Advertisement

ಮನೆ ಬಳಿಗೆ ಬರಲಿದ್ದಾನೆ ಆರ್ಗ್ಯಾನಿಕ್‌ ಗಾಡಿವಾಲ

03:23 PM Sep 16, 2018 | |

ಸಾವಯವ ಆಹಾರ ಉತ್ಪನ್ನಗಳನ್ನು ಕೊಳ್ಳಲು ಪೇಟೆಗಳಲ್ಲಿ ಅಲೆಯಬೇಕಿಲ್ಲ. ಏಕೆಂದರೆ ಸಾವಯವ ತರಕಾರಿ, ಹಣ್ಣುಗಳನ್ನು ಹೊತ್ತ ಆರ್ಗ್ಯಾನಿಕ್‌ ಗಾಡಿವಾಲಾನೇ ಇನ್ನು ಮುಂದೆ ಮನೆ ಬಳಿ ಪ್ರತ್ಯಕ್ಷಗೊಳ್ಳಲಿದ್ದಾನೆ! ಸಾವಯವ ಆಹಾರ ಉತ್ಪನ್ನಗಳಿಗೆ ಒತ್ತು ನೀಡುವುದರೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಂಗ ಳೂರು ನಗರದ ಇಕೋ ಫ್ರೆಂಡ್ಸ್‌ ಗ್ರೂಪ್‌ ಆರ್ಗ್ಯಾನಿಕ್‌ ಗಾಡಿಗಳನ್ನು ಪರಿಚಯಿಸುತ್ತಿದೆ. ವಿಶೇಷವೆಂದರೆ ಅ. 2ರ ಗಾಂಧಿ ಜಯಂತಿಯಂದೇ ಮಂಗಳೂರಿನಲ್ಲಿ ಆರ್ಗ್ಯಾನಿಕ್‌ ಗಾಡಿವಾಲಾ ಹಾಜರಾಗಲಿದ್ದಾನೆ.

Advertisement

ನಗರದಲ್ಲಿ ಸಾವಯವ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲೆಂದೇ ಹದಿನೈದು ತಳ್ಳು ಗಾಡಿಗಳನ್ನು ತರಿಸಲಾಗಿದೆ. ಗಾಡಿ ಬೆಂಗಳೂರಿನಲ್ಲಿ ಡಿಸೈನ್‌ ಮಾಡಲಾಗಿದ್ದು, ಹಸುರು ಬಣ್ಣವನ್ನು ಹೊಂದಿದ್ದು, ಆರ್ಗ್ಯಾನಿಕ್‌ ಗಾಡಿವಾಲಾ ಎಂದು ಹೆಸರಿಡಲಾಗಿದೆ. ಬಿಜೈ, ಕದ್ರಿ, ಮಣ್ಣಗುಡ್ಡೆಯಲ್ಲಿ ಮೊದಲ ಹಂತದಲ್ಲಿ ಇದನ್ನು ಪರಿಚಯಿಸಲಾಗುತ್ತದೆ. ಅತಿ ಹೆಚ್ಚು ಜನವಾಸ ಇರುವಲ್ಲಿ ಗಾಡಿ ಪಾರ್ಕ್‌ ಮಾಡಿ ಮಾರಾಟ ನಡೆಸಲಾಗುತ್ತದೆ. 

ಶೇ. 70 ಲಾಭ ರೈತರಿಗೆ
ಸಾವಯವ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ ಈ ಸಂಸ್ಥೆಯದ್ದು. ದಕ್ಷಿಣ ಕನ್ನಡ ಮಾತ್ರವಲ್ಲದೆ, ಮಂಡ್ಯ, ಬೆಂಗಳೂರು ಮತ್ತು ರಾಮನಗರದ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನು ತರಿಸಿ ಈ ಗಾಡಿಯ ಮುಖಾಂತರ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಬಂದ ಶೇ. 70ರಷ್ಟು ಹಣವನ್ನು ರೈತರಿಗೇ ನೇರವಾಗಿ ನೀಡಲಾಗುತ್ತದೆ. ಗಾಡಿಯಲ್ಲಿ ಮಾರಾಟಕ್ಕೆ ಕುಳಿತವರಿಗೆ ದಿನಕ್ಕೆ 200 ರೂ. ಗಳಿಂದ 250 ರೂ. ಗಳನ್ನು ಸಂಬಳ ನೀಡಲಾಗುತ್ತದೆ. ಉಳಿದ ಹಣವನ್ನು ಇತರ ಖರ್ಚು ವೆಚ್ಚಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಇಕೋ ಫ್ರೆಂಡ್ಸ್‌ನ ಮುಖ್ಯಸ್ಥ ರಾಜೇಶ್‌ ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಪರಿಚಯ
ಮೊದಲ ಬಾರಿಗೆ ಮಂಗಳೂರಿನಲ್ಲಿ ಆರ್ಗ್ಯಾನಿಕ್‌ ಗಾಡಿವಾಲನನ್ನು ಪರಿಚಯಿಸಲಾಗುತ್ತಿದ್ದು, ದಸರಾ ಸಂದರ್ಭ ಮೈಸೂರಿನಲ್ಲಿ ಹಾಗೂ ಬಳಿಕ ಹುಬ್ಬಳ್ಳಿಯಲ್ಲಿ ಗಾಡಿಯನ್ನು ಇಡಲಾಗುವುದು ಎಂದು ತಂಡದ ಪ್ರಮುಖರು ಹೇಳುತ್ತಾರೆ. ಮಂಗಳೂರಿನಲ್ಲಿ ಶನಿವಾರ, ರವಿವಾರ ಹಾಗೂ ಸೋಮವಾರ, ಮಂಗಳವಾರ ಆರ್ಗ್ಯಾನಿಕ್‌ ಗಾಡಿವಾಲದಲ್ಲಿ ಖರೀದಿ ಮಾಡಬಹುದು. ಆರಂಭಿಕ ಹಂತದಲ್ಲಿ ಬೆಳಗ್ಗೆ 7ರಿಂದ 10.30ರ ತನಕ ಗಾಡಿ ಇರಲಿದೆ. ಮುಂದಿನ ದಿನಗಳಲ್ಲಿ ಸಂಜೆಯೂ ಮಾರಾಟದ ವ್ಯವಸ್ಥೆ ಮಾಡುವ ಯೋಜನೆ ತಂಡದ ಮುಂದಿದೆ. 

ಉಚಿತ ಗಾಡಿ
ಮಾರಾಟಗಾರರಿಗೆ ಉಚಿತವಾಗಿಯೇ ತಳ್ಳುಗಾಡಿಗಳನ್ನು ನೀಡಲಾಗುತ್ತದೆ. ಪ್ಯಾಕ್‌ ಆದ ಪದಾರ್ಥಗಳನ್ನೇ ನೀಡಲಾಗುವುದು. ಈಗಾಗಲೇ ಸಾವಯವ ಉತ್ಪನ್ನಗಳನ್ನು ಬೆಳೆಯಲು ರೈತರಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ಗಾಡಿಯಲ್ಲಿ ಮಾರಾಟ ಮಾಡಲು ಉತ್ಪನ್ನಗಳನ್ನು ನೀಡುವಂತೆ ಜಿಲ್ಲೆಯ ಸಾವಯವ ಬೆಳೆಗಾರರೊಂದಿಗೆ ಮಾತುಕತೆಯನ್ನೂ ನಡೆಸಲಾಗಿದೆ. ಈಗಾಗಲೇ 50 ಗಾಡಿಗಳು ಸಿದ್ಧವಾಗಿದ್ದು, ನಗರಕ್ಕೆ 15 ಗಾಡಿಗಳನ್ನು ತರಿಸಲಾಗಿದೆ. ಮುಂದೆ 150 ಗಾಡಿಗಳನ್ನು ಪರಿಚಯಿಸಲಾಗುವುದು.
-ರಾಜೇಶ್‌, ಇಕೋ ಫ್ರೆಂಡ್ಸ್‌
ಗ್ರೂಪ್‌ ಮುಖ್ಯಸ್ಥರ

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next