ಬೆಂಗಳೂರು: ಮತದಾರರ ಮಾಹಿತಿ ಕಳುವು ಪ್ರಕರಣದಲ್ಲಿ ಸರ್ಕಾರ ಮುಕ್ತ ರೀತಿಯ ತನಿಖೆ ಮಾಡಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಯಾವುದೇ ಸಂಸ್ಥೆಯಾಗಲಿ, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವುಗಳನ್ನು ಶಿಕ್ಷೆಗೆ ಒಳಪಡಿಸಲೆಂದೇ ಅವುಗಳನ್ನು ತನಿಖೆಗೆ ಆದೇಶ ಮಾಡಿರುವುದು. ಈಗಾಗಲೇ ಹಲವಾರು ಜನರ ವಿರುದ್ಧ ಕ್ರಮಕೈಗೊಂಡು ಬಂಧಿಸಿಸಲಾಗಿದೆ. ಅಧಿಕಾರಗಳ ವಿಚಾರಣೆಯೂ ನಡೆದಿದೆ. ಚುನಾವಣಾ ಆಯೋಗ ಮುಖ್ಯವಾಗಿ ಡಿಲೀಟ್ ಆಗಿರುವ ಪ್ರಕರಣಗಳನ್ನು ಹಾಗೂ ಮತಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಾಗಬೇಕು. ಯಾವುದಾದರೂ ಅನ್ಯಾಯವಾಗಿ ಡಿಲೀಟ್ ಮಾಡಿದ್ದಾರೆ ಸರಿಪಡಿಸುವುದು ಹಾಗೂ ಎರಡು ಮತ್ತು ಮೂರು ಕಡೆಗಳಲ್ಲಿ ಗುರುತಿಸಿ ಚೀಟಿ ಹೊಂದಿದ್ದರೆ ಅದನ್ನು ತೆಗೆಯುವುದು. ಪ್ರಾಥಮಿಕವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಸಾಮರಸ್ಯ ಹದಗೆಡಬಾರದು: ಮಹಾರಾಷ್ಟ್ರದ ಗೃಹ ಇಲಾಖೆ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲು ಸೂಚಿಸಿದೆ. ಯಾವುದೇ ಕಾರಣಕ್ಕೂ ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಲು ಬಿಡಕೂಡದು. ಎರಡೂ ರಾಜ್ಯಗಳ ಸಾಮರಸ್ಯ ಹದಗೆಡುವುದು ಬೇಡ. ಕರ್ನಾಟಕ ಬಸ್ಸುಗಳಿಗೆ, ಜನರಿಗೆ ಹಾಗೂ ಆಸ್ತಿಗೆ ಸಂಪೂರ್ಣವಾದ ರಕ್ಷಣೆ ನೀಡಬೇಕೆಂದು ಗೃಹ ಸಚಿವರು ಮಾತನಾಡುತ್ತಾರೆ ಎಂದರು.
ಅಧಿವೇಶನ ಸಂದರ್ಭದಲ್ಲಿ ಅಡಿಗಲ್ಲು: ಸುವರ್ಣ ಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಆದೇಶ ನೀಡಿದ್ದು, ಅಧಿವೇಶನ ಸಂದರ್ಭದಲ್ಲಿ ಅಡಿಗಲ್ಲು ಹಾಕಲಾಗುವುದು ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಪಡೆಯಲು ಪಂಚಾಮಸಾಲಿ ಸ್ವಾಮೀಜಿಗಳು ಗಡುವು ನೀಡಿದ್ದು, ಅದು ಒಂದು ಶಾಸನಬದ್ದ ಸಂಸ್ಥೆ. ಆದಷ್ಟು ಬೇಗನೆ ವರದಿ ನೀಡಲು ಹೇಳಿದ್ದು, ಆದಷ್ಟು ಬೇಗ ಕೊಟ್ಟರೆ ನಾವು ಕೂಡ ನಿರ್ಣಯ ಮಾಡುತ್ತೇವೆ ಎಂದರು.
ಏಕರೂಪ ನಾಗರಿಕ ಸಂಹಿತೆ: ರೈತರು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಇದು ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ. ಸಮಿತಿಗಳನ್ನು ವಿವಿಧ ರಾಜ್ಯಗಳಲ್ಲಿ ರಚಿಸಲಾಗಿದೆ. ಏಕರೂಪ ನಾಗದಿಕ ಸಂಹಿತೆ ಇದ್ದರೆ ಉತ್ತಮ ಎಂದು ಬಿಜೆಪಿ ನಂಬಿದೆ ಎಂದು ತಿಳಿಸಿದರು.