Advertisement

ಆರ್ಕಿಡ್‌ನಿಂದ ಇಡ್ಲಿ ತನಕ ಮೋದಿ ಹೆಸರು

06:00 AM Jun 03, 2018 | Team Udayavani |

ಸಿಂಗಾಪುರ: ಜಾಗತಿಕ ನಾಯಕರ ಹೆಸರನ್ನು ಅಜರಾಮರವಾಗಿಸುವ ಪ್ರಯತ್ನ ಇತಿಹಾಸದುದ್ದಕ್ಕೂ ನಡೆದಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಎಲ್ಲೆಡೆ ರಾರಾಜಿಸುತ್ತಿದೆ. ಪ್ರಧಾನಿ ಮೋದಿ ಗೌರವಾರ್ಥವಾಗಿ ಅವರ ಹೆಸರನ್ನು ವಿಶ್ವದ ಹಲವು ದೇಶಗಳ ವಿಶೇಷ ಸಸ್ಯ, ಹಣ್ಣು, ಹೂವುಗಳ ಪ್ರಭೇದಕ್ಕೆ ಇಡುವ ಸಂಪ್ರದಾಯ ಸಿಂಗಾಪುರದಲ್ಲೂ ಮುಂದುವರಿದಿದೆ.

Advertisement

“ನ್ಯಾಶನಲ್‌ ಆರ್ಕಿಡ್‌ ಗಾರ್ಡನ್‌ ಆಫ್ ಸಿಂಗಾಪುರ್‌’ನಲ್ಲಿರುವ ಆರ್ಕಿಡ್‌ ಹೂಗಳ ಪ್ರಭೇದವೊಂದಕ್ಕೆ “ಡೆಂಡೋಬ್ರಿಯನ್‌ ನರೇಂದ್ರ ಮೋದಿ’ ಎಂದು ಹೆಸರಿಡಲಾಗಿದೆ. ಈ ಪುಷೊದ್ಯಾನಕ್ಕೆ ಮೋದಿ ನೀಡಿರುವ ಭೇಟಿಸ್ಮರಣಾರ್ಥ ಈ ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ಉಷ್ಣವಲಯದಲ್ಲಿ ಈ ಪ್ರಭೇದದ ಆರ್ಕಿಡ್‌ ಸಸ್ಯಗಳು 38 ಸೆಂ.ಮೀ. ಎತ್ತರದವರೆಗೆ ಬೆಳೆಯುತ್ತವಲ್ಲದೆ, ಗೊಂಚಲಿನ ಆಕಾರದಲ್ಲಿ ಹೂ ಬಿಡುತ್ತವೆ. ಒಂದೊಂದು ಗೊಂಚಲಿನಲ್ಲೂ 14ರಿಂದ 20 ಸುಂದರ ಹೂಗಳಿದ್ದು, ನೋಡಲು ಆಕರ್ಷಕವಾಗಿರುವುದು ಈ ಜಾತಿಯ ಹೂಗಳ ವಿಶೇಷ. ಈ ಹಿಂದೆ ಮಾವಿನ ಹಣ್ಣಿಗೆ, ಪಟಾಕಿಗಳಿಗೆ, ಸೇವಂತಿ ಹೂವಿನ ಪ್ರಬೇಧಕ್ಕೆ ಮೋದಿ ಹೆಸರಿಟ್ಟಿದ್ದು ಗಮನ ಸೆಳೆದಿತ್ತು. ಇಂಡೋನೇಷ್ಯಾ ಅಧ್ಯಕ್ಷ ವಿದೊದೊ ತಮ್ಮ ಮೊಮ್ಮಗನಿಗೆ ಶ್ರೀ ನರೇಂದ್ರ ಎಂದು ಹೆಸರಿಟ್ಟಿದ್ದಾಗಿ ಪ್ರಕಟಿಸಿದ್ದರು.

ಎಲ್ಲೆಲ್ಲಿ ಮೋದಿ ಹೆಸರು?
ಇಸ್ರೇಲಿ ಹೂವು: ಕಳೆದ ವರ್ಷ ಇಸ್ರೇಲ್‌ಗೆ ಮೋದಿ ಭೇಟಿ ನೀಡಿದ್ದಾಗ ಅಲ್ಲಿನ ಕ್ರಿಸಾಂಥೇ ಮಮ್‌ ಎಂಬ ಹೂವಿಗೆ “ಮೋದಿ’ ಎಂದು ಹೆಸರಿಡಲಾಯಿತು.

ಶಿಶುವಿಗೆ ಮೋದಿ ಹೆಸರು: 2014ರ ಮೇ 26ರಂದು ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗ ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ  ಜನಿಸಿದ್ದ ಗಂಡು ಮಗುವಿಗೆ ನರೇಂದ್ರ ಕೃಷ್ಣ ಮೋದಿ ಎಂದು ಹೆಸರಿಡಲಾಗಿತ್ತು.

ಮೋದಿ ಮ್ಯಾಂಗೋ: ಮಾವಿನ ಹಣ್ಣು ಬೆಳೆಯುವ ಹಾಜಿಖಲೀ ಮುಲ್ಲಾ ಖಾನ್‌, 2015ರಲ್ಲಿ ಹೊಸ ತಳಿಗೆ ಮೋದಿ ಮ್ಯಾಂಗೋ ಹೆಸರಿಟ್ಟಿದ್ದರು.

Advertisement

ಮೋದಿ ಇಡ್ಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ “ಮೋದಿ ಇಡ್ಲಿ’ ಸಾಕಷ್ಟು ಫೇಮಸ್‌. ಅಂಗಡಿ ಹೆಸರು ಮೋದಿ ಇಡ್ಲಿ ಸೆಂಟರ್‌.

ಮೋದಿ ಟೀ ಸ್ಟಾಲ್‌: 2013ರಲ್ಲಿ ಮೋದಿ ಪ್ರಧಾನಿಯಾದಾಗ ಝಾರ್ಖಂಡ್‌ನ‌ ವಿನಯ್‌ ಶರ್ಮಾ ಎಂಬಾತ, ರಾಂಚಿಯ  ಸ್ಟೇಷನ್‌ ರಸ್ತೆಯಲ್ಲಿನ ತನ್ನ ನೂತನ ಚಹಾ ಕ್ಯಾಂಟೀನ್‌ಗೆ ಮೋದಿ ಟೀ ಸ್ಟಾಲ್‌ ಎಂದು ಹೆಸರಿಟ್ಟಿದ್ದ.

ಆ್ಯಂಡ್ರಾಯ್ಡ ಮಾದರಿ: 2013ರಲ್ಲಿ ಮೋದಿ ಹೆಸರಿನಲ್ಲಿ “ಸ್ಮಾರ್ಟ್‌ ನಮೋ’ ಎಂಬ ಸ್ಮಾರ್ಟ್‌ ಫೋನ್‌ ಬಿಡುಗಡೆಯಾಗಿತ್ತು. ಅದು ನೆಕ್ಸ್ಟ್ ಜನರೇಶನ್‌ ಆ್ಯಂಡ್ರಾಯ್ಡ ಮೊಬೈಲ್‌ ಒಡಿಸ್ಸಿ ಎಂದು ಕಂಪೆನಿ ಹೇಳಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next