ತರೀಕೆರೆ: ಹುರಳಿಹಳ್ಳಿ ಗ್ರಾಮದ ಸ.ನಂ. 18ರಲ್ಲಿರುವ 30 ಎಕರೆ ಜಮೀನನ್ನು 17 ಜನರು ಒತ್ತುವರಿ ಮಾಡಿದ್ದಾರೆ. ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಹಿಂದಿನ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಆದರೂ ಅವುಗಳನ್ನು ಏಕೆ ತೆರವುಗೊಳಿಸಿಲ್ಲ. ಕೂಡಲೇ ಸ್ಥಳವನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಿ.ಎಸ್. ಸುರೇಶ್ ಆದೇಶಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿರಸ್ತೇದಾರ್ ಗೋವಿಂದಪ್ಪ ಮಾತನಾಡಿ, ಈಗಾಗಲೇ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದು ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಭೂಮಿಯನ್ನು ಸರ್ವೆ ಮಾಡಿಸಲಾಗಿದೆ. ಆಕ್ರಮ- ಸಕ್ರಮದಡಿ ಫಾರಂ 57ನ್ನು ಸಲ್ಲಿಸಿದ್ದಾರೆ. ರಾಜಸ್ವ ನಿರೀಕ್ಷಕರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಬಗರ್‌ಹುಕುಂ ಸಮಿತಿಯಲ್ಲಿ ಅರ್ಜಿಗಳನ್ನು ತಿರಸ್ಕರಿಸಲು ಅವಕಾಶವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಾಣಾಧಿಕಾರಿ ಹೊನ್ನೇಶ್ ಕುಮಾರ್ ಮಾತನಾಡಿ, ಜೂನ್ 25ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 10 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 2075 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ 18 ರಿಂದ 20 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ|ಚಂದ್ರಶೇಖರ್ ಮಾತನಾಡಿ, ಪ್ರತಿ ಪರೀಕ್ಷ ಕೇಂದ್ರದಲ್ಲಿ ಡಾಕ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಚಿತ್ರಸೇನಾ ಮಾತನಾಡಿ, ಲಿಂಗದಹಳ್ಳಿ ಮತ್ತು ಅಜ್ಜಂಪುರ ಹೋಬಳಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ವಾಡಿಕೆ ಮಳೆ ಪ್ರಮಾಣ 184 ಮಿಮೀ ಇದ್ದು ಇಲ್ಲಿಯ ತನಕ 164 ಮಿಮೀ ಮಳೆಯಾಗಿದೆ. ಈಗಾಗಲೇ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಪಂ ಸದಸ್ಯೆ ರಾಧಮ್ಮ, ತಾಪಂ ಅದ್ಯಕ್ಷೆ ಪದ್ಮಾವತಿ, ಸ್ಥಾಯಿ ಸಮಿತಿ ಅದ್ಯಕ್ಷ ಹಾಲನಾಯ್ಕ, ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಇಒ ಯತಿರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.