Advertisement

Mudhol: ಶಿರೋಳ ರೈತನ ಕೈ ಹಿಡಿದ ಸಾವಯವ ಕೃಷಿ

12:38 PM Aug 19, 2024 | Team Udayavani |

ಮುಧೋಳ: ಕೃಷಿಯನ್ನೇ ಮುಖ್ಯ ಕಸಬನ್ನಾಗಿಸಿಕೊಂಡಿರುವ ಶಿರೋಳ ಗ್ರಾಮದ ರಾಚಪ್ಪ ಕಲ್ಲೊಳ್ಳಿ ಅವರು ತಮ್ಮ ಜಮೀನಿಗೆ ತಮ್ಮ ಮನೆಯ ಜಾನುವಾರುಗಳ ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಸೂಕ್ತ ನಿರ್ವಹಣೆ, ಸಮಯೋಚಿತ ಯೋಜನೆಯಿಂದ ತಮ್ಮ 40 ಎಕರೆ ಜಮೀನಿಗೆ ಸಂಪೂರ್ಣವಾಗಿ ಸಾವಯವ ಗೊಬ್ಬರ ಬಳಸುತ್ತಾರೆ.

Advertisement

20 ಜಾನುವಾರು

ರಾಚಪ್ಪನವರು ಸಾವಯವ ಗೊಬ್ಬರ ದೃಷ್ಟಿಯಿಂದಲೇ ತಮ್ಮ ಜಮೀನಿನಲ್ಲಿ ಜವಾರಿ ಹಸು, ಕಿಲಾರಿ ಹೋರಿ, ಎಮ್ಮೆ ಸೇರಿದಂತೆ 20 ಜಾನುವಾರು ಸಾಕಿದ್ದಾರೆ. ಅವುಗಳ ಸಗಣಿಯನ್ನು ಸಂಗ್ರಹಿಸಿ ವರ್ಷಕ್ಕೊಮ್ಮೆ ಹೊಲಕ್ಕೆ ಬಳಸುತ್ತಾರೆ. ಇದರಿಂದ ಮಣ್ಣಿನ ಸಾರ ಹೆಚ್ಚಿ ಅಧಿಕ ಇಳುವರಿ ಪಡೆಯುತ್ತಾರೆ.

ಜಾನುವಾರು ಮೂತ್ರ ಬಳಕೆಯ ಸೂಕ್ತ ನಿರ್ವಹಣೆ

ಎಲ್ಲ ದನಗಳನ್ನು ಒಂದೇ ಸ್ಥಳದಲ್ಲಿ ಕಟ್ಟಿ ಅವುಗಳ ಮೂತ್ರವನ್ನು ವ್ಯರ್ಥವಾಗಲು ಬಿಡಲ್ಲ. ಅದರೊಂದಿಗೆ ಜಾನುವಾರು ಮೈತೊಳೆಯುವ ನೀರನ್ನೂ ಪೈಪ್‌ಲೈನ್‌ ಮೂಲಕ ಪಕ್ಕದಲ್ಲೇ ನಿರ್ಮಿಸಿರುವ ಸಿಮೆಂಟ್‌ ಹೊಂಡದಲ್ಲಿ ಸಂಗ್ರಹಿಸಿ ಅದನ್ನು ಪೈಪ್‌ ಮೂಲಕ ಹೊಲಕ್ಕೆಲ್ಲ ಸಿಂಪಡಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

Advertisement

ಹನಿ ನೀರಾವರಿಯಿಂದ ಹೆಚ್ಚು ನೆರವು

ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವ ರೈತ ರಾಚಪ್ಪನವರು ಹೊಲದ ಬಹುತೇಕ ಭಾಗವನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದ್ದಾರೆ. ಮೂತ್ರದ ತೊಟ್ಟಿ ಪಕ್ಕದಲ್ಲಿರುವ ಮೋಟರ್‌ ಸಹಾಯದಿಂದ ಮುಖ್ಯ ನೀರಿನ ಪೈಪ್‌ಗೆ ಸಂಪರ್ಕ ಕಲ್ಪಿಸಿ ಅದರಿಂದ ಮೂತ್ರ ಮಿಶ್ರಿತ ನೀರನ್ನು ಜಮೀನಿಗೆ ಉಣಿಸುತ್ತಾರೆ.

ಮೂರು ವರ್ಷಕ್ಕೊಮ್ಮೆ ಸಾವಯವ ಗೊಬ್ಬರ

ತಮ್ಮ ಜಾನುವಾರುಗಳಿಂದಲೇ ಸಂಗ್ರಹವಾಗುವ ಅಪಾರ ಪ್ರಮಾಣದ ಸಗಣಿ ಗೊಬ್ಬರ ಸಂಗ್ರಹಿಸಿ ನಿರ್ದಿಷ್ಟ ಸಮಯದಲ್ಲಿ ತಾವು ಹಾಕಿರುವ ಯೋಜನೆಯಂತೆ ಹೊಲಕ್ಕೆ ಉಣಿಸುತ್ತಾರೆ. ಒಂದು ಪ್ರದೇಶಕ್ಕೆ ಒಮ್ಮೆ ಗೊಬ್ಬರ ಹಾಕಿದರೆ ಮೂರು ವರ್ಷದವರೆಗೆ ಆ ಜಮೀನಿನಲ್ಲಿ ಉತ್ತಮ ಬೆಳೆ ತೆಗೆಯುತ್ತಾರೆ. ಹೀಗೆ ಒಂದು ಪ್ರದೇಶಕ್ಕೆ ಮೂರು ವರ್ಷಕ್ಕೊಮ್ಮೆ ಗೊಬ್ಬರ ಹಾಕುವುದರಿಂದ ಮಣ್ಣಿನ ಸತ್ವ ಹಾಗೂ ಫಲವತತ್ತೆ ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಾರೆ.

ಮುಧೋಳ: ಶಿರೋಳದ ರೈತ ರಾಚಪ್ಪ ಕಲ್ಲೊಳ್ಳಿ ನೀರಿನೊಂದಿಗೆ ಜಾನುವಾರು ಮೂತ್ರ ಮಿಶ್ರಣಕ್ಕೆ ನಿರ್ಮಿಸಿರುವ ಸಿಮೆಂಟ್‌ ತೊಟ್ಟಿ. 

ಕಬ್ಬಿನ ರವದಿ ಗೊಬ್ಬರ

ಕಬ್ಬು ಬೆಳೆಯುವ ಬಹುತೇಕ ರೈತರು ಕಬ್ಬು ಕಟಾವು ನಂತರ ಹೊಲದಲ್ಲಿನ ರವದಿ ಸುಟ್ಟು ಹಾಕುತ್ತಾರೆ. ಇದರಿಂದ ಮಣ್ಣಿನ ಸಾರ ಕ್ಷೀಣಿಸುತ್ತದೆ. ಇದನ್ನು ಮನಗಂಡಿರುವ ರಾಚಪ್ಪ, ತಮ್ಮ ಹೊಲದಲ್ಲಿನ ರವದಿಯನ್ನೆಲ್ಲ ಒಂದೆಡೆ ಸಂಗ್ರಹಿಸಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಮರಳಿ ತಮ್ಮ ಜಮೀನಿಗೆ ಬಳಸುತ್ತಾರೆ.

80 ಟನ್‌ ಇಳುವರಿ

ನಿರಂತರ ಸಾವಯವ ಗೊಬ್ಬರ ಬಳಸುತ್ತಿರುವ ರೈತ ರಾಚಪ್ಪ ಅದಕ್ಕೆ ತಕ್ಕಂತೆ ಇಳುವರಿ ತೆಗೆದಿದ್ದಾರೆ. ಪ್ರತಿ ಎಕರೆಗೆ 80 ಟನ್‌ವರೆಗೂ ಕಬ್ಬು ಬೆಳೆದು ಈ ಭಾಗದಲ್ಲಿ ಪ್ರಗತಿಪರ ರೈತರೆನಿಸಿದ್ದಾರೆ.

ರಾಸಾಯನಿಕ ಗೊಬ್ಬರದಿಂದ ಭೂಮಿ ಹೆಚ್ಚಿನ ಹಾನಿಯುಂಟಾಗುತ್ತದೆ. ನಮ್ಮ ಮನೆಯಲ್ಲಿ ಹೆಚ್ಚು ಜಾನುವಾರು ಸಾಕಿ ಅವುಗಳಿಂದ ಗೊಬ್ಬರ ಪಡೆಯುವುದು ಉತ್ತಮ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಹೆಚ್ಚಿನ ಇಳುವರಿ ಸಿಗುತ್ತದೆ. ಜಾನುವಾರು ಸಾಕಾಣೆಯಿಂದ ಹೈನುಗಾರಿಕೆಗೂ ಹೆಚ್ಚಿನ ಅನುಕೂಲವಾಗುತ್ತದೆ.
ರಾಚಪ್ಪ ಕಲ್ಲೊಳ್ಳಿ, ಶಿರೋಳ ರೈತ

ಗೋವಿಂದಪ್ಪ ತಳವಾರ

 

 

Advertisement

Udayavani is now on Telegram. Click here to join our channel and stay updated with the latest news.

Next