ಗಣೇಶ್ ಖುಷಿಯ ಮೂಡ್‌ನಲ್ಲಿದ್ದಾರೆ. ಅವರೊಂದಿಗೆ ನಿರ್ದೇಶಕ ಪ್ರಶಾಂತ್‌ರಾಜ್ ಕೂಡ. ಇವರ ಖುಷಿಗೆ ಕಾರಣ “ಆರೆಂಜ್’. ಹೌದು, “ಆರೆಂಜ್’ ಬಿಡುಗಡೆ ಮುನ್ನವೇ ಸೇಫ್ ಮಾಡಿದೆ ಎಂಬ ಕಾರಣ ಒಂದಾದರೆ, ಬಿಡುಗಡೆ ಮುನ್ನವೇ ಗೆದ್ದ ಖುಷಿ ಇನ್ನೊಂದು. ಹಾಗಾಗಿ, “ಆರೆಂಜ್’ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಲ್ಲೇ ಡಿ.7 ರಂದು ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ ನಿರ್ದೇಶಕ ಪ್ರಶಾಂತ್‌ರಾಜ್.
“ಜೂಮ್’ ಕಾಂಬಿನೇಶನ್‌ನಲ್ಲೇ “ಆರೆಂಜ್’ ಮಾಡೋಕೆ ಕಾರಣವಿಷ್ಟು. “ಜೂಮ್’ ಚಿತ್ರ ನೋಡಿದ ಗಣೇಶ್, ಸಿನಿಮಾ ಚೆನ್ನಾಗಿದೆ. ನಿಮ್ಮೊಂದಿಗೆ ಇನ್ನೊಂದು ಚಿತ್ರ ಮಾಡುತ್ತೇನೆ ಅಂತ ಆ ದಿನಗಳಲ್ಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಗಣೇಶ್ ಹಾಗೆ ಹೇಳಿದ್ದೇ ತಡ, ಪ್ರಶಾಂತ್‌ರಾಜ್ ಅವರು, ಗಣೇಶ್ ಅವರಿಗೆ ಸರಿಹೊಂದುವ ಕಥೆ ಹೆಣೆದು, ಚಿತ್ರ ಮಾಡೋಕೆ ಮುಂದಾಗಿದ್ದಾರೆ.
ಹಾಗೆ ಮಾತುಕತೆಯಲ್ಲಿ ನಡೆದು, ಕೆಲಸ ಮುಗಿಸಿದ ಚಿತ್ರವೇ “ಆರೆಂಜ್’ ಎಂಬುದು ನಿರ್ದೇಶಕರ ಮಾತು. ಚಿತ್ರೀಕರಣ ವೇಳೆ ಗಣೇಶ್, ಸಾಕಷ್ಟು ಚರ್ಚೆ ನಡೆಸಿ ಚಿತ್ರ ಚೆನ್ನಾಗಿ ಬರಲು ಸಹಕರಿಸಿದ್ದಾರಂತೆ. ಕೆಲ ವಿಷಯಗಳನ್ನು ಬೇಕು, ಬೇಡ ಎಂಬ ಬಗ್ಗೆ ಆಳವಾಗಿ ಚರ್ಚಿಸಿದ ನಂತರ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ ಬಗ್ಗೆ ನೆನಪಿಸಿಕೊಳ್ಳುವ ನಿರ್ದೇಶಕರು,
ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ಒದಗಿಸಿರುವ ನಾಲ್ಕು ಹಾಡುಗಳು ಈಗಾಗಲೇ ಮೆಚ್ಚುಗೆ ಪಡೆದಿವೆ ಎಂದು ಮಂದಹಾಸ ಹೊರಹಾಕುತ್ತಾರೆ. ನಾಲ್ಕು ಹಾಡುಗಳ ಪೈಕಿ ನಿರ್ದೇಶಕರು ಎರಡು, ಕವಿರಾಜ್ ಎರಡು ಬರೆದಿದ್ದಾರೆ. ಈಗಾಗಲೇ ಅಮೆಜಾನ್ ಸಂಸ್ಥೆ ಒಳ್ಳೆಯ ಮೊತ್ತಕ್ಕೆ ಚಿತ್ರ ಖರೀದಿಸಿದ್ದು ನಿರ್ದೇಶಕರಿಗೆ ಇನ್ನಷ್ಟು ಖುಷಿ ಹೆಚ್ಚಿದೆ. ಡಿಸೆಂಬರ್ 7 ರಂದು ಚಿತ್ರ ಬಿಡುಗಡೆ ಬಳಿಕ ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರಲ್ಲಿದೆ.
ಗಣೇಶ್ ಅವರಿಗೆ “ಆರೆಂಜ್’ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಚಿತ್ರ ಆಗುತ್ತೆ ಎಂಬ ನಂಬಿಕೆ. ಇಲ್ಲಿ ಮಾನವೀಯ ಗುಣಗಳಿವೆ. ಪ್ರೀತಿ, ಸೆಂಟಿಮೆಂಟ್ ಸೇರಿದಂತೆ ಹಾಸ್ಯದ ಪಾಕ ಇಲ್ಲಿದೆ. ಒಂದು ಹಣ್ಣಿನಿಂದ ಶುರುವಾಗು ಕಥೆಯಲ್ಲಿ ಏನೆಲ್ಲಾ ಇದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಪ್ರತಿ ಪಾತ್ರಗಳಿಗೂ ಇಲ್ಲಿ ಆದ್ಯತೆ ಇದೆ. ಎಲ್ಲವೂ ಗಂಭೀರವಾಗಿದ್ದರೂ, ನೋಡುಗರಿಗೊಂದು ಮಜ ಕೊಡುತ್ತದೆ’ ಎಂಬುದು ಗಣೇಶ್ ಮಾತು. ಇನ್ನು, ನಾಯಕಿ ಪ್ರಿಯಾ ಆನಂದ್ ಅವರಿಗೆ ಒಳ್ಳೆಯ ಕಥೆ ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆಯಂತೆ.