Advertisement

ನೀರಿಲ್ಲದಿದ್ದರೂ ಬಿಸಿಯೂಟ ಕಡ್ಡಾಯಕ್ಕೆ ಆದೇಶ : ಸಂಕಷ್ಟದಲ್ಲಿ ಶಿಕ್ಷಕರು

09:06 AM Jun 07, 2019 | sudhir |

ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಕಳೆದ 13 ವರ್ಷದಿಂದ ಅನ್ನದಾಸೋಹ ಮಾಡುತ್ತಿರುವ ಶಾಲೆಗಳು ನೀರಿನ ಸಮಸ್ಯೆಯಿಂದ ಜೂ.1ರಿಂದ ಬಿಸಿಯೂಟ ತಯಾರಿಕೆ ನಿಲ್ಲಿಸಿದ್ದಾರೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಡ್ಡಾಯವಾಗಿ ಇದೇ ದಿನ ತರಗತಿ ನಡೆಸುವಂತೆ ಮತ್ತು ಬಿಸಿಯೂಟ ಆರಂಭಿಸುವಂತೆ ಆದೇಶ ನೀಡಿರುವುದು ಮುಖ್ಯಶಿಕ್ಷಕರ ಪಾಲಿಗೆ ಶಿಕ್ಷೆಯಾಗಿ ಪರಿಣಮಿಸಿದೆ.

Advertisement

ಕಡ್ಡಾಯ ತರಗತಿ
ಜಿಲ್ಲೆಯ ಎಲ್ಲಾ ಶಾಲೆಗಳನ್ನು ಜೂ.3ರಿಂದ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಯಿಂದ ನೀರು ಪಡೆದುಕೊಂಡು ತರಗತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಶಾಲೆಯ ಮುಖ್ಯ ಶಿಕ್ಷಕರು ಸ್ಥಳೀಯಾಡಳಿತ ಸಂಸ್ಥೆಗೆ ಮನವಿ ನೀಡಿದರೆ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ನೀರು ಪೂರೈಕೆ ಕಷ್ಟ ಸಾಧ್ಯ ಎಂದು ಕೈ ಚೆಲ್ಲಿವೆ.

6 ವಲಯ, 1,156 ಶಾಲೆಗಳು
ಶಿಕ್ಷಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯನ್ನು 6 ವಲಯಗಳಾಗಿ ವಿಂಗಡಿಸಲಾಗಿದೆ. ಉಡುಪಿ ವಲಯದಲ್ಲಿ ಸರಕಾರಿ, ಖಾಸಗಿ, ಅನುದಾನಿತ ಸೇರಿದಂತೆ ಒಟ್ಟು 248, ಕುಂದಾಪುರ 228, ಬ್ರಹ್ಮಾವರದಲ್ಲಿ 252, ಕಾರ್ಕಳ 254, ಕಾಪು 125, ಬೈಂದೂರು 248 ಶಾಲೆಗಳು ಸೇರಿದಂತೆ ಒಟ್ಟು 1,156 ಶಾಲೆಗಳಿವೆ. ಅವುಗಳಲ್ಲಿ ಶೇ 90ರಷ್ಟು ಶಾಲೆಗಳು ಮೇ 29ರಂದು ತರಗತಿಗಳನ್ನು ಪ್ರಾರಂಭಿಸಿದೆ.

45 ಶಾಲೆಗಳಿಂದ ಮನವಿ
ನೀರಿನ ಸಮಸ್ಯೆಯಿಂದ ಮಧ್ಯಾಹ್ನದವರೆಗೆ ತರಗತಿ ನಡೆಸಲು ಅನುಮತಿ ನೀಡುವಂತೆ ಜಿಲ್ಲೆಯ 50 ಶಾಲೆಗಳಿಂದ ಮೌಖೀಕ ಮನವಿಗಳು ಬಂದಿವೆ. ಕುಂದಾಪುರ 3, ಉಡುಪಿ 13, ಕಾಪು 13, ಕಾರ್ಕಳ ಹಾಗೂ ಬ್ರಹ್ಮಾವರದಿಂದ ತಲಾ 8 ಮನವಿಗಳು ಸಲ್ಲಿಕೆಯಾಗಿದೆ.

ಶಾಲೆಗಳಲ್ಲಿ ಬಿಸಿಯೂಟಕ್ಕೆ ಕತ್ತರಿ
ನಗರದ ವಳಕಾಡು ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಜೂ. 1ರಂದು ಅನ್ನದಾಸೋಹ ನಡೆದಿಲ್ಲ. ಬ್ರಹ್ಮಾವರ ವಲಯದ ಶೆಟ್ಟಿ ಬೆಟ್ಟು ಸರಕಾರಿ ಹಿ.ಪ್ರಾ. ಶಾಲೆ, ಸಿದ್ಧನಾಯಕನ ಮನೆ ಸ.ಹಿ.ಪ್ರಾ.ಶಾಲೆ, ಪರ್ಕಳ ಬಿಎಂಎಚ್‌ಎಸ್‌, ನಡೂರು ಶ್ರೀ ವಾಣಿ ಶಾಲೆ ಸೇರಿದಂತೆ ಒಟ್ಟು 4 ಶಾಲೆಗಳಲ್ಲಿ ಬಿಸಿಯೂಟ ವಿತರಣೆಯಾಗಿಲ್ಲ. ಕಾರ್ಕಳದಲ್ಲಿ ಸುಮಾರು 100 ಶಾಲೆಗಳಲ್ಲಿ ನೀರಿನ ಸಮಸ್ಯೆಯಿದೆ. ಆದರಿಂದ ಹೆಚ್ಚಿನ ಶಾಲೆಗಳ ಮುಖ್ಯೋಪಾಧ್ಯಾಯರು ಮನೆಯಿಂದಲೇ ಊಟ ಕಳುಹಿಸುವಂತೆ ಪೋಷಕರ ಬಳಿ ಮನವಿ ಮಾಡಿದ್ದಾರೆ.

Advertisement

ಪೂರೈಕೆ ನೀರಿನ ಪರಿಶುದ್ಧತೆ!
ಸ್ಥಳೀಯಾಡಳಿತದಿಂದ ಪೂರೈಕೆಯಾಗುವ ಟ್ಯಾಂಕರ್‌ ನೀರಿನ ಶುದ್ಧತೆ ಕುರಿತು ಶಿಕ್ಷಕರಲ್ಲಿ ಅನುಮಾನ ಮೂಡಿದೆ. ಕೆಲ ಶಾಲೆಯಲ್ಲಿ ವಾಟರ್‌ ಪ್ಯೂರಿಫೈರ್‌ ಇದೆ. ಆದರೆ ಕೆಲ ಸರಕಾರಿ ಶಾಲೆಯಲ್ಲಿ ಈ ಸೌಲಭ್ಯವಿಲ್ಲ. ಟ್ಯಾಂಕರ್‌ ನೀರು ನೇರವಾಗಿ ಕುಡಿಯುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗು ಸಾಧ್ಯತೆ ಹೆಚ್ಚಿದೆ.

76 ಶಾಲೆಯಲ್ಲಿ ನೀರಿನ ಸಮಸ್ಯೆ
ಉಡುಪಿ,ಕಾಪು ವಲಯದಲ್ಲಿ ಒಟ್ಟು 76 ಶಾಲೆಗಳು ನೀರಿನ ಸಮಸ್ಯೆ ಕುರಿತು ವರದಿಯಾಗಿದೆ.

ದಾನಿಗಳಿಂದ ನೀರು
ಶಾಲೆಯ ಹಳೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಶಾಲೆಯ ಆಡಳಿತ ಮಂಡಳಿ ಸದಸ್ಯರು ಟ್ಯಾಂಕರ್‌ ಮೂಲಕ ಶಾಲೆಗಳಿಗೆ ನೀರು ಪೂರೈಕೆ
ಮಾಡುತ್ತಿದ್ದಾರೆ.

ಆದೇಶ ನೀಡಿ ಕೈತೊಳೆದುಕೊಂಡ ಅಧಿಕಾರಿಗಳು!
ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಶಾಲೆಗಳನ್ನು ಸೋಮವಾರದಿಂದ ಕಡ್ಡಾಯವಾಗಿ ಪ್ರಾರಂಭಿಸುವಂತೆ ಸೂಚನೆ ನೀಡಿದ್ದಾರೆ. ಟ್ಯಾಂಕರ್‌ನಿಂದ ಪೂರೈಕೆಯಾಗುವ ನೀರು ಕುಡಿದು ಮಕ್ಕಳ ಅನಾರೋಗ್ಯಕ್ಕೆ ಒಳಗಾದರೆ ಅದಕ್ಕೆ ಜವಾಬ್ದಾರಿ ಯಾರು? ಸಾಮಾನ್ಯವಾಗಿ ನಾವೇ ಟ್ಯಾಂಕರ್‌ ನೀರು ಕುಡಿಯೋದಿಲ್ಲ, ಇನ್ನೂ ಮಕ್ಕಳಿಗೆ ಹೇಗೆ ನೀಡುವುದು ಹೇಗೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಮೂರು ದಿನದಿಂದ ಬಿಸಿಯೂಟವಿಲ್ಲ
ಆದಿ ಉಡುಪಿ ಹಿ.ಪ್ರಾ. ಶಾಲೆಯಲ್ಲಿ ನೀರಿನ ಕೊರತೆಯಿಂದ ಕಳೆದ ಮೂರು ದಿನಗಳಿಂದ ಬಿಸಿಯೂಟ ತಯಾರಿಸಿಲ್ಲ. ನಗರದಲ್ಲಿ ನೀರಿನ ಸಮಸ್ಯೆಯಿರುವುದರಿಂದ ಸ್ಥಳೀಯಾಡಳಿತ ನೀರು ಪೂರೈಕೆ ಮಾಡುವಲ್ಲಿ ವಿಫ‌ಲವಾಗಿದೆ. ಈ ಹಿನ್ನೆಲೆಯಲ್ಲಿ ತರಗತಿಗಳನ್ನು ಮಧ್ಯಾಹ್ನವರೆಗೆ ಮಾಡಲಾಗುತ್ತಿದೆ.

ಅನುಮತಿ ಇಲ್ಲ
ಜೂ. 3ರಿಂದ ಶಾಲೆಗಳು ಪ್ರಾರಂಭವಾಗಿವೆೆ. ಮಧ್ಯಾಹ್ನದವರೆಗೆ ಶಾಲೆ ನಡೆಸುವ ಕುರಿತು ಬರುವ ಮನವಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಬಿಸಿಯೂಟ ನಿಲ್ಲಿಸಿರುವ ಕುರಿತು ಯಾವುದೇ ವರದಿ ಬಂದಿಲ್ಲ.
-ಮಂಜುಳಾ, ಉಡುಪಿ, ಕಾಪು ಬಿಇಒ.

ಸಮಸ್ಯೆ ತೀವ್ರವಾಗಿಲ್ಲ
ಬ್ರಹ್ಮಾವರ ವಲಯದಲ್ಲಿ ನೀರಿನ ಸಮಸ್ಯೆ ಕಡಿಮೆಯಿದೆ.
ಬೆರಳೆಣಿಕೆ ಶಾಲೆಗಳಲ್ಲಿ ನೀರಿನ ಸಮಸ್ಯೆಗಳು ಇರುವ ಕುರಿತು ವರದಿಯಾಗಿದೆ.
-ಒ.ಆರ್‌.ಪ್ರಕಾಶ್‌, ಬ್ರಹ್ಮಾವರ ಬಿಇಒ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next