Advertisement

ಕುದುರೆಮುಖ ಕಂಪೆನಿಗೆ ಸಂಡೂರಿನಿಂದ ಅದಿರು

05:21 AM Jan 31, 2019 | |

ಮಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಗೆ ಅದಿರು ಪೂರೈಸಲು ಬಳ್ಳಾರಿ ಜಿಲ್ಲೆ ಸಂಡೂರಿನ ದೇವದಾರಿಯಲ್ಲಿ 470.40 ಹೆಕ್ಟೇರ್‌ ಪ್ರದೇಶದಲ್ಲಿ ಗಣಿ ನಿಕ್ಷೇಪ ಗುರುತಿಸಲಾಗಿದ್ದು, ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಚೌಧರಿ ಬೀರೇಂದ್ರ ಸಿಂಗ್‌ ಹೇಳಿದರು.

Advertisement

ಬುಧವಾರ ಪಣಂಬೂರಿನಲ್ಲಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ ಸ್ಥಾಪಿಸಲಾಗಿರುವ 1.3 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನ ಘಟಕದ ಉದ್ಘಾಟನೆ ಹಾಗೂ ಉದ್ದೇಶಿತ ಕೋಕ್‌ ಒವೆನ್‌ ಸ್ಥಾವರ ಮತ್ತು ಸ್ಪನ್‌ ಪೈಪ್‌ ಉತ್ಪಾದನ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಮೂರು ಯೋಜನೆಗಳ ಅಂದಾಜು ವೆಚ್ಚ 820 ಕೋಟಿ ರೂ. ಆಗಿರುತ್ತದೆ.

ಅಗತ್ಯ ಅನುಮತಿಗಳನ್ನು ಪಡೆದ ಬಳಿಕ ದೇವದಾರಿಯಲ್ಲಿ ಕೆಐಒಸಿಎಲ್‌ ವತಿಯಿಂದ ಅಲ್ಲಿ 2 ಎಂಟಿಪಿಎ ಐರನ್‌ ಓರ್‌ ಬೆನಿಫಿಶಿಯೇಶನ್‌ ಸ್ಥಾವರ ಮತ್ತು 2.0 ಎಂಟಿಪಿಎ ಐರನ್‌ ಆಕ್ಸೈಡ್‌ ಉಂಡೆ ಸ್ಥಾವರ ಸ್ಥಾಪಿಸಲಾಗು ವುದು. ಇದರಿಂದ 2,000ಕ್ಕೂ ಅಧಿಕ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸುವುದು ಎಂದರು.

ದೇಶದಲ್ಲಿ ಡಿಐ ಪೈಪ್‌ಗ್ಳಿಗೆ ಉತ್ತಮ ಬೇಡಿಕೆ ಇದ್ದು, ಪ್ರಸ್ತುತ ಡಿಐಪೈಪ್‌ ಉತ್ಪಾದನೆಯ ಎರಡು ಘಟಕ
ಗಳು ಮಾತ್ರ ಇವೆ. ಹಾಗಾಗಿ ಕೆಐಒಸಿ ಎಲ್‌ ಸ್ಪನ್‌ ಪೈಪ್‌ ಘಟಕಕ್ಕೆ ಉತ್ತಮ ಭವಿಷ್ಯವಿದೆ ಎಂದರು. ಉಕ್ಕು ಸಚಿವಾಲಯದಡಿ ದೊಡ್ಡ ಉಕ್ಕು ಉತ್ಪಾದನ ಘಟಕಗಳನ್ನು ಒಳಗೊಂಡ ಸ್ಟೀಲ್‌ ರಿಸರ್ಚ್‌ ಆ್ಯಂಡ್‌ ಟೆಕ್ನಾಲಜಿ ಮಿಶನ್‌ ಆಫ್‌ ಇಂಡಿಯಾ (ಎಸ್‌ಆರ್‌ಟಿಎಂಐ) ಸಂಸ್ಥೆಯನ್ನು ಸ್ಥಾಪಿಸಿದ್ದು, 200 ಕೋಟಿ ರೂ.ಗಳನ್ನು ಅದಕ್ಕೆ ಒದಗಿಸಲಾಗಿದೆ ಎಂದರು.

ಹೊಸ ಉಕ್ಕು ನೀತಿ ಜಾರಿ 
ಸರಕಾರಿ ಸ್ವಾಮ್ಯದ ಸಂಸ್ಥೆಗಳು ಕೈಗೆತ್ತಿಕೊಳ್ಳುವ ಕಾಮಗಾರಿಗಳಿಗೆ ಮತ್ತು ರಾ.ಹೆ.ಗಳ ಸೇತುವೆ ನಿರ್ಮಾಣಕ್ಕೆ ಬೇಕಾಗುವ ಉಕ್ಕು ಮತ್ತು ಉಕ್ಕಿನ ಸಾಮಗ್ರಿಗಳಿಗೆ ದೇಶೀಯ ಉಕ್ಕು ಸ್ಥಾವರಗಳಲ್ಲಿ ಉತ್ಪಾದಿಸಿದ ಉಕ್ಕು ಮಾತ್ರ ಉಪಯೋಗಿಸಬೇಕೆಂದು ಹೊಸ ಉಕ್ಕು ನೀತಿ ಜಾರಿಗೊಳಿಸಲಾದೆ. ಇದು ಜಾರಿಯಾದ ಬಳಿಕ ಕಳೆದ ಅರ್ಧ ವಾರ್ಷಿಕ ಅವಧಿಯಲ್ಲಿ 8,000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯ ಸಾಧ್ಯವಾಗಿದೆ ಎಂದರು.

Advertisement

ಸಂಸದ ನಳಿನ್‌ ಮುಖ್ಯ ಅತಿಥಿ ಯಾಗಿದ್ದರು. ಉಕ್ಕು ಖಾತೆ ಕಾರ್ಯದರ್ಶಿ ಬಿನೋಯ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಟಿ. ಶ್ರೀನಿವಾಸ್‌, ಸೈಲ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಚೌಧುರಿ, ಮೆಕಾನ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅತುಲ್‌ ಭಟ್‌ ಉಪಸ್ಥಿತರಿದ್ದರು. ಕೆಐಒಸಿಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬ ರಾವ್‌ ಸ್ವಾಗತಿಸಿದರು. ನಿರ್ದೇಶಕ ಎಸ್‌.ಕೆ. ದೊರೈ ವಂದಿಸಿದರು.

ಇರಾನ್‌ ಬಂದರು – ಭಾರತ ನಿರ್ವಹಣೆ
ಮಿನಿ ರತ್ನ ಉದ್ಯಮ ಸಂಸ್ಥೆಯಾಗಿರುವ ಕೆಐಒಸಿಎಲ್‌ ಗುಣಮಟ್ಟದ ಕಬ್ಬಿಣವನ್ನು ಉತ್ಪಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕು ಹಾಗೂ ಈ ಮೂಲಕ ಮಹಾರತ್ನವಾಗಿ ಬೆಳೆಯಬೇಕು. ಇರಾನಿನ ಚಾಬಹಾರ್‌ ಬಂದರಿನ ನಿರ್ವಹಣೆಯನ್ನು ಭಾರತ ವಹಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕುದುರೆಮುಖ ಸಂಸ್ಥೆಯು ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು. ಲಕ್ಯಾ ಡ್ಯಾಂನಲ್ಲಿ 300 ದಶಲಕ್ಷ ಟನ್‌ ಹೂಳು ತುಂಬಿದ್ದು, ಅದರ ಸದುಪಯೋಗ ಪಡೆಯುವ ಬಗ್ಗೆ ಕೆಐಒಸಿಎಲ್‌ ಸಂಶೋಧನೆ ನಡೆಸಲಿದೆ ಎಂದರು. 

2 ಒಪ್ಪಂದಗಳಿಗೆ ಸಹಿ
ಕಬ್ಬಿಣದ ಉಂಡೆ ಸ್ಥಾವರ ಆಧುನೀಕರಣ ಮತ್ತು ಉಕ್ಕು ರಫ್ತು ಮಾಡುವ ಬಗ್ಗೆ ಕೆಐಒಸಿಎಲ್‌ ಮತ್ತು ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ (ಸೈಲ್‌) ಒಪ್ಪಂದಕ್ಕೆ ಬಂದಿದ್ದು, ಸೈಲ್‌ ಕಾರ್ಯದರ್ಶಿ ಗಣೇಶ್‌ ವಿಶ್ವಕರ್ಮ ಮತ್ತು ಕೆಐಒ ಸಿಎಲ್‌ ನಿರ್ದೇಶಕ ವಿದ್ಯಾನಂದ ಒಡಂಬಡಿಕೆಗೆ ಸಹಿ ಹಾಕಿದರು. ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿ ಕೆಐಒಸಿಎಲ್‌ ಮತ್ತು ಎನ್‌ಐಟಿಕೆ ಸುರತ್ಕಲ್‌ ನಡುವಣ ಒಪ್ಪಂದಕ್ಕೆ ಎನ್‌ಐಟಿಕೆ ಉಪ ನಿರ್ದೇಶಕ ವಿ.ಎಸ್‌. ಅನಂತ ನಾರಾಯಣ ಮತ್ತು ಕೆಐಒಸಿಎಲ್‌ ನಿರ್ದೇಶಕ ವಿದ್ಯಾನಂದ ರಾವ್‌ ಸಹಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next