ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಹಿತದೃಷ್ಟಿಯಿಂದ ಅವುಗಳ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ವಕ್ಫ್ ಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರಕ್ಕೂ ವಕ್ಫ್ ಆಸ್ತಿಗಳಿದೆ ಎಂದು ಹೇಳಿದರು.
ರಾಜ್ಯದಲ್ಲಿ 32,300ಕ್ಕಿಂತ ಹೆಚ್ಚು ವಕ್ಫ್ ಸಂಸ್ಥೆಗಳಿದ್ದು, 46 ಸಾವಿರಕ್ಕಿಂತ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳ ರಕ್ಷಣೆಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ವಕ್ಫ್ ಸಂಸ್ಥೆಗಳ ಆಸ್ತಿಗಳ ಸಂರಕ್ಷಣೆಗೆ ಕೇಂದ್ರ ವಕ್ಫ್ ಪರಿಷತ್ತಿನಿಂದ ಅನುದಾನ ನೀಡಿದಲ್ಲಿ ರಾಜ್ಯದ ಪಾಲಿನ ಅನುದಾನದೊಂದಿಗೆ ಆಸ್ತಿಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ:96 ಲಕ್ಷ ಕೋಟಿ ರೂ. ಪರಿಹಾರ ನೀಡಿ! ಮಾಲಿನ್ಯದ ದುಷ್ಪರಿಣಾಮ ತಡೆಗೆ ಆರ್ಥಿಕ ಸಹಾಯ ಕೋರಿಕೆ
ರಾಜ್ಯದ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿರುತ್ತವೆ. ಈ ಆಸ್ತಿಗಳ ಮೌಲ್ಯವೇ ನೂರಾರು ಕೋಟಿಯದ್ದಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯವಾದಿಗಳನ್ನು ನೇಮಿಸಲು ಆರ್ಥಿಕ ಸಂಪನ್ಮೂಲದ ಕೊರತೆಯಿದೆ. ಇಂತಹ ಪ್ರಕರಣಗಳ ನಿರ್ವಹಣೆಗೆ ನ್ಯಾಯವಾದಿಗಳ ನೇಮಕಾತಿ ವೆಚ್ಚವನ್ನು ಕೇಂದ್ರ ವಕ್ಫ್ ಪರಿಷತ್ತಿನಿಂದ ಭರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.