ಕಲಬುರಗಿ: ಬಡ್ತಿ ಮೀಸಲಾತಿ ಕುರಿತಂತೆ ಸುಪ್ರಿಂಕೋರ್ಟ್ ನೀಡಿದ ತೀರ್ಪಿನಿಂದ ದಲಿತರು ಹಿಂಬಡ್ತಿ ಪಡೆಯುವುದನ್ನು ತಡೆಯಲು ರಾಜ್ಯ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಡಾ| ಉಮೇಶ ಜಾಧವ್, ಜಿ.ರಾಮಕೃಷ್ಣ ಅವರ ನಿವಾಸದ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನಾಕಾರರು ದಲಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಸುಪ್ರಿಂಕೋರ್ಟ್ ನೀಡಿದ ತೀರ್ಪಿನಿಂದಾಗಿ 2002 ರಿಂದಲೂ ಮುಂಬಡ್ತಿ ಪಡೆದ ವಿವಿಧ ಇಲಾಖೆಗಳ ಸುಮಾರು 16 ಸಾವಿರ ದಲಿತ ನೌಕರರು ಹಿಂಬಡ್ತಿ ಪಡೆಯಲಿದ್ದಾರೆ. ಕೂಡಲೇ ಇದನ್ನು ತಡೆಯಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ, ಸುಪ್ರಿಂಕೋರ್ಟ್ ಆದೇಶದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ರಾಜ್ಯ ಸರ್ಕಾರ ಬಡ್ತಿ ಮೀಸಲಾತಿಯಲ್ಲಿ ಹೊಸ ಕಾನೂನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರುವಂತೆ, ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ವಿಧೇಯಕ ಜಾರಿಗೊಳಿಸುವಂತೆ, ನ್ಯಾಯಾಲಯಗಳ ದೌರ್ಜನ್ಯದಿಂದ ಮೀಸಲಾತಿರಕ್ಷಿಸಲು ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9 ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸಿದರು.
ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿಗಳ ಮಾಸಿಕ ಊಟದ ವೆಚ್ಚವನ್ನು 3 ಸಾವಿರ ರೂ.ಗೆ ಹೆಚ್ಚಿಸಬೇಕು, ಪರಿಶಿಷ್ಟ ವಿದ್ಯಾರ್ಥಿಗಳಿಗೆನೀಡುತ್ತಿರುವಂತೆ ಒಬಿಸಿ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ, ಊಟ, ವಸತಿ, ಶುಲ್ಕ ಇತ್ಯಾದಿ ಸೌಲಭ್ಯಗಳನ್ನು ವಿಸ್ತರಿಸಬೇಕು.
ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಆಧುನಿಕ ಜೀತ ಪದ್ಧತಿ ಕೈಬಿಟ್ಟು ಅವರ ಸೇವೆ ಕಾಯಂಗೊಳಿಸುವಂತೆ , ರಾಜ್ಯದ ಎಲ್ಲಾ ಸರ್ಕಾರಿ ವಸತಿ ನಿಲಯಗಳಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಕಂಪ್ಯೂಟರ್ ಶಿಕ್ಷಣ,ಇಂಗ್ಲಿಷ ಭಾಷಾ ಕಲಿಕೆ, ಸಂವಹನ ಕೌಶಲ್ಯ ತರಬೇತಿ ನೀಡುವಂತೆ ಹಾಗೂ ಇಡೀ ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.
ಪ್ರತಿಭಟನಾ ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪೃಥ್ವಿರಾಜ ಬೋಧನಕರ, ಅನೀಲ ಹುಣಚಿಕರ, ಯಲ್ಲಾಲಿಂಗ ಸೀತನೂರ, ಅನೀಲ ಟೆಂಗಳಿ, ಶ್ರೀಕಾಂತ ಚಮ್ಮಾ, ಗೌರಿಶಂಕರ, ಉಮೇಶ ಸೀತನೂರ, ಸಿದ್ದಾರ್ಥ ರತ್ನ ಬಂಧು, ಶಿವಾನಂದ ಕಡಗಂಚಿ, ಶರಣು ರಾಮಜಿನಗರ ಹಾಗೂ ಇತರರಿದ್ದರು.