Advertisement

ಅಂಗದಾನ : ಪ್ರಾಮುಖ್ಯ, ಸ್ಥಿತಿಗತಿ ಮತ್ತು ಹೆಚ್ಚಬೇಕಾದ ಅಗತ್ಯ

07:32 PM Aug 16, 2020 | Suhan S |

ಅಂಗ ಕಸಿಯನ್ನು ಸ್ವೀಕರಿಸುವ ವ್ಯಕ್ತಿಗಳನ್ನು ಉಳಿಸುವ ಅಥವಾ ಅವರ ಜೀವನ ಮಟ್ಟವನ್ನು ಉತ್ತಮಪಡಿಸುವ ಮೂಲಕ ದಾನ ಮಾಡಲ್ಪಟ್ಟ ಅಂಗಗಳ ಕೊಡುಗೆಯನ್ನು ಗೌರವಿಸುವ ಉದ್ದೇಶವನ್ನು ಅಂಗದಾನ ಮತ್ತು ಕಸಿ ವ್ಯವಸ್ಥೆ ಹೊಂದಿದೆ. ವ್ಯಕ್ತಿಯೊಬ್ಬ ಜೀವ ಉಳಿಸಬಹುದಾದ ಎಂಟು ಅಂಗಗಳನ್ನು ದಾನ ಮಾಡಬಹುದು, ಜತೆಗೆ ಇನ್ನೂ 75 ಮಂದಿಯ ಜೀವನ ಗುಣಮಟ್ಟವನ್ನು ಉತ್ತಮಪಡಿಸಬಹುದಾದ ಅಂಗಾಂಶಗಳನ್ನು ಮತ್ತು ಕಾರ್ನಿಯಾಗಳನ್ನು ದಾನಮಾಡಬಹುದಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ.

Advertisement

ಭಾರತದಲ್ಲಿ ಪಿತ್ತಜನಕಾಂಗ ಕಸಿ :  ಪ್ರತೀ ವರ್ಷ ಜಗತ್ತಿನಲ್ಲಿ ಪ್ರತೀ 10 ಲಕ್ಷ ಮಂದಿಯಲ್ಲಿ 20ರಿಂದ 25 ಮಂದಿಗೆ ಪಿತ್ತಜನಕಾಂಗ ಕಸಿಯ ಅಗತ್ಯವುಂಟಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ 2 ಲಕ್ಷ ಮಂದಿ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ. 20ರಿಂದ 30 ಸಾವಿರ ಮಂದಿಗೆ ಪಿತ್ತಜನಕಾಂಗ ಕಸಿಯ ಅಗತ್ಯವಿರುತ್ತದೆ. ಜಾಗತಿಕ ಮಟ್ಟದಲ್ಲಿ ನೋಡಿದರೆ, ಪ್ರತೀ ವರ್ಷ 25 ಸಾವಿರದಷ್ಟು ಪಿತ್ತಜನಕಾಂಗ ಕಸಿಗಳು ನಡೆಯುತ್ತವೆ. 2011ರಲ್ಲಿ ಇಂಡಿಯನ್‌ ಜರ್ನಲ್‌ ಆಫ್ ಟ್ರಾನ್ಸ್ ಪ್ಲಾಂಟೇಶನ್‌ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ಭಾರತದಲ್ಲಿ 2009ರಲ್ಲಿ ಕೇವಲ 500 ಮತ್ತು 2010ರಲ್ಲಿ 750 ಪಿತ್ತಜನಕಾಂಗ ಕಸಿಗಳು ನಡೆದಿವೆ. ಈ ಅಂಕೆಸಂಖ್ಯೆಯು 2014ರಲ್ಲಿ 2 ಸಾವಿರಕ್ಕೆ ಏರಿಕೆಯಾಗಿದೆಯಾದರೂ ಇದು ಗಣನೀಯವಾಗಿ ಕಡಿಮೆಯೇ. ಕಸಿಗಳ ಸಂಖ್ಯೆಯು ಭಾರತದಲ್ಲಿ ಇಷ್ಟು ಕಡಿಮೆ ಇರುವುದಕ್ಕೆ ಪ್ರಧಾನ ಕಾರಣಗಳು ಎಂದರೆ ದಾನಿಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಕಸಿ ಶಸ್ತ್ರಚಿಕಿತ್ಸೆಯು ದುಬಾರಿಯಾಗಿರುವುದು.

ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆಯು ಅಪೂರ್ವವಾದದ್ದು ಎಂಬ ಸ್ಥಿತಿಯಿಂದ ಸಾಮಾನ್ಯ ಚಿಕಿತ್ಸೆ ಎಂಬ ಮಟ್ಟಕ್ಕೆ ಬೆಳೆದಿದೆ. ಈಗ ದೇಶದ ಉದ್ದಗಲದ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸೆಯು ಲಭ್ಯವಿದ್ದು, ಕಸಿಗೊಳಗಾದವರು ಬದುಕುಳಿಯುವ ಪ್ರಮಾಣವು ಜಗತ್ತಿನ ಅತ್ಯುತ್ತಮ ಕಸಿ ಚಿಕಿತ್ಸಾ ಕೇಂದ್ರಗಳೊಂದಿಗೆ ಹೋಲಿಸಬಹುದಾದಷ್ಟು ಉತ್ತಮವಾಗಿದೆ. ಭಾರತವು ಈಗ ಸಜೀವ ದಾನಿ ಪಿತ್ತಜನಕಾಂಗ ಕಸಿ (ಎಲ್‌ಡಿಎಲ್‌ ಟಿ)ಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. 1990ರ ಹೊತ್ತಿಗೆ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗುವ ದರವು ಶೇ.86 ಇದ್ದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿಯು 5 ವರ್ಷಗಳ ಕಾಲ ಬದುಕುಳಿಯುವ ದರವು ಶೇ. 70 ಇತ್ತು. ಕಳೆದ 5 ವರ್ಷಗಳಲ್ಲಿ ಇದು ಗಮನಾರ್ಹವಾಗಿ ಹೆಚ್ಚಿದೆ.

ಭಾರತದಲ್ಲಿ ಮೃತ ದಾನಿಯಿಂದ ಪಿತ್ತಜನಕಾಂಗ ಕಸಿ (ಡಿಡಿಎಲ್‌ಟಿ)ಯು ಬಹುತೇಕ ದಕ್ಷಿಣ ಭಾರತಕ್ಕೆ ಸೀಮಿತವಾಗಿದೆ. 2015ರ ಅಕ್ಟೋಬರ್‌ ತಿಂಗಳ ಹೊತ್ತಿಗೆ 665 ಮೃತ ದಾನಿಯಿಂದ ಸ್ವೀಕರಿಸಿದ ಪಿತ್ತಜನಕಾಂಗ ಕಸಿಯೊಂದಿಗೆ ತಮಿಳುನಾಡು ಮುಂಚೂಣಿಯಲ್ಲಿತ್ತು. ಪ್ರಸ್ತುತ ಅಲ್ಲಿ ಅಂಗದಾನ ದರವು ಪ್ರತೀ 10 ಲಕ್ಷ ಮಂದಿಗೆ 1.3ಯಷ್ಟಿದೆ. ಒಟ್ಟಾರೆಯಾಗಿ ಭಾರತದಲ್ಲಿ ಪ್ರಸ್ತುತ ಅಂಗದಾನ ದರವು ಪ್ರಸ್ತುತ ಪ್ರತೀ 10 ಲಕ್ಷ ಮಂದಿಗೆ 0.3ರಷ್ಟಿದೆ. ಹೊಂದಿಕೊಳ್ಳಬಲ್ಲ ಅಂಗದಾನಿಗಳು ಸಿಗದೆ ಕಾಯುತ್ತಿರುವ ರೋಗಿಗಳಿಗೆ ಪ್ರಯೋಜನವಾಗಬೇಕಾದರೆ ಈ ಅಂಗದಾನ ದರವು ಪ್ರತೀ 10 ಲಕ್ಷಕ್ಕೆ 5ರಿಂದ 5ಕ್ಕಾದರೂ ಏರಬೇಕಾಗಿದೆ.

ಇದಕ್ಕೆ ಹೋಲಿಸಿದರೆ ಅಮೆರಿಕ, ಬ್ರಿಟನ್‌ ಮತ್ತು ಇನ್ನುಳಿದ ಐರೋಪ್ಯ ದೇಶಗಳಲ್ಲಿ ಅಂಗದಾನ ದರವು ಉತ್ತಮವಾಗಿದ್ದು, ಪ್ರತೀ 10 ಲಕ್ಷ ಮಂದಿಗೆ 18ರಿಂದ 35ರಷ್ಟಿದೆ.

Advertisement

 

ಡಾ| ಶಿರನ್‌ ಶೆಟ್ಟಿ

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು,

ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next