ಬಂಗಾರಪೇಟೆ: ಮರಗಿಡ ನಾಶ ಮಾಡಿದ್ದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುತ್ತಿರುವ ಇಂತಹ ದಿನಗಳಲ್ಲಿ, ವೃದ್ಧ ದಂಪತಿ ತಮ್ಮ ಜಮೀನಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಆಸರೆಯಾಗಿದ್ದಾರೆ.
ಇವರ ತೋಟದಲ್ಲಿ ಬಿಡುವ ಹಣ್ಣನ್ನೂ ಮಾರಾಟ ಮಾಡುವುದಾಗಲಿ, ಜನರಿಗೆ ತಿನ್ನುವುದಕ್ಕಾಗಲಿ ಬಿಡುವುದಿಲ್ಲ, ಇಲ್ಲಿ ಬೆಳೆದ ಪ್ರತಿ ಹಣ್ಣು ಪ್ರಾಣಿ ಪಕ್ಷಿಗಳಿಗೆ ಸೇರಬೇಕು ಅನ್ನೋದು ಇವರ ಉದ್ದೇಶ. ಹೀಗಾಗಿ ನಾಲ್ಕು ವರ್ಷಗಳಿಂದ ಬೆಳೆದ ವಿವಿಧ ಹಣ್ಣುಗಳನ್ನು ಪ್ರಾಣಿ ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.
ಆಂಧ್ರದ ರಾಜಮಂಡ್ರಿಯಿಂದ ಹಣ್ಣಿನ ಸಸಿಗಳನ್ನು ತಂದು ನೆಟ್ಟು, ಪ್ರತಿ ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ, ತಮ್ಮ ಹೊಟ್ಟೆಗೆ ಬೆಳೆ ಬೆಳೆದುಕೊಳ್ಳಲು ಪರಿತಪಿಸುತ್ತಿರುವ ಈ ಕಾಲದಲ್ಲಿ ಸಾವಿರಾರು ರೂ.ಹಣ ಖರ್ಚು ಮಾಡಿ, ಟ್ಯಾಂಕರ್ ಮೂಲಕ ನೀರು ಹಾಯಿಸಿ, ಒಂದು ಹಣ್ಣನ್ನೂ ಮಾರಾಟ ಮಾಡದೇ, ಪಕ್ಷಿಗಳಿಗೆ ಆಹಾರ ಒದಗಿಸುತ್ತಿರುವುದು ಶ್ಲಾಘನೀಯ.
ಪಕ್ಷಿಗಳ ಕಲರವದೊಂದಿಗೆ ತಮ್ಮ ದಿನ ಪ್ರಾರಂಭಿಸುವ ರೆಡ್ಡಿ ಅವರು, ಪಕ್ಷಿಗಳ ಇಂಪಾದ ಧ್ವನಿಯನ್ನು ಕೇಳಲು ಮುಂಜಾನೆಯೇ ಎದ್ದು ಮನೆಯ ಸುತ್ತಲೂ ಓಡಾಡುತ್ತಾರಂತೆ.
Advertisement
ತಾಲೂಕಿನ ಮರಾಠ ಹೊಸಹಳ್ಳಿಯ ಪರಿಸರ ಪ್ರೇಮಿಯೂ ಆದ ಜಿ.ಬಿ.ರೆಡ್ಡಿ ಹಾಗೂ ಇವರ ಪತ್ನಿ ತಮಗಿರುವ ಅರ್ಧ ಎಕರೆ ಭೂಮಿಯಲ್ಲಿ 15ಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ದಾಳಿಂಬೆ, ಚೆರ್ರಿ, ಮೂಸಂಬಿ, ಸೀಬೆ, ನೇರಳೆ, ಸ್ಟಾರ್, ಅಂಜೂರ ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿ, ಫಲವನ್ನು ಪ್ರಾಣಿ ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.
Related Articles
Advertisement
ಸನ್ಯಾಸಿಯಿಂದ ಮನ ಪರಿವರ್ತನೆ: ಜಿ.ಬಿ.ರೆಡ್ಡಿ ಬದುಕಿನಲ್ಲಿ ಇಂಥಾದೊಂದು ಬದಲಾವಣೆಗೆ ಮುಖ್ಯ ಕಾರಣ ಒಬ್ಬ ಸನ್ಯಾಸಿ. ತಮ್ಮ ಜೀವನ ನಿರ್ವಹಣೆಗಾಗಿ ಮರಗಳನ್ನು ಕಡಿದು ಮಾರಾಟ ಮಾಡುವುದಾಗಿತ್ತು.
ಪರಿಸರಕ್ಕೆ ತಮ್ಮಿಂದ ಆಗುತ್ತಿರುವ ಅಪಚಾರದ ಬಗ್ಗೆ ಅವರ ಅರಿವಿಗೆ ಬರಲಿಲ್ಲ. ಪ್ರಕೃತಿಯಲ್ಲಿ ಬೆಳೆಯುವ ಬೆಲೆ ಬಾಳುವ ಬೃಹತ್ತಾದ ಮರಗಳನ್ನು ಕಡಿದು ಅದರಿಂದಲೇ ತನ್ನ ಅರ್ಧ ಜೀವನವನ್ನು ಸಾಗಿಸಿದ್ದರು.
ಹೀಗೆ ಜಿ.ಬಿ.ರೆಡ್ಡಿ ಅವರು ಒಮ್ಮೆ ಅಮರನಾಥ ಯಾತ್ರೆಗೆಂದು ಹೋಗಿದ್ದರು. ಈ ವೇಳೆ ಅಲ್ಲಿನ ಹವಮಾನ ವೈಪರೀತ್ಯದಿಂದ ಉಸಿರುಗಟ್ಟಿ ಅಲ್ಲೇ ಕುಸಿದು ಬಿದ್ದು, ಸಾಯುವ ಹಂತಕ್ಕೆ ತಲುಪಿದ್ದರಂತೆ. ಈ ವೇಳೆ ಅಲ್ಲೇ ಇದ್ದ ಸನ್ಯಾಸಿಯೊಬ್ಬರು ಅವರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಹೀಗೆ ಸಾವಿನ ಕದತಟ್ಟಿ ಬಂದ ರೆಡ್ಡಿ ಅವರಿಗೆ ಆ ಸನ್ಯಾಸಿ ಕೆಲವು ಸಲಹೆಗಳನ್ನು ನೀಡಿದರಂತೆ. ನೀನು ಈ ಜನುಮದಲ್ಲಿ ಸಾಕಷ್ಟು ತಪ್ಪು ಮಾಡಿದ್ದೀರಿ, ಪ್ರಕೃತಿಯಲ್ಲಿನ ಲಕ್ಷಾಂತರ ಮರಗಳನ್ನು ಕಡಿದು ಅಮಾಯಕ ಜೀವಗಳಿಗೆ ತೊಂದರೆ ಕೊಟ್ಟಿದ್ದೀರಿ, ಹೀಗಾಗಿ ಇನ್ನು ಮುಂದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮೂಕ ಪ್ರಾಣಿ ಪಕ್ಷಿಗಳಿಗೆ ನೆರವಾಗುವ ಕೆಲಸ ಮಾಡುವಂತೆ ಹೇಳಿದ್ದರಂತೆ.
ನಂತರ ಅಲ್ಲಿಂದ ತಮ್ಮೂರಿಗೆ ಹಿಂತಿರುಗಿದ ರೆಡ್ಡಿಯವರು, ಮರ ಕಡಿಯುವುದನ್ನು ಕೈಬಿಟ್ಟು, ಒಂದು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ನಿಂಬೆ, ನೇರಳೆಗಿಡ ನೆಟ್ಟಿದ್ದು, ಗಿಡಗಳಿಗೆ ನೀರು ಕಟ್ಟುವ ಕಾಯಕದಲ್ಲಿ ನೀರತರಾಗಿದ್ದಾರೆ.
ನಮ್ಮ ಜೀವಿತಾವಧಿವರೆಗೂ ಪರಿಸರಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ಬಿಡುವಿನ ಸಮಯದಲ್ಲಿ ರಸ್ತೆ ಬದಿ, ಸರ್ಕಾರಿ ಶಾಲೆ, ಕಚೇರಿ ಆವರಣದಲ್ಲಿ ಮರಗಿಡ ಬೆಳೆಸಲು ಸಿದ್ಧನಿದ್ದೇನೆ. ಈ ಮೂಲಕ ಪ್ರಕೃತಿಗೆ, ಪ್ರಾಣಿ ಪಕ್ಷಿಗಳಿಗೆ ಸಹಾಯವಾಗಲಿದೆ.
● ಜಿ.ಬಿ.ರೆಡ್ಡಿ, ಪರಿಸರ ಪ್ರೇಮಿ
● ಎಂ.ಸಿ.ಮಂಜುನಾಥ್