Advertisement

ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ

11:55 PM Jul 27, 2019 | mahesh |

1960ರಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ಭತ್ತ, ಗೋಧಿ ಮತ್ತು ಇತರ ಬೆಳೆಗಳು ಆಧುನಿಕ ಕೃಷಿ ಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು. ಆದರೆ ಇದರಿಂದ ಬೇಡಿಕೆ, ಪೂರೈಕೆಗಳ ನಡುವಿನ ಅಂತರ ಕಡಿಮೆ ಮಾಡಿತ್ತು. ಕೃಷಿ ಉತ್ಪನ್ನಗಳ ಬೆಲೆ ಏರುಪೇರಿಗೂ ಕಾರಣವಾಗಿತ್ತು. ಅತಿಯಾದ ರಸಗೊಬ್ಬರ, ರಾಸಾಯನಿಕ ಬಳಕೆ ನಿಧಾನವಾಗಿ ಮಣ್ಣಿನಲ್ಲಿದ್ದ ನೈಸರ್ಗಿಕ ಅಂಶಗಳನ್ನು ಕಡಿಮೆಯಾಗುವಂತೆ ಮಾಡಿತ್ತು.

Advertisement

ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಬರ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಚಟುವಟಕೆ ಮುಖ್ಯವಾಗಿರುವ ಭಾಗಗಳಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ, ವಾತಾವರಣಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಯೋಜನೆ ಅಗತ್ಯ. ಆ ಮೂಲಕ ಬೇಡಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳನ್ನು ಪೂರೈಸುವುದು ಇತ್ತೀಚೆಗಿನ ದಿನಗಳಲ್ಲಿ ಅನಿವಾರ್ಯ. ಹೀಗಾಗಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಯುವುದು ಉತ್ತಮ ಮಾರ್ಗ.

ರಕ್ಷಣೆಗಾಗಿ ಸಿರಿಧಾನ್ಯ
ಇಂದು ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಸಿರಿಧಾನ್ಯ ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದು. ಇವುಗಳಿಗೆ ಭತ್ತ, ಗೋಧಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇ. 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯುವುದಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡುತ್ತದೆ.

ಕೃಷಿ ಧಾನ್ಯ ಬೆಳೆಯುವ ಬಗೆ
ಭಾರತದಲ್ಲಿ ಕೃಷಿಕರು ಕೇವಲ ಧಾನ್ಯ ಬೆಳೆಯನ್ನೇ ನಂಬಿ ಕುಳಿತಿರಲು ಸಾಧ್ಯವಿಲ್ಲ. ಅಕ್ಕಿ ಮತ್ತು ಗೋಧಿ ಭಾರತದ ಆಹಾರ ಪದ್ಧತಿಯಲ್ಲಿ ಅತಿ ಪ್ರಮುಖ ಸ್ಥಾನ ಪಡೆದಿವೆ. ಹೀಗಾಗಿ ಸಂಪೂರ್ಣ ಧಾನ್ಯ ಬೆಳೆಯುವುದು, ಉಪಯೋಗಿಸುವುದು ಸಾಧ್ಯವಿಲ್ಲ. ಆದರೆ ಧಾನ್ಯಗಳನ್ನು ಒಂದು ಪ್ರಮುಖ ಬೆಳೆಯ ಅನಂತರ ಉಪಬೆಳೆಯಾಗಿ, ಮತ್ತೂಂದು ಬೆಳೆಯ ಮಧ್ಯದಲ್ಲಿ ಬೆಳೆಯಬಹುದು. ಇದು ಮಣ್ಣಿನ ಫ‌ಲವತ್ತತೆ ಕಾಪಾಡಲು ವಿವಿಧ ರೀತಿಯಲ್ಲಿ ನೆರವಾಗುತ್ತದೆ.

ಆದರೆ ಧಾನ್ಯಗಳನ್ನು ಬೆಳೆಯಲು ಸಾಕಷ್ಟು ಹಿನ್ನಡೆಗಳಿವೆ. ಭತ್ತ ಮತ್ತು ಗೋಧಿಗಿಂತ ಕಡಿಮೆ ಇಳುವರಿ ನೀಡುವ ಕಾರಣದಿಂದ ಕೃಷಿಕರು ಇದರ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಮಳೆ ಮತ್ತು ನೀರಿನ ಕೊರತೆ ಇಲ್ಲದೆ ಇದ್ದರೆ ರೈತರು ಸಾವಯವ ಕೃಷಿ ಕಡೆಗೆ ಮನಸ್ಸು ಮಾಡುವುದು ಕಡಿಮೆ. ಈ ಸಮಸ್ಯೆಗೆ ಇತ್ತೀಚೆಗೆ ರಾಜ್ಯ ಸರಕಾರದ ಅನೇಕ ಸಂಸ್ಥೆಗಳು ಪರಿಹಾರ ನೀಡುವ ಪ್ರಯತ್ನ ಮಾಡುತ್ತಿವೆೆ. ರಾಜ್ಯದ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡರು ಧಾನ್ಯಗಳ ಬೇಡಿಕೆ ಹೆಚ್ಚಿಸಲು ಹಲವು ಕ್ರಮ ಕೈಗೊಂಡಿದ್ದರು.

Advertisement

ಪರಿಸರ ರಕ್ಷಣೆ
ಭಾರತದಲ್ಲಿ ಕೃಷಿ ಚಟುವಟಿಕೆಗಳು ಒಂದೆರಡು ತಿಂಗಳಿನಲ್ಲಿ ಬದಲಾಗಲು ಸಾಧ್ಯವಿಲ್ಲ. ಅದಕ್ಕೆ ವರ್ಷಗಳೇ ಬೇಕು. ಇಂದು ಆರಂಭ ಮಾಡಿದರೆ ಮುಂದಿನ ಪೀಳಿಗೆಗಾದರೂ ಸಾವಯವ ಕೃಷಿ ಕಡೆಗೆ ಗಮನ ಕೊಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬಹುದು. ಕರ್ನಾಟಕದಲ್ಲಿ ಕೇವಲ 6 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4,000 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದರೆ ಇಂದು 98,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾತಾವರಣ, ಭೂಮಿಯ ರಕ್ಷಣೆ ಸಾಧ್ಯ.

ಅಧಿಕ ಪೋಷಕಾಂಶ
ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶ ಇದೆ. ಕಡಿಮೆ ಪ್ರಮಾಣದ ಗ್ಲೇಮಿಕ್‌ ಇಂಡೆಕ್ಸ್‌, ಹೆಚ್ಚಿನ ಫೈಬರ್‌ ಅಂಶಗಳು ಇರುವುದರಿಂದ ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಹೈಪರ್‌ಟೆನ್ಶನ್‌ ಮತ್ತು ಅನೀಮಿಯಾ ವಿರುದ್ಧ ಈ ಮಿಲ್ಲೆಟ್ಸ್‌ ಹೋರಾಡುತ್ತದೆ.

ಅಪೌಷ್ಟಿಕತೆ ಸಮಸ್ಯೆ
ವಿಶ್ವದಲ್ಲಿ ಲಕ್ಷಾಂತರ ಜನರು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಇಥಿಯೋಪಿಯಾದಿಂದ ಹಿಡಿದು ಭಾರತದವರೆಗೂ ಅಪೌಷ್ಟಿಕತೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಸಿರಿಧಾನ್ಯಗಳಲ್ಲಿ ಹಸಿವನ್ನು ತಗ್ಗಿಸುವ ಸಾಮರ್ಥ್ಯ ಅಕ್ಕಿಗಿಂತಲೂ ಹೆಚ್ಚಾಗಿದೆ. ಹಸಿವನ್ನು ನೀಗಿಸಲು ಈ ಸ್ಮಾರ್ಟ್‌ಫ‌ುಡ್‌ ಸಹಕಾರಿ ಎನ್ನುತ್ತಾರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಮಿಲ್ಲೆಟ್ ರೀಸರ್ಚ್‌ ವಿಭಾಗದ ನಿರ್ದೇಶಕ ವಿಲಾಸ್‌ ತೋನಪಿ ಅವರು.

ಫ‌ಲವತ್ತತೆ ಉತ್ತಮ
ಸಿರಿಧಾನ್ಯ ಬೆಳೆಯುವುದರಿಂದ ಮಣ್ಣಿನ ಫ‌ಲವತ್ತತೆ ಉತ್ತಮಗೊಳಿಸಬಹುದು. ಸತತ ಕೃಷಿ ಚಟುವಟಿಕೆಯಿಂದ ಚಿಕ್ಕ ಬ್ರೇಕ್‌ ಕೂಡ ಭೂಮಿಗೆ ಸಿಗುತ್ತದೆ. ಮಣ್ಣಿನ ಸವೆತ, ನೀರಿನ ಸಂರಕ್ಷಣೆ ಕೂಡ ಇದರಿಂದ ಸಾಧ್ಯ, ಆರೋಗ್ಯ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ.ಸಮರ್ಥ ಜೈವಿಕ ಕೃಷಿ
ಜೈವಿಕ ಕೃಷಿ ಮೂಲಕವೇ ಪರಿಸರ ಹಾಗೂ ನೀರಿನ ಸಂರಕ್ಷಣೆ ಕಷ್ಟ. ಆದರೆ ಅದಕ್ಕೆ ಬೇಕಾದ ಬೇರೆ ಮಾರ್ಗಗಳನ್ನು ಆಯ್ದುಕೊಳ್ಳಬೇಕು. ಕಡಿಮೆ ರಸಗೊಬ್ಬರ ಬಳಕೆ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರಗಳ ಬಳಕೆ, ಹನಿ ನೀರಾವರಿ ಪದ್ಧತಿ ಮತ್ತು ಸಾವಯವ ಗೊಬ್ಬರಗಳ ಬಳಕೆ ಕೃಷಿ ಚಟುವಟಿಕೆಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಸಾಕಷ್ಟು ಉಪಕಾರಿಯಾಗಿದೆ. ರಾಜ್ಯ ಸರಕಾರ ಹಲವು ಎನ್‌ಜಿಒಗಳು ಈ ಬಗ್ಗೆ ಅರಿವು ಮೂಡಿಸಲು ರೈತರ ಜತೆ ಸಂವಾದ ನಡೆಸುತ್ತಿವೆ. ಉದಾ: ಇಂಡಿಯನ್‌ ಕಲ್ಚರಲ್ ರಿಸರ್ಚ್‌ ಮತ್ತು ಆ್ಯಕ್ಷನ್‌ ಸುಮಾರು 5,000 ಕೃಷಿಕರ ಜತೆ ಕೆಲಸ ಮಾಡುತ್ತಿದೆ. ಇದು ಹಲವು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವ ಯೋಜನೆಯನ್ನು ರೈತರಿಗೆ ತಿಳಿಹೇಳುತ್ತಿದೆ. ಅಲ್ಲದೆ ಕಡಿಮೆ ನೀರಿನ ಬಳಕೆ, ಕಡಿಮೆ ರಾಸಾಯನಿಕ ಬಳಕೆಗೂ ಉತ್ತೇಜನ ನೀಡುತ್ತಿದೆ

.ಜಯಾನಂದ ಅಮೀನ್‌ ಬನ್ನಂಜೆ
Advertisement

Udayavani is now on Telegram. Click here to join our channel and stay updated with the latest news.

Next