ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಸಂಭವಿಸಿರುವ ಕೈದಿಗಳ ಅಸಹಜ ಸಾವು ಪ್ರಕರಣಗಳಿಗೆ ಪರಿಹಾರ ಮೊತ್ತ ನಿಗದಿಪಡಿಸಿ, ಮೃತರ ಅವಲಂಬಿತರಿಗೆ ನೀಡಲು ಕಾಲಮಿತಿಯಲ್ಲಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಬಂದಿಖಾನೆಗಳಲ್ಲಿ ಸಂಭವಿಸುವ “ಅಸಹಜ ಸಾವು’ ಪ್ರಕರಣಗಳಲ್ಲಿ ಮೃತರ ಸಂಬಂಧಿಕರಿಗೆ ಪರಿಹಾರ ನೀಡುವ ಯೋಜನೆ ಕುರಿತು 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ರಾಜ್ಯದ ಬಂದಿಖಾನೆಗಳಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣಗಳಿಗೆ ಪರಿಹಾರ ನೀಡಬೇಕಿದೆ. ಪರಿಹಾರ ಮೊತ್ತ ನಿಗದಿಪಡಿಸಲು ನಿರ್ದಿಷ್ಟ ಮಾನದಂಡ ಇಲ್ಲ. ಹೀಗಾಗಿ, ಪ್ರಕರಣದಲ್ಲಿ ಹೈಕೋರ್ಟ್‌ಗೆ ಅಗತ್ಯ ಸಲಹೆ ನೀಡಲು ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಕೇಂದ್ರ ಮೋಟಾರು ಕಾಯ್ದೆಯ ಸೆಕ್ಷನ್ 163 (ಎ)ಅನ್ನು ಅಳವಡಿಸಿಕೊಂಡು ಕೈದಿಗಳ ಅಸಹಜ ಸಾವು ಪ್ರಕರಣಗಳಿಗೆ ಪರಿಹಾರ ಮೊತ್ತ ನಿಗದಿಪಡಿಸಬಹುದು. ಹಾಗೆಯೇ, ಪರಿಹಾರ ಮೊತ್ತ ನಿಗದಿ ಹಾಗೂ ಮೌಲ್ಯಮಾಪನ ಮಾಡಲು ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.
ಸಲಹೆಯನ್ನು ಒಪ್ಪಿದ ನ್ಯಾಯಪೀಠ, ಬಂದಿಖಾನೆಗಳಲ್ಲಿ ಕೈದಿಗಳ ಅಸಹಜ ಸಾವು ಪ್ರಕರಣಗಳಿಗೆ ಪರಿಹಾರ ಮೊತ್ತ ನಿಗದಿಪಡಿಸಲು ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು (ನಿವೃತ್ತ ನ್ಯಾಯಾಂಗ ಅಧಿಕಾರಿ) ನೇಮಿಸಬೇಕು. ಕೇಂದ್ರ ಮೋಟಾರು ಕಾಯ್ದೆಯ ಸೆಕ್ಷನ್ 163 (ಎ) ಅನ್ನು ಅಳವಡಿಸಿಕೊಂಡು ಪರಿಹಾರ ಮೊತ್ತ ನಿಗದಿಪಡಿಸಬೇಕು. ನಂತರ 2012ರ ಜ.1ರಿಂದ 2019ರ ಮೇ 31ರವರೆಗೆ ರಾಜ್ಯದ ಬಂದಿಖಾನೆಗಳಲ್ಲಿ ಸಂಭವಿಸಿದ ಕೈದಿಗಳ ಅಸಹಜ ಸಾವು ಪ್ರಕರಣಗಳ ಸಂತ್ರಸ್ತರನ್ನು ಗುರುತಿಸಿ ಪರಿಹಾರ ವಿತರಿಸಬೇಕು. ಈ ಪ್ರಕ್ರಿಯೆಯನ್ನು ನ.1ರೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಆತ್ಮಹತ್ಯೆ ಪ್ರಕರಣವೂ ಅಸಹಜ ಸಾವು: ಬಂದಿಖಾನೆಯಲ್ಲಿ ಕೈದಿಗಳ ಆತ್ಮಹತ್ಯೆ ಪ್ರಕರಣಗಳನ್ನೂ ಅಸಹಜ ಸಾವು ಎಂಬುದಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ರಾಜ್ಯದಲ್ಲಿ ಕೈದಿಗಳು ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ ಆತ್ಮಹತ್ಯೆ ಪ್ರಕರಣಗಳನ್ನು ಅಸಹಜ ಸಾವು ಎಂದು ಪರಿಗಣಿಸಿ ಪರಿಹಾರ ನೀಡಬೇಕು. ಮೃತ ಕೈದಿಗಳ ಅಲಂಬಿತರು ಹೆಚ್ಚಿನ ಪರಿಹಾರ ಕೇಳುವ ಹಕ್ಕನ್ನು ಈ ಆದೇಶ ಮೊಟಕಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, 2019ರ ಮೇ 31ರಿಂದ ಈವರೆಗೂ ಬಂದಿಖಾನೆಯಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣ ಕುರಿತ ನ.5ರೊಳಗೆ ವರದಿ ಸಲ್ಲಿಸಬೇಕೆಂದು ನ್ಯಾಯಪೀಠ ತಿಳಿಸಿದೆ.