Advertisement

ಆಹಾರ ಪದಾರ್ಥಗಳಿಗೆ ಆರ್ಡರ್‌ ಮಾಡಿ ವಂಚನೆ!

02:14 AM Sep 11, 2019 | mahesh |

ಕುಂದಾಪುರ: ಸೈನಿಕನ ಹೆಸರಿನಲ್ಲಿ ಹೊಟೇಲ್‌ಗೆ ಕರೆ ಮಾಡಿ ಆಹಾರ ಪದಾರ್ಥಗಳಿಗೆ ಆರ್ಡರ್‌ ಮಾಡಿ ಹೊಟೇಲ್‌ನವರ ಖಾತೆಯಿಂದಲೇ ಹಣ ಎಗರಿಸಿದ ಘಟನೆ ಕುಂದಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಇಲ್ಲಿನ ಹೊಟೇಲ್‌ ಒಂದಕ್ಕೆ ನಾಸಿಕ್‌ ರೆಜಿಮೆಂಟಿನ ಸೈನಿಕ ಪರ್ಮಿಲ್‌ ಕುಮಾರ್‌ ಎಂಬ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಸುಮಾರು 4 ಸಾವಿರ ರೂ.ಗಳ ಆಹಾರ ಪದಾರ್ಥಕ್ಕೆ ಆರ್ಡರ್‌ ಮಾಡಿದ. ಆಹಾರ ಸಾಮಗ್ರಿ ಕೊಂಡೊಯ್ಯಲು ನಮ್ಮ ಕಡೆಯ ವ್ಯಕ್ತಿಯೊಬ್ಬರು ಬರುತ್ತಾರೆ, ಆನ್‌ಲೈನ್‌ ಪಾವತಿ ಮಾಡುತ್ತೇನೆ ನಿಮ್ಮ ಬ್ಯಾಂಕ್‌ ವಿವರ ಕೊಡಿ ಎಂದು ಕೇಳಿದ. ತನ್ನ ಐಡೆಂಟಿಟಿ ಕಾರ್ಡ್‌ ಎಂದು ವಾಟ್ಸ್‌ಆ್ಯಪ್‌ಗೆ ಕ್ಯಾಂಟೀನ್‌ ಸ್ಮಾರ್ಟ್‌ ಕಾರ್ಡ್‌ ಗುರುತಿಚೀಟಿ, ಎಟಿಎಂ ಕಾರ್ಡ್‌ ಚಿತ್ರಗಳನ್ನು ಕಳುಹಿಸಿದ. ರಾತ್ರಿ 11.30ರ ವರೆಗೂ ಎಟಿಎಂ ಕಾರ್ಡ್‌ ಸಂಖ್ಯೆ ಹಾಗೂ ಮೊಬೈಲ್‌ಗೆ ಬರುವ ಪಿನ್‌ ನಂಬರ್‌ನ್ನು ಪದೇ ಪದೇ ಕೇಳುತ್ತಿದ್ದ. ಹಣ ಮಾತ್ರ ವರ್ಗಾಯಿಸಿಲ್ಲ. ಬದಲಿಗೆ ಹೊಟೇಲ್‌ ಸಿಬಂದಿ ನೀಡಿದ ಸಂಖ್ಯೆ ಉಪಯೋಗಿಸಿ ಅವರ ಖಾತೆಯಲ್ಲಿದ್ದ ಹಣವನ್ನೇ ಲಪಟಾಯಿಸಿರುವ ಸಂಶಯ ಇದೆ. ಆಹಾರವನ್ನು ಫ್ರಿಜ್‌ನಲ್ಲಿಡಿ, ಹಣ ವರ್ಗಾವಣೆಯಾಗುತ್ತಿಲ್ಲ ಎಂದ ಆಸಾಮಿ ಅನಂತರ ಹಣವನ್ನೂ ನೀಡಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ, ಆಹಾರವನ್ನೂ ಕೊಂಡೊಯ್ದಿಲ್ಲ ಎಂದು ಹೊಟೇಲ್‌ನವರು ದೂರಿದ್ದಾರೆ.

ಎಷ್ಟು ಮೊತ್ತ ಖಾತೆಯಿಂದ ಹೋಗಿದೆ ಎನ್ನುವುದು ಬ್ಯಾಂಕ್‌ಗೆ ಹೋಗಿ ಖಾತೆ ಪರಿಶೀಲಿಸಿದ ಬಳಿಕವಷ್ಟೇ ತಿಳಿಯಬೇಕಿದೆ. ಇನ್ನೊಂದು ರೀತಿಯ ವಂಚನಾ ಜಾಲವಿದೆ. ಗೂಗಲ್‌ಪೇ, ಪೇಟಿಎಂ, ಭೀಮ್‌ ಮೊದಲಾದ ಹಣ ವರ್ಗಾವಣೆ ತಾಣಗಳ ಮೂಲಕ ಹಣ ವರ್ಗಾಯಿ ಸುತ್ತೇವೆ ಎಂದು ಇವರು ಹಣ ವಂಚಿಸುತ್ತಾರೆ. ನಿಮಗೆ ಬಹುಮಾನ ಬಂದಿದೆ, ನಿಮ್ಮ ಗೂಗಲ್‌ ಪೇಗೆ ಹಣ ಕಳುಹಿಸಿದ್ದೇವೆ, ಮೊಬೈಲ್‌ಗೆ ಬಂದ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌ ಸಂಖ್ಯೆ) ನಂಬರ್‌ ಒತ್ತಿಬಿಡಿ ಎಂದು ಕೇಳುತ್ತಾರೆ. ಗೂಗಲ್‌ ಪೇಗೆ ಹೋದಾಗ ಅಲ್ಲಿ ಮೊತ್ತ ನಮೂದಿಸಿ ಹಣ ಕೇಳಿದವರ ಹೆಸರು ಇರುತ್ತದೆ. ಅವಸರದಲ್ಲಿ ಇದನ್ನು ನೋಡಿ ಒಟಿಪಿ ಕೊಟ್ಟರೆ ನಿಮ್ಮ ಖಾತೆಯಲ್ಲಿದ್ದ ಹಣವೇ ಹೋಗುತ್ತದೆ. ಏಕೆಂದರೆ ಅವರು ಹಣ ಕಳುಹಿಸಿಲು ವಿನಂತಿ ಮಾಡಿರುತ್ತಾರೆ. ಒಟಿಪಿ ನೀಡುವ ಮೂಲಕ ನಿಮ್ಮದೇ ಖಾತೆ ಯಿಂದ ಅವರಿಗೆ ಹಣ ನೀಡಲು ಅನುಮತಿ ನೀಡಿದಂತಾಗು ತ್ತದೆ. ಈ ಕುರಿತು ತೀವ್ರ ಎಚ್ಚರ ವಹಿಸುವ ಅಗತ್ಯವಿದೆ.

ಹೊಸ ವಿಧದ ವಂಚನೆ
ಬೇರೆ ಬೇರೆ ಕಂಪನಿಗಳು ಈಗ ಆನ್‌ಲೈನ್‌ ಮೂಲಕ ಆಹಾರ ವಿತರಣೆ ಮಾಡುತ್ತಿವೆ. ಇದೇ ನಂಬಿಕೆಯಲ್ಲಿ ಹೋಟೆಲ್‌ನವರು ಕೂಡ ಕರೆ ನಂಬಿ ಆಹಾರ ಸಿದ್ಧ ಪಡಿಸಿ ದ್ದರು. ಆದರೆ ಆತ ಎಟಿಎಂ ಕಾರ್ಡ್‌ ನಂಬರ್‌ ಹಾಗೂ ಪಿನ್‌ ನಂಬರ್‌ ಕೊಟ್ಟ ಕಾರಣ ಹೋಟೆಲ್‌ನವರ ಹಣವೇ ಕಳವಾಗು ವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next