Advertisement

ರಾಮನಗರ ಮ್ಯಾರಥನ್‌ನಲ್ಲಿ ಸಾವಯವ ಕೃಷಿ ಅರಿವು

04:23 PM Feb 12, 2018 | |

ರಾಮನಗರ: ಬೆಳ್ಳಂಬೆಳಗ್ಗೆ 6.30ರ ವೇಳೆಗೆ ಸೂರ್ಯನ ಬೆಳಕು ಮೂಡುವ ವೇಳೆಗೆ ಆಯೋಜಕರು ನೀಡಿದ ಟೀ ಶರ್ಟ್‌,  ನಂಬರ್‌ ಪ್ಲೇಟ್‌ ಧರಿಸಿದ್ದ ಉತ್ಸಾಹಿ ಓಟಗಾರರಿಗೆ ವಾತಾವರಣವೂ ಸಹಕರಿಸಿತು. ಸೂರ್ಯನ ತಿಳಿ ಕಿರಣಗಳು, ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರಕೃತಿ, ಸುತ್ತಮುತ್ತಲು  ಬೆಟ್ಟಗುಡ್ಡಗಳ ರಮ್ಯ ನೋಟ, ಅಪ್ಪಟ ಗ್ರಾಮೀಣ ಸೊಗಡು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಓಟಗಾರರ ಹುಮ್ಮಸನ್ನು ಇಮ್ಮಡಿಗೊಳಿಸಿದವು. ರೀಡಿಫೈನ್‌ 21.1 ಕಿಮೀ, ರಾಕ್‌ 11 ಕಿಮೀ, ರೂರಲ್‌ 7 ಕಿಮೀ,  ವಿದ್ಯಾರ್ಥಿ 7 ಕಿಮೀ, ಹಿರಿಯ 7 ಕಿಮೀ, ಓಟ ಹೀಗೆ 5 ವಿಭಾಗಗಳಲ್ಲಿ ಓಟ ನಡೆಯಿತು.

Advertisement

ಮ್ಯಾರಥನ್‌ನಲ್ಲಿ ವಿದೇಶಿಗರ ಆಕರ್ಷಣೆ: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಸಾಮಾನ್ಯ ನಾಗರಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸುಮಾರು 1200ಕ್ಕೂ ಹೆಚ್ಚು ಮಂದಿ  ಸಾವಯವ ಕೃಷಿ ಪದ್ಧತಿ ಮತ್ತು ಈ ಪದ್ಧತಿಯಿಂದ ಬೆಳೆದ ಆಹಾರ ಪದಾರ್ಥಗಳಿಗೆ ಪ್ರೋತ್ಸಾಹ ನೀಡುವ ಪ್ರತಿಜ್ಞೆಯೊಂದಿಗೆ ಅತ್ಯಂತ ಉತ್ಸಾಹದಿಂದ ಓಟ ನಡೆಸಿದರು. ಈ ಬಾರಿಯ ಓಟದಲ್ಲಿ ಕೆಲವು ವಿದೇಶಿಯರು, 25ಕ್ಕೂ ಹೆಚ್ಚು ರೈತರು  ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹಿರಿಯ ನಾಗರಿಕರು ಭಾಗಿ: ಯಲ್ಲೋ ಆಂಡ್‌ ರೆಡ್‌ ಫೌಂಡೇಶನ್‌ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮ್ಯಾರಥಾನ್‌ ಆಯೋಜನೆಯಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆಗಳು ಮ್ಯಾರಥಾನ್‌ಗೆ ಸಹಕಾರ ನೀಡಿದ್ದವು. ಮ್ಯಾರಥಾನ್‌ನಲ್ಲಿ ಹಿರಿಯ ನಾಗರಿಕರು ಸೇರಿದಂತೆ ಹದಿಹರೆಯದ ಬಾಲಕ, ಬಾಲಕಿಯರು ಭಾಗವಹಿಸಿದ್ದರು. ಓಟ ಮುಗಿಸಿ ಬಂದವರಿಗೆ ಗಣ್ಯರು ಮೆಡಲ್‌, ಪ್ರಶಸ್ತಿ ಪತ್ರಗಳನ್ನು ಕೊಟ್ಟು ಪ್ರೋತ್ಸಾಹಿಸಿದರು. 300ಕ್ಕೂ ಹೆಚ್ಚು ಮಂದಿಗೆ ಸಸಿಗಳನ್ನು ವಿತರಿಸಲಾಯಿತು. ಓಟದ ಮಾರ್ಗದಲ್ಲಿ ಸಿಗುವ 3 ಸರ್ಕರಿ ಶಾಲೆಗಳ ವಿದ್ಯಾರ್ಥಿಗಳಿಗೆ ಜಾಮಿಟ್ರಿ ಬಾಕ್ಸ್‌ ಮತ್ತು ಕ್ರೆಯಾನ್‌ಗಳನ್ನು ಸ್ಪಂದನಾ ಚಾರಿಟಬಲ್‌ ಟ್ರಸ್ಟ್‌ ಪರವಾಗಿ ಓಟಗಾರರು ನೀಡಿದರು.

ಎಸ್ಪಿ ಬಿ.ರಮೇಶ್‌, ಪ್ರಾದೇಶಿಕ ನಿರ್ದೇಶಕ ನಂಬಿರಾಜನ್‌, ಚಿತ್ರನಟರಾದ ಚಂದನ್‌ಗೌಡ, ವಿನಾಯಕ್‌ ಜೋಷಿ, ರಾಮನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು, ಯಲ್ಲೋ ಆ್ಯಂಡ್‌ ರೆಡ್‌ ಸಂಸ್ಥೆಯ ಅಮಿತ್‌ರಾಜ್‌ ಶಿವು, ನಿರ್ದೇಶಕರಾದ ಆನಂದ ಶಿವ, ಗೇಲ್‌ ಇಂಡಿಯಾ ಲಿಮಿಟೆಡ್‌ನ‌ ಶ್ಯಾಮ್‌ ಕೋಟ್ಲ,  ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷ ಎಲ್‌.ಪ್ರಭಾಕರ್‌, ಸದಸ್ಯರಾದ ಕೆ.ವಿ.ಉಮೇಶ್‌, ಅನುರಾಧಾ, ಕೆಂಗಲ್‌ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಆಚಾರ್‌ ಭಾಗವಹಿಸಿದ್ದರು.

ಎಸ್ಪಿ ಹುಟ್ಟುಹಬ್ಬಕ್ಕೆ ಗಿಫ್ಟ್: ಎಸ್ಪಿ ರಮೇಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಲ್ಲೋ ಆ್ಯಂಡ್‌ ರೆಡ್‌ ಸಂಸ್ಥೆಯ ಪದಾಧಿಕಾರಿಗಳು ಇದೇ ವೇಳೆ ಸರಳ ಕಾರ್ಯಕ್ರಮ ಹಮ್ಮಿಕೊಂಡರು.  ಎಸ್ಪಿ ರಮೇಶ್‌ ಕೇಕ್‌ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

Advertisement

ಸಾವಯವ ಕೃಷಿ ಬಗ್ಗೆ ಜನರಲ್ಲಿ ಜಾಗೃತಿ: ಡೀಸಿ ಮಮತಾ
ರಾಮನಗರ:
ಸಾವಯವ ಕೃಷಿ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಲ್ಲಿ  ರಾಮನಗರ ಮ್ಯಾರಥಾನ್‌ ನಡೆದಿದ್ದು ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿ  ಡಾ.ಬಿ.ಆರ್‌.ಮಮತಾ ಹೇಳಿದರು. ತಾಲೂಕಿನ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ  6.30ರ ವೇಳೆಗೆ ರಾಮನಗರ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯಲ್ಲೋ ಆ್ಯಂಡ್‌ ರೆಡ್‌ ಫೌಂಡೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ ಶಿವ ಮಾತನಾಡಿ, ಸಾವಯವ ಕೃಷಿ ಪದ್ಧತಿ ಗ್ರಾಹಕರ ಮಟ್ಟಿಗೆ ಚಿಂತಿಸುವುದಾದರೆ ಆರೋಗ್ಯಕರ ಆಹಾರ ಪದಾರ್ಥಗಳು ದೊರೆಯುವುದರ ಜೊತೆಗೆ ಪರಿಸರದ ಮೇಲೂ ಯಾವ ದುಷ್ಪರಿಣಾಮೂ ಬೀರುವುದಿಲ್ಲ ಎಂದರು.  

ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮರಣಾನಂತರ ಅಂಗಾಂಗ ದಾನವೂ ಸಾಧ್ಯ. 2025ರ ಹೊತ್ತಿಗೆ ರಾಮನಗರ ಅಭಿವೃದ್ಧಿ ಪಥದ ಚಿಂತನೆ ಬಗ್ಗೆ ಮನವರಿಕೆ ಮಾಡುವುದು ಸಹ ಮ್ಯಾರಥಾನ್‌ನ ಮತ್ತೂಂದು ಉದ್ದೇಶವಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next