Advertisement

36000 ಶಿಥಿಲ ಶಾಲಾ ಕೊಠಡಿ ನೆಲಸಮಕ್ಕೆ ಆದೇಶ

10:41 AM Jun 10, 2017 | Team Udayavani |

ವಿಧಾನ ಪರಿಷತ್ತು: ಅತಿ ಹೆಚ್ಚು ಶಿಥಿಲಗೊಂಡಿರುವ ರಾಜ್ಯದ ಸರ್ಕಾರಿ ಶಾಲೆಗಳ 36 ಸಾವಿರ ಕೊಠಡಿಗಳನ್ನು ನೆಲಸಮ ಮಾಡಲು ಆದೇಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಜೆಡಿಎಸ್‌ನ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಸೇರಿ ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿವೆ. ಇದರಲ್ಲಿ 73,000 ಶಾಲಾ ಕೊಠಡಿಗಳು ಶಿಥಿಲ ಅಥವಾ ದುರಸ್ತಿ ಹಂತದಲ್ಲಿವೆ. ಈ ಪೈಕಿ ದೊಡ್ಡ ಪ್ರಮಾಣದಲ್ಲಿ ಶಿಥಿಲಾವಸ್ಥೆಯಲ್ಲಿರುವ 36,000 ಕೊಠಡಿಗಳನ್ನು ನೆಲಸಮ ಮಾಡಲು ಆದೇಶ ನೀಡಲಾಗಿದೆ. ಅಲ್ಲದೆ, ಸಣ್ಣ ಪ್ರಮಾಣ ಶಿಥಿಲಾವಸ್ಥೆಯಲ್ಲಿರುವ 31,000 ಕೊಠಡಿಗಳ ದುರಸ್ತಿಗೆ ಸೂಚನೆ ನೀಡಲಾಗಿದೆ ಎಂದರು.

ಶೈಕ್ಷಣಿಕ ಜಿಲ್ಲೆ ಸಂಖ್ಯೆ: ರಾಜ್ಯದಲ್ಲಿ ಶಿಕ್ಷಣ ಇಲಾಖೆಯ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಹಾಗೂ 34 ಶೈಕ್ಷಣಿಕ ಜಿಲ್ಲೆಗಳಿವೆ. ಕ್ಷೇತ್ರ ಪುನರ್ವಿಂಗಡಣೆ, ಹೊಸ ಜಿಲ್ಲೆ ಮತ್ತು ತಾಲೂಕುಗಳ ರಚನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಶೈಕ್ಷಣಿಕ ಜಿಲ್ಲೆಗಳ ಸಂಖ್ಯೆಯನ್ನೂ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದು ಇಲಾಖಾ ಮಟ್ಟದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದು ಸಚಿವರು ಅಮರನಾಥ ಪಾಟೀಲ್‌ ಪ್ರಶ್ನೆಗೆ ಉತ್ತರಿಸಿದರು.

ಎಲ್‌ಕೆಜಿ, ಯುಕೆಜಿ ಆರಂಭಿಸಿ
ವಿಧಾನಸಭೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಬೇಕಾದರೆ ಮತ್ತು ಶಾಲೆಗಳು ಉಳಿಯಬೇಕಾದರೆ ಎಲ್‌ಕೆಜಿ ಮತ್ತು ಯುಕೆಜಿಗೂ ಅದೇ ಶಾಲೆಗಳಲ್ಲಿ ಅವಕಾಶ ನೀಡಬೇಕೆಂದು ಶಾಸಕ ಅರವಿಂದ ಬೆಲ್ಲದ ಸಲಹೆ ನೀಡಿದ್ದಾರೆ. ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಮಾತನಾಡಿ, “ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರೆ, ನಾನು ಕಳೆದ ಮೂರು
ವರ್ಷಗಳಲ್ಲಿ ಒಂದು ಹೊಸ ಪ್ರಯೋಗ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಬರುವ ಕೆಲವು ಶಾಲೆಗಳಲ್ಲಿ ನಾಲ್ಕು ವರ್ಷದ ಮಕ್ಕಳಿಗೆ ಎಲ್‌ಕೆಜಿಮತ್ತು ಯುಕೆಜಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇನೆ. ಆ ಮಕ್ಕಳಿಗೆ ಖಾಸಗಿ ಶಿಕ್ಷಕರಿಂದ ಪಾಠ ಮಾಡಿಸುತ್ತಿದ್ದು, ಅವರೆಲ್ಲ ನೇರವಾಗಿ 1ನೇ ತರಗತಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ನೀಡದೆ ಎಲ್‌ಕೆಜಿ, ಯುಕೆಜಿಯಿಂದ ಪ್ರವೇಶ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಶೇ.30 ಹುದ್ದೆ ಮೀಸಲಿಡಿ
ವಿಧಾನಸಭೆ:
ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ.30ರಷ್ಟು ಹುದ್ದೆಗಳನ್ನು ಮೀಸಲಿಟ್ಟರೆ
ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ಇದರಿಂದ ಕನ್ನಡ ಭಾಷೆ ಉಳಿಸುವುದೂ ಸಾಧ್ಯವಾಗುತ್ತದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್‌.ಪುಟಣ್ಣಯ್ಯ ಹೇಳಿದ್ದಾರೆ. ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next