Advertisement

ವಿಕ್ರಮ್‌ ಲ್ಯಾಂಡರ್‌ ಥರ್ಮಲ್‌ ಇಮೇಜ್ ಪತ್ತೆ ಹಚ್ಚಿದ ಆರ್ಬಿಟರ್

10:31 AM Sep 10, 2019 | keerthan |

ಬೆಂಗಳೂರು: ಚಂದ್ರಯಾನ-2ರ ಅಂತಿಮ ಹಂತದಲ್ಲಿ ಇಸ್ರೋ ಸಂಪರ್ಕ ಕಳೆದುಕೊಂಡು ವಿಜ್ಞಾನಿಗಳಲ್ಲಿ ಮತ್ತು ದೇಶವಾಸಿಗಳಲ್ಲಿ ನಿರಾಸೆಗೆ ಕಾರಣವಾಗಿದ್ದ ವಿಕ್ರಂ ಲ್ಯಾಂಡರ್ ನ ಥರ್ಮಲ್ ಇಮೇಜ್ ಅನ್ನು ಪತ್ತೆಹಚ್ಚುವಲ್ಲಿ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಯಶಸ್ವಿಯಾಗಿದೆ.

Advertisement

ಈ ಮಾಹಿತಿಯನ್ನು ಇಸ್ರೋ ಇದೀಗ ಬಹಿರಂಗಪಡಿಸಿದೆ. ಆದರೆ ವಿಕ್ರಂ ಲ್ಯಾಂಡರ್ ನಿಂದ ಯಾವುದೆ ರೀತಿಯ ಸಂಕೇತಗಳು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಚಂದ್ರಯಾನ-2ರ ಆರ್ಬಿಟರ್ ಕಳುಹಿಸಿರುವ ಥರ್ಮಲ್ ಚಿತ್ರಗಳಲ್ಲಿ ವಿಕ್ರಂ ಲ್ಯಾಂಡರ್ ಪತ್ತೆಯಾಗಿರುವುದು ವಿಜ್ಞಾನಿಗಳಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದೆಯಾದರೂ ವಿಕ್ರಂನಿಂದ ಸಂಕೇತಗಳು ಲಭಿಸುವವರೆಗೆ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನ ಸದ್ಯದ ಸ್ಥಿತಿಗಳ ಕುರಿತು ವಿಜ್ಞಾನಿಗಳು ಯಾವುದೇ ತೀರ್ಮಾನಕ್ಕೆ ಬರುವಂತಿಲ್ಲ ಎನ್ನಲಾಗುತ್ತಿದೆ.

ವಿಕ್ರಂ ಲ್ಯಾಂಡರ್ ಕಾರ್ಯನಿರ್ವಹಣೆಯನ್ನು 14 ದಿನಗಳವರೆಗೆ ಸಂಯೋಜಿಸಲಾಗಿದೆ. ಈಗಾಗಲೇ ಒಂದು ದಿನ ಕಳೆದಿರುವುದರಿಂದ ಇನ್ನೂ 13 ದಿನಗಳವರೆಗೆ ವಿಕ್ರಂ ಕಾರ್ಯನಿರ್ವಹಣೆ ಜೀವಂತವಾಗಿರಲಿದೆ. ಹಾಗಾಗಿ ವಿಕ್ರಂ ಇನ್ನೂ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದರೆ ಅದರೊಂದಿಗೆ ಭೂಕೇಂದ್ರಕ್ಕೆ ಸಂಪರ್ಕ ಸಾಧ್ಯವಾಗಲಿದೆ. ಆದರೆ ವಿಕ್ರಂ ಕ್ರ್ಯಾಷ್ ಲ್ಯಾಂಡಿಂಗ್ ಆಗಿದ್ದರೆ ಅದರೊಂದಿಗೆ ಸಂಪರ್ಕ ಸಾಧಿಸುವುದು ವಿಜ್ಞಾನಿಗಳಿಗೆ ಕಷ್ಟಸಾಧ್ಯವಾಗಲಿದೆ.

‘ಚಂದ್ರನ ನೆಲದಲ್ಲಿ ವಿಕ್ರಂ ಲ್ಯಾಂಡರ್ ಇರುವ ಸ್ಥಳ ನಮಗೆ ಪತ್ತೆಯಾಗಿದೆ ಮತ್ತು ಇದರ ಥರ್ಮಲ್ ಚಿತ್ರಗಳನ್ನು ಆರ್ಬಿಟರ್ ಕ್ಲಿಕ್ಕಿಸಿದೆ. ಆದರೆ ನಮಗೆ ವಿಕ್ರಂ ಜೊತೆ ಸಂವಹನ ಇದುವರೆಗೆ ಸಾಧ್ಯವಾಗುತ್ತಿಲ್ಲ, ಸಂವಹನ ಸಾಧನೆಗೆ ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಸಂವಹನ ಸಾಧಿಸುವ ವಿಶ್ವಾಸವಿದೆ’ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರು ಮಾಹಿತಿ ನೀಡಿದ್ದಾರೆ.

Advertisement

ವಿಕ್ರಂ ಲ್ಯಾಂಡರ್ ಮತ್ತು ಅದರೊಳಗಿದ್ದ ಪ್ರಗ್ಯಾನ್ ರೋವರ್ ಗಳನ್ನು ಚಂದ್ರನ ಕಕ್ಷೆಗೆ ಹೊತ್ತೊಯ್ದಿದ್ದ ಆರ್ಬಿಟರ್ ಸೆಪ್ಟಂಬರ್ 02ರಂದು ವಿಕ್ರಂ ಅನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಿತ್ತು. ಈ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದೆ. ಇದು ವಿಕ್ರಂ ಲ್ಯಾಂಡರ್ ಮತ್ತು ಇಸ್ರೋ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next