Advertisement
ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬರ ಪರಿಸ್ಥಿತಿ,ಜಲ ನಿರ್ವಹಣೆ, ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಿ ಜಲಾಶಯಗಳಿಗೆ ಒಳ ಹರಿವು ಅಧಿಕವಾದರೆ ತಮಿಳುನಾಡಿಗೆ ನಿಗದಿಯಂತೆ ನೀರು ಹರಿಸಬೇಕು ಎಂದು ಹೇಳಲಾಗಿದೆ. ಹಾಗಾಗಿ ತಕ್ಷಣವೇ ನೀರು ಬಿಡುವ ಒತ್ತಡ ಹೇರಿಲ್ಲದ ಕಾರಣ ಸ್ವಲ್ಪ ನಿಟ್ಟುಸಿರು ಬಿಡಬಹುದು. ಕಾವೇರಿ ಕಣಿವೆ ಜಲಾಶಯಗಳಲ್ಲಿರುವುದೇ ಒಟ್ಟು 14 ಟಿಎಂಸಿ ಅಡಿ ನೀರು. ಈ ನೀರು ಕುಡಿಯುವುದಕ್ಕಷ್ಟೇ ಸಾಕು. ಆದರೂ ಜೂ.10ರೊಳಗೆ 3 ಟಿಎಂಸಿ ನೀರು ಬಿಡಲು ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ್ದು, ಪ್ರತಿ ಹತ್ತು ದಿನಗಳಿಗೊಮ್ಮೆ 3 ಟಿಎಂಸಿ ನೀರು ಹರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ.
Related Articles
Advertisement
ಅದಕ್ಕೆ ಯಾರೊಬ್ಬರೂ ಪರಿಹಾರ ಕಂಡು ಹಿಡಿಯುವ ಬದ್ಧತೆ ಪ್ರದರ್ಶಿಸಿಲ್ಲ. ಮಳೆ ಬರಲಿ, ಬರದಿರಲಿ ಜಲಾಶಯಗಳಲ್ಲಿರುವ ನೀರಿನ ಲಭ್ಯತೆಯನ್ನು ಆಧರಿಸಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನ್ಯಾಯಮಂಡಳಿ ಆದೇಶಿಸಿರುವುದು, ಮಂಡಳಿ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ಕೊಡುತ್ತಿರುವುದು ಕಾವೇರಿ ಕಣಿವೆ ಪ್ರದೇಶದ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯದ ಪರಮಾವಧಿಯಾಗಿದ್ದರೂ ನ್ಯಾಯಮಂಡಳಿಗಳು ಹಾಗೂ ಸುಪ್ರೀಂಕೋಟ್‌ಗೆ ಕಣಿವೆ ಭಾಗದ ರೈತರ ಕೂಗು, ಬವಣೆ, ವೇದನೆ ಅರ್ಥವಾಗದಿರುವುದು ದುರಂತದ ಸಂಗತಿಯಾಗಿದೆ.
ಕೆಆರ್‌ಎಸ್‌ನಲ್ಲಿ 11 ಟಿಎಂಸಿ ನೀರು: ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 80.50 ಅಡಿಗಳಷ್ಟು ನೀರಿದೆ. ಒಟ್ಟಾರೆ 11 ಟಿಎಂಸಿಯಷ್ಟು ನೀರು ಹೊಂದಿದ್ದು, ಅಣೆಕಟ್ಟೆಯಲ್ಲಿರುವ ನೀರು ಕುಡಿಯುವುದಕ್ಕೂ ಸಾಲದಂತಾಗಿದೆ. ಮಳೆ ಶುರುವಾಗಿ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾದರೆ ಮಾತ್ರ ಆದೇಶ ಪಾಲಿಸಲು ಸಾಧ್ಯ. ಈಗಾಗಲೇ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದಿರುವ ಬೇಸಿಗೆ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕಾವೇರಿ ನ್ಯಾಯಮಂಡಳಿಯ ಒಪ್ಪಂದದಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಿರುವ 9.25 ಟಿಎಂಸಿ ಅಡಿ ನೀರು ಹರಿಸುವಂತೆ ಸೂಚಿಸಿರುವುದು ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತಾಗಿದೆ.
ಜೀವ ಜಲಕ್ಕಾಗಿ ಜನರ ಪರದಾಟ: ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಜೀವಜಲಕ್ಕಾಗಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ನಾಗಮಂಗಲ ತಾಲೂಕಿನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ನದಿ ಹರಿಯುವ ಪ್ರದೇಶಗಳಲ್ಲೂ ನೀರಿಗೆ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 9.25 ಟಿಎಂಸಿ ಅಡಿ ನೀರು ಹರಿಸುವುದು ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ.
ಪರ್ಯಾಯ ವ್ಯವಸೆ ಗಳೂ ಇಲ್ಲ: ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳಲು ಹಾಗೂ ಮಳೆ ಹೆಚ್ಚಾಗಿ ಬಿದ್ದಾಗ ನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ಪೂರಕವಾದ ವ್ಯವಸ್ಥೆಗಳೇ ಕಾವೇರಿ ಕಣಿವೆ ಪ್ರದೇಶದಲ್ಲಿ ಇಲ್ಲ. ರಾಜ್ಯಸರ್ಕಾರ ಅಂತರ್ಜಲ ಸಂರಕ್ಷಣೆ, ಕೆರೆ-ಕಟ್ಟೆಗಳ ಸುರಕ್ಷತೆ, ಚೆಕ್ ಡ್ಯಾಂಗಳ ನಿರ್ಮಾಣ, ನದಿ ಪಾತ್ರಗಳನ್ನು ಸುರಕ್ಷಿತವಾಗಿಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷ 300 ಟಿಎಂಸಿ ಅಡಿಗಳಷ್ಟು ನೀರು ವ್ಯರ್ಥವಾಗಿ ಸಮುದ್ರ ಸೇರುವಂತಾಯಿತು. ಆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗಳಿಲ್ಲದ ಕಾರಣ ಪ್ರತಿ ವರ್ಷ ಮೇ ಅಂತ್ಯಕ್ಕೆ ಕಾವೇರಿ ವಿವಾದದ ಕಾರ್ಮೋಡ ಆವರಿಸುತ್ತಲೇ ಇದೆ.
● ಮಂಡ್ಯ ಮಂಜುನಾಥ್