ಗಣೇಶೋತ್ಸವಗಳಲ್ಲಿ ವರ್ಷದ ಬದುಕಿಗೆ ಕಾಸು ಜೋಡಿಸಿಕೊಳ್ಳುತ್ತಿದ್ದ ನಾಡಿನ ಆರ್ಕೇಸ್ಟ್ರಾ ತಂಡಗಳೆಲ್ಲ ಇಂದು ದನಿ ಕಳೆದುಕೊಂಡಿವೆ. ನೀವು ಒನ್ಸ್ ಮೋರ್ ಅಂದ್ರೂ ಅವರೀಗ ಹಾಡೋ ಸ್ಥಿತಿಯಲ್ಲಿಲ್ಲ. ಈ ನಾಲ್ಕೈದು ತಿಂಗಳು ಲಾಕ್‌ಡೌನ್‌ನಲ್ಲಿ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಅವರು ಕಾಣಲಿಲ್ಲ. ಈಗ ಗಣೇಶನ ಮುಂದಾದ್ರೂ ಹಾಡಲು ಚಾನ್ಸ್ ಸಿಗುತ್ತೇನೋ ಅಂದುಕೊಂಡ್ರೆ…
ಅಭಯಹಸ್ತ ತೋರುತ್ತಾ, ವಿರಾಜಮಾನನಾಗಿ ಕುಳಿತ ಗಣಪ. ಸುತ್ತಲೂ ವಿದ್ಯುದ್ದೀಪಗಳ ಝಗಮಗ ಬೆಳಕಿನ ಝರಿ. ಅದರ ಮುಂದೆ ಚಿತ್ರಮಂಜರಿ! ಅಣ್ಣಾವ್ರ ಹಾಡಿಗೆ, ವಿಷ್ಣು ದಾದನ ಸ್ಟೈಲಿಗೆ, ಶಿವಣ್ಣನ ಡ್ಯಾನ್ಸಿಗೆ ಶ್ರುತಿಯಾಗಿ ಆರ್ಕೆಸ್ಟ್ರಾ ತಂಡ ಹಾಡೋದು, ಕುಣಿಯೋದು, ಮಿಮಿಕ್ರಿ ಮಾಡೋದನ್ನು ನೋಡೋದಿಕ್ಕೆಂದೇ ಜನಸ್ತೋಮ. ಕೀಬೋರ್ಡು, ಡ್ರಮ್ಮು ಸೇರಿ ಸಕಲ ವಾದ್ಯಗೋಷ್ಠಿಗಳ ನಡುವೆ ಮೊಳಗುತ್ತಿದ್ದಿದ್ದು, ಶಿಳ್ಳೆ- ಚಪ್ಪಾಳೆ… ಗಣೇಶೋತ್ಸವಗಳಲ್ಲಿ ವರ್ಷದ ಬದುಕಿಗೆ ಕಾಸು ಜೋಡಿಸಿಕೊಳ್ಳುತ್ತಿದ್ದ ನಾಡಿನ ಆರ್ಕೆಸ್ಟ್ರಾ ತಂಡಗಳೆಲ್ಲ ಇಂದು ದನಿ ಕಳೆದುಕೊಂಡಿವೆ. ನೀವು ಒನ್ಸ್ ಮೋರ್ ಅಂದ್ರೂ ಅವರೀಗ ಹಾಡೋ ಸ್ಥಿತಿಯಲ್ಲಿಲ್ಲ. ಈ ನಾಲ್ಕೈದು ತಿಂಗಳು ಲಾಕ್‌ಡೌನ್‌ನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಅವರು ಕಾಣಲಿಲ್ಲ. ಈಗ ಗಣೇಶನ ಮುಂದಾದ್ರೂ ಹಾಡಲು ಚಾನ್ಸ್ ಸಿಗುತ್ತೇನೋ ಅಂದುಕೊಂಡ್ರೆ, ಜನ ಗುಂಪು ಗುಂಪಾಗಿ ಸೇರಲು ಕೋವಿಡ್ ಆತಂಕ ಬಿಡುತ್ತಿಲ್ಲ.
ಎಲ್ಲ ಸರಿ ಇದ್ದ ದಿನಗಳಲ್ಲಿ… : “ಒಬ್ಬೊಬ್ಬರು ಅವರವರ ಪ್ರತಿಭೆಗೆ ತಕ್ಕಂತೆ 1 ರಿಂದ 5 ಸಾವಿರ ರೂ. ಗಳಿಕೆಕಾಣುತ್ತಿದ್ದರು. ಕಾರ್ಯಕ್ರಮಕ್ಕೆ ಕನಿಷ್ಠ ಅಂದ್ರೂ ಒಂದು ತಂಡಕ್ಕೆ 25 ಸಾವಿರ ರೂ. ಕಮಾಯಿ ಸಿಗುತ್ತಿತ್ತು. ಸಾಮಾನ್ಯವಾಗಿ ಎಲ್ಲ ಕಲಾವಿದರು ಅವರ ಪ್ರತಿಭೆಯಿಂದಲೇ ಬದುಕು ಕಟ್ಟಿಕೊಂಡಿರುತ್ತಿದ್ದರು.ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಉಪಕಸುಬು ಇತ್ತಷ್ಟೇ. ಈಗ ನಾವು ಹಾಡುತ್ತೇವಂದ್ರೂ ನಮ್ಮೆದುರು ಚಪ್ಪಾಳೆ ಹೊಡೆಯಲು ಕೈಗಳಿಲ್ಲ’ ಅಂತಾರೆ, 38 ವರ್ಷಗಳಿಂದ ಆರ್ಕೆಸ್ಟ್ರಾ ತಂಡ ನಡೆಸುತ್ತಿರುವ,ಡಾ. ರಾಜ್ ಕುಮಾರ್ ಜತೆ ಸಾಕಷ್ಟು ಬಾರಿ ವೇದಿಕೆ ಹಂಚಿಕೊಂಡಿದ್ದ ಆರ್ಕೆಸ್ಟ್ರಾ ಗಾಯಕ ಮೋಹನ್.
ಅದೊಂದು ಚೈನ್ ಲಿಂಕ್… : ಆರ್ಕೆಸ್ಟ್ರಾ ಅಂದ್ರೆ ಕೇವಲ ಒಬ್ಬ ಗಾಯಕನ ಬದುಕಷ್ಟೇ ನಡೆಯುತ್ತಿರಲಿಲ್ಲ. ಡ್ರಮ್ ಕೀಬೋರ್ಡ್ ನುಡಿಸುವವನು, ಕಣ್ಮನ ರಂಜಿಸುತ್ತಿದ್ದ ಡ್ಯಾನ್ಸರ್‌ಗಳು, ಮಿಮಿಕ್ರಿ ಆರ್ಟಿಸ್ಟ್ ಗಳು, ವಾದ್ಯ ಸಲಕರಣೆಗಳನ್ನು ಹೊತ್ತೂಯ್ಯುವ ವ್ಯಾನಿನ ಡ್ರೈವರ್, ಶಾಮಿಯಾನ ಹಾಕುವವ, ಬೀದಿಯುದ್ದಕ್ಕೂ ನಕ್ಷತ್ರಗಳನ್ನು ಧರೆಗಿಳಿಸುತ್ತಿದ್ದ ಲೈಟಿಂಗ್ ಬಾಯ್ಸ್. ಹೀಗೆ ಇವರು ಮತ್ತು ಇವರ ಕುಟುಂಬ ಆರ್ಕೆಸ್ಟ್ರಾ ಉದ್ಯಮದ ಹಿಂದೆ ಚೆಂದದ ಬದುಕು ಕಟ್ಟಿಕೊಂಡಿತ್ತು.
ಧೂಳು ತಿನ್ನುತ್ತಿರುವ ಸಲಕರಣೆಗಳು : ಕಳೆದ ಮೂರ್ನಾಲ್ಕು ತಿಂಗಳಿಂದ ಅಲ್ಲದೆ, ಮುಂದಿನ ಆರೇಳು ತಿಂಗಳು ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸೂಚನೆ ಕಾಣದ ಪರಿಣಾಮ, ಗಾಯಕವೃಂದ ಬಳಸುತ್ತಿದ್ದ ಸಂಗೀತೋಪಕರಣಗ ಳೆಲ್ಲ ಮೂಲೆ ಸೇರಿ ಧೂಳು ತಿನ್ನುತ್ತಿವೆ. ಲೈಟಿಂಗ್ ಮಂಕಾಗಿ ಕುಳಿತಿವೆ. ಇನ್ನು ಸೌಂಡ್ ಸಿಸ್ಟಂನವರ ಕಥೆಯಂತೂ ಆ ಗಣೇಶನಿಗೇ ಪ್ರೀತಿ. ಮೈಕುಗಳು ಪಾಲ್ಗೊಳ್ಳುವ ಯಾವುದೇ ಸಮಾರಂಭಕ್ಕೂ ಜನಸಮೂಹ ಇರಲೇಬೇಕು. ಆದರೆ, ಈಗ ಜನ ಸೇರುವುದಾದರೂ ಎಲ್ಲಿಂದ? “ಇಂದಿನ ಯುವಕರು ಸೌಂಡು, ಲೈಟಿಂಗ್ಸ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಹೀಗಾಗಿ, ಈ ಐದಾರು ವರ್ಷಗಳಲ್ಲಿ ಧ್ವನಿ- ಬೆಳಕಿನ ಉಪಕರಣಗಳ ಮೇಲೆ ಹಲವರು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು. ಅನೇಕರ ಲೋನ್ ಇನ್ನೂ ತೀರಿಲ್ಲ. ಇತ್ತ ಆದಾಯವೂ ಇಲ್ಲ. ಕೋವಿಡ್ ಮುಗಿದ ಮೇಲೆ ಎಲ್ಲವೂ ಸರಿಹೋಗುತ್ತೆ, ಮತ್ತೆ ಸಾಂಸ್ಕೃತಿಕ ಜಗತ್ತು ಮೈಕೊಡವಿ ಏಳುತ್ತೆ ಅಂತ ಭಾವಿಸಿದ್ದೇವೆ’ ಎಂಬ ಆಶಯ ಮೋಹನ್ ಅವರದ್ದು. ಒಟ್ಟಿನಲ್ಲಿ ಗಣೇಶನ ಮುಂದೀಗ, ಆರ್ಕೆಸ್ಟ್ರಾದ ಅಬ್ಬರವಿಲ್ಲದೆ ಮೌನದ ಸಂಗೀತ ಮನೆಮಾಡಿದೆ. ದುಡ್ಡು, ಬದುಕು ಕೊಟ್ಟು ಕರುಣಿಸುತ್ತಿದ್ದ ಗಣೇಶ ಮತ್ತೆ ಅನ್ನ ನೀಡುವ ದಣಿಯಾಗಲಿ…
ಆರ್ಕೆಸ್ಟ್ರಾ ಕಲಾವಿದರಿಗೆ ಈಗ ಹೊಸ ದಾರಿಗಳು ಕಾಣಿಸುತ್ತಿಲ್ಲ. ಸಂಗೀತೋಪಕರಗಳನ್ನೆಲ್ಲ ನಾವು ಮೂಟೆ ಕಟ್ಟಿ ಇಟ್ಟಿದ್ದೇವೆ. ಅವುಗಳ ನಿರ್ವಹಣೆಯೂ ಬಹಳ ಕಷ್ಟವಾಗಿದೆ.
– ಮೋಹನ್, ಆರ್ಕೆಸ್ಟ್ರಾ ತಂಡದ ಮಾಲೀಕ