Advertisement

ಲಾಲ್‍ಬಾಗ್‍ನಲ್ಲಿ “ಆರ್ಕಿಡ್ ಪುಷ್ಪ ಮೇಳ’

12:40 AM Oct 20, 2019 | Lakshmi GovindaRaju |

ಬೆಂಗಳೂರು: ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ “ಆರ್ಕಿಡ್ ಪುಷ್ಪ ಮೇಳ’ಕ್ಕೆ ಶನಿವಾರ ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ. ವೆಂಕಟೇಶ್ ಚಾಲನೆ ನೀಡಿದರು.

Advertisement

ಮರಿಗೌಡ ಹಾಲ್‌ನಲ್ಲಿ ಸೊಸೈಟಿಯ ಸದಸ್ಯರು ಬೆಳೆದಿರುವ ಬಗೆ ಬಗೆಯ ಅಪರೂಪದ ಆರ್ಕಿಡ್‌ಗಳ ಪ್ರದರ್ಶನವಿದ್ದರೆ, ಹೊರಗಡೆ ಆರ್ಕಿಡ್ ಗಿಡಗಳ ಮಾರಾಟಕ್ಕೆಂದು 12 ಮಳಿಗೆಗಳನ್ನು ತೆರೆಯಲಾಗಿದೆ. ಮೇಳದಲ್ಲಿ ಸೊಸೈಟಿಯ 300 ಸದಸ್ಯರು ಬೆಳೆದಿರುವ ಡೆಂಡ್ರೋಬಿಯಮ್‌ಸ್‌, ಪ್ಯಾಪಿಲೊ ಪೀಡಿಯಂ, ವ್ಯಾಂಡಾ ಮತ್ತಿತರ 80 ತಳಿಯ ಆರ್ಕಿಡ್ ಹೂವಿನ ಸಸಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಕನಿಷ್ಠ 200 ರೂ.ನಿಂದ 4000 ರೂ.ವರೆಗಿನ ಬೆಲೆಯುಳ್ಳ ಆರ್ಕಿಡ್‌ಗಳು ಮೇಳದಲ್ಲಿವೆ. ಹೈಬ್ರಿಡ್ ತಳಿಗಳಾದ ಫಲನೊಪ್ಸಿಸ್, ವ್ಯಾಂಡಾ, ವೊಕಾರಾ ಸೇರಿದಂತೆ ಸುಮಾರು 15-18ಕ್ಕೂ ಹೆಚ್ಚು ತಳಿಯ ಆರ್ಕಿಡ್‌ಗಳನ್ನು ಪ್ರದರ್ಶಿಸಲಾಗಿದೆ. ಅವುಗಳ ಜತೆಗೆ ಆಕರ್ಷಕವಾದ ಬಳ್ಳಿಯಾಕಾರದ ಹೂವುಗಳು, ಮೊಗ್ಗು-ಅರಳಿದ ಹೂವುಗಳು ಪಾಟ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಆರ್ಕಿಡ್ ಬೆಳೆಸುವವರಿಗಾಗಿ ಸಂಪೂರ್ಣ ಮಾರ್ಗದರ್ಶನ ಹಾಗೂ ಅಗತ್ಯ ಪರಿಕರಗಳು ಮೇಳದಲ್ಲಿ ಲಭ್ಯವಿವೆ. ಪ್ರತಿದಿನ 2 ಬಾರಿ ಆರ್ಕಿಡ್ ಬೆಳೆಯ ಬಗ್ಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಸಸಿಗಳು, ಪಾಟ್‌ಗಳು, ಅವುಗಳ ಆರೈಕೆಗೆ ಬೇಕಾದ ಮಣ್ಣು-ಗೊಬ್ಬರ ಸೇರಿದಂತೆ ಇತರೆ ಪರಿಕರಗಳ ಮಾರಾಟ ನಡೆಯುತ್ತಿದೆ. ಇನ್ನು ಮೇಳಕ್ಕೆ ಮೊದಲ ದಿನವೇ ಸಾವಿರಾರು ಮಂದಿ ಭೇಟಿ ನೀಡಿದ್ದರು.

ಹವ್ಯಾಸಿ ಆರ್ಕಿಡ್‌ಗಳ ಕಾಡಿನ ಕಲ್ಪನೆ ಹೋಲುವ ಆರ್ಕಿಡ್‌ಗಳು, ಆರ್ಕಿಡ್ ಮಂಟಪ ವೀಕ್ಷಕರನ್ನು ಆಕರ್ಷಿಸಿತ್ತು. ಮೇಳವು ಭಾನುವಾರವೂ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ 50 ರೂ. ನಿಗದಿ ಮಾಡಲಾಗಿದೆ. ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಅವರು ಸೊಸೈಟಿಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಜಿ.ಡಿ. ಚಂದನ್, ಮಾಜಿ ಅಧ್ಯಕ್ಷ ಡಾ. ಕೆ.ಎಸ್. ಶಶಿಧರ್ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next