ಹೊಸಪೇಟೆ: ಸಾವಿನ ನಂತರವೂ ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪ ಹೊಂದಿದ್ದ ನಗರದ ನಿವಾಸಿ ಟಿ.ನೀಲಾಂಬಿಕಾ (64), ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಆರ್ಯುವೇದ ವೈದಕ್ಯೀಯ ಕಾಲೇಜಿಗೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ ಲಘು ಹೃದಯಾತಕ್ಕೆ ಒಳಗಾಗಿ ಮೃತಪಟ್ಟ ಟಿ.ನೀಲಾಂಬಿಕಾ ಅವರ ಇಚ್ಚೆಯಂತೆ ಅವರ ಪುತ್ರ ಟಿ.ಎಂ.ಗುರುಮಹಾಂತೇಶ್ ಅವರು, ತಮ್ಮ ತಾಯಿಯ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ಹಾಗೂ ದೇಹವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆರ್ಯುವೇದ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮೂಲಕ ಮೃತರ ಅಂತಿಮ ಆಸೆ ಪೂರೈಸಿದ್ದಾರೆ.
ಪ್ರಸ್ತುತ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆರ್ಯುವೇದ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಾಗಿರುವ ಕಾರ್ಯನಿರ್ವಹಿಸುತ್ತಿರುವ ಟಿ.ಎಂ.ಗುರುಮಹಾಂತೇಶ್ ಅವರು ತಾಯಿ ದೇಹವನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಸ್ ನಲ್ಲಿ ಪ್ರತ್ಯಕ್ಷವಾದ ನಾಗರಹಾವು; ಬೆಚ್ಚಿ ಕೆಳಗಿಳಿದ ಪ್ರಯಾಣಿಕರು
ಮೂಲತಃ ಜಿಲ್ಲೆಯ ಕೂಡ್ಲಿಗಿಯ ತಾಸಲವಾಡ ಗ್ರಾಮದ ನಿವಾಸಿಯಾಗಿದ್ದ ಟಿ.ನೀಲಾಂಭಿಕಾ ಪತಿ ಟಿ.ಎಂ. ಬಸಯ್ಯ ಅವರೊಂದಿಗೆ 1983ರಲ್ಲಿ ವಿವಾಹವಾಗಿದ್ದರು. 1986 ರಲ್ಲಿ ನೀರಾವರಿ ಇಲಾಖೆಗೆ ಎಫ್‌ಡಿಎಯಾಗಿ ನೇಮಕವಾಗಿದ್ದರು. ನಂತರ ಕೊಪ್ಪಳ ಮುನಿರಾಬಾದ್ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಕಳೆದ 2018ರಲ್ಲಿ ನಿವೃತ್ತಿ ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಹೊಸಪೇಟೆಯಲ್ಲಿ ವಾಸವಾಗಿದ್ದರು. ಮೃತರು ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಾವಿನಲ್ಲಿ ಸಾರ್ಥಕತೆ ಮೆರೆದ ಟಿ.ನೀಲಾಂಬಿಕಾ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.