ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಚ್.ಎಂ.ರವಿಕುಮಾರ್ ಮಾತನಾಡಿ, ಕೃಷಿ ಭಾಗ್ಯ ಯೋಜನೆಯಲ್ಲಿ ನಾನು ಸಹ ಫಲಾನುಭವಿಯಾಗಿದ್ದೇನೆ. ರೈತರು ಸಹ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ದೃಢ ನಿರ್ಧಾರವನ್ನು ಮಾಡಬೇಕು ಪ್ರತಿ ಐದು ವರ್ಷವೂ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಕೃಷಿ ಇಲಾಖೆಯವರು ರೈತರಿಗಾಗಿ ಮಾಡುತ್ತಾರೆ. ರೈತರು ತಮ್ಮ ಭಾಗದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕು. ಎಂದು ಕರೆ ನೀಡಿದರು.
ಕಾಂಪೋಸ್ಟ್ ಗೊಬ್ಬರ ಬಳಸಿ: ಪ್ರಗತಿಪರ ರೈತ ಜಯರಾಮ್ ಮಾತನಾಡಿ, ಸಾವಯವ ಕೃಷಿ ಮಾಡಿದರೆ ಲಾಭ ಕಾಣಬಹುದು. ರಾಸಾಯನಿಕ ಗೊಬ್ಬರ ಉಪಯೋಗಿಸದೇ ಕಾಂಪೋಸ್ಟ್ ಗೊಬ್ಬರ ಸಿದ್ಧ ಪಡಿಸಿ ಕ್ರಮಬದ್ಧವಾಗಿ ಅಳವಡಿಸಿಕೊಂಡು ಬೆಳೆದರೆ ಹೆಚ್ಚು ಸಹಕಾರಿಯಾಗುತ್ತದೆ. ಕೃಷಿ ಚಟುವಟಿಕೆ ಮಾಡುವುದು ಬಹಳ ಸುಲಭ, ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹುಳು ಕಾಟದಿಂದ ಮುಕ್ತಿಹೊಂದಲು ಸೋಲಾರ್ ಮಾದರಿಯ ಎಲ್‌ಇಡಿ ಬಲ್ಪ್ ಲೆ„ಟ್ ಅನ್ನು ಸಂಜೆ ಸಮಯದಲ್ಲಿ ಹಾಕಬೇಕು. ಹೀಗೆ ಮಾಡಿದಾಗ ಬೆಳೆಗೆ ಔಷಧ ಸಿಂಪಡಿಸುವುದು ತಪ್ಪುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬೂದಿಗೆರೆ ಕೆ.ಶ್ರೀನಿವಾಸ್ ಗೌಡ, ನಿರ್ದೇಶಕ ಬೀಸೇಗೌಡ, ಮುಖಂಡರಾದ ಕೃಷ್ಣಪ್ಪ, ದೊಡ್ಡಚಿಕ್ಕಣ್ಣ, ಚಿಕ್ಕೇಗೌಡ, ಆಧುನಿಕ ಬೇಸಾಯ ಹಾಗೂ ಕೃಷಿ ಬಗ್ಗೆ ತಿಳಿಸುವ ಕೆವಿಕೆಯ ಡಾ.ವೀರನಾಗಪ್ಪ, ಕುಂದಾಣ ಹೋಬಳಿ ಕೃಷಿ ಅಧಿಕಾರಿ ಮನಿಲ, ತೋಟಗಾರಿಕೆ ಇಲಾಖೆಯ ಪೂರ್ಣಿಮ, ರೇಷ್ಮೆ ಇಲಾಖೆಯ ಶ್ರೀನಿವಾಸಪ್ಪ, ರೈತ ಮುಖಂಡರು, ಗ್ರಾಮಸ್ಥರು ಇದ್ದರು.