Advertisement

ಆರೆಂಜ್‌ ಅಲರ್ಟ್‌ : ಇನ್ನೆರಡು ದಿನ ಧಾರಾಕಾರ ಮಳೆ ಸಾಧ್ಯತೆ

10:59 PM Jul 23, 2019 | Team Udayavani |

ಕಾಸರಗೋಡು: ಮಂಗಳವಾರವೂ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಮುಂದಿನ ಇನ್ನೆರಡು ದಿನವೂ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Advertisement

ಮುಳಿಯಾರು ಕಾನತ್ತೂರು ಕಾಳಪಳ್ಳಿಯಲ್ಲಿ ಸಂರಕ್ಷಣಾ ಗೋಡೆ ಕುಸಿದಿದೆ. ಮುಳಿಯಾರು ಕೋಟೂರಿನ ಬೇಬಿ ಅವರ ಮನೆ ಆಂಶಿಕವಾಗಿ ಹಾನಿಗೀಡಾಗಿದೆ. ಬೇಳದ ಅಬ್ಟಾಸ್‌ ಅವರ ಮನೆ ಆಂಶಿಕವಾಗಿ ಕುಸಿದು ಬಿದ್ದಿದ್ದು, ಮುಟ್ಟತ್ತೋಡಿ ತೈವಳಪ್ಪು ಇಬ್ರಾಹಿಂ ಅವರ ಮನೆಯೂ ಹಾನಿಗೀಡಾಗಿದೆ. ಮೀಂಜ ಪಂಚಾಯತ್‌ನ 7 ನೇ ವಾರ್ಡ್‌ ಕುಳೂರು ಜಿನಾಲ ಬಳಿಯ ಕೂಳುವೇರ್‌ ನಿವಾಸಿ ನಾರಾಯಣ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ಮರ ಬೀಳುತ್ತಿರುವ ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿದ್ದರಿಂದ ಮನೆಯವರು ಅಪಾಯದಿಂದ ಪಾರಾದರು. ಪಿಲಿಕ್ಕೋಡ್‌ ಮಾಣಿಯಾಟ್‌ ಶಾಫಿಯಿಲ್‌ ತಂಬಾಯಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ತಂಬಾಯಿ ಅವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಉದುಮ, ಪಳ್ಳಿಕೆರೆ, ಪೂಚ್ಚಕ್ಕಾಡ್‌, ಅರಯಾಲಿಂಗಾಲ್‌ನಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಬೀರಂತಬೈಲ್‌ನ ಮನೆಯೊಂದರ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿತು.

ಗುಡ್ಡ ಕುಸಿದು ಮನೆಗೆ ಹಾನಿ
ಅಡ್ಕಸ್ಥಳದಲ್ಲಿ ಗುಡ್ಡ ಕುಸಿದು ಮುಳಿಯಾಲದ ವೆಂಕಪ್ಪ ನಾಯ್ಕ ಅವರ ಮನೆ ಹಾನಿಗೀಡಾಗಿದೆ. ಮನೆಯ ಹಿಂಭಾಗದ ರಸ್ತೆಯೂ ಕುಸಿದಿದೆ. ಅಡೂರಿನಲ್ಲಿ ಸರಕಾರಿ ಬಾವಿಯೊಂದು ಕುಸಿದು ಬಿದ್ದಿದ್ದು, ಹಲವು ಕುಟುಂಬಗಳಿಗೆ ಸಮಸ್ಯೆಯಾಗಿದೆ. ಅಡೂರು ಕೋರಿಕಂಡ ಎಸ್‌.ಸಿ. ಕಾಲನಿಯಲ್ಲಿರುವ ಬಾವಿಯ ಒಂದು ಭಾಗ ಜರಿದು ಬಿದ್ದಿದೆ.

ಉಪ್ಪಳ ಕೊಕ್ಕೆಚ್ಚಾಲು ಡಬಲ್‌ ಗೇಟ್‌ ನಿವಾಸಿ ಕೂಲಿ ಕಾರ್ಮಿಕ ಶಂಸುದ್ದೀನ್‌ ಅವರ ಮನೆಯ ಬಾವಿ ಕುಸಿದು ಬಿದ್ದು ಆತಂಕ ಸೃಷ್ಟಿಸಿದೆ. ಕಲ್ಲು ಕಟ್ಟಲಾಗಿದ್ದ ಬಾವಿಯಲ್ಲಿದ್ದ ಮೋಟಾರು ಮಣ್ಣಿನಡಿಯಲ್ಲಿ ಹೂತು ಹೋಗಿದೆ. ಕುಬಣೂರು ವಿಲೇಜ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು. ಕಾಸರಗೋಡು ನಗರದ ಕೋಟೆ ರಸ್ತೆಯ ರಾಮಚಂದ್ರ ಶೆಣೈ ಅವರ ಮಾಲಕತ್ವದಲ್ಲಿರುವ ಮನೆ ಮೇಲೆ ಮರ ಮುರಿದು ಬಿದ್ದು ಹಾನಿಗೀಡಾಗಿದೆ. ಯಾರಿಗೂ ಅಪಾಯವಾಗಿಲ್ಲ.

Advertisement

ಎತ್ತರದ ತೆರೆ ಸಾಧ್ಯತೆ
ರಾತ್ರಿ 11.30 ವರೆಗೆ ಪೋಳಿಯೂರಿನಿಂದ ಕಾಸರಗೋಡು ವರೆಗಿನ ಕಡಲ ತೀರದಲ್ಲಿ 3.5 ರಿಂದ 4.1 ಮೀಟರ್‌ ವರೆಗೆ ಎತ್ತರದ ತೆರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ರಾಷ್ಟಿÅàಯ ಸಮುದ್ರ ಸ್ಥಿತಿ ಅಧ್ಯಯನ ಕೇಂದ್ರ ತಿಳಿಸಿದೆ.

ಬಿರುಸಿನಗಾಳಿ
ಕೇರಳದ ಕರಾವಳಿಯಲ್ಲಿ ಪಶ್ಚಿಮ ದಿಕ್ಕಿನಿಂದ ತಾಸಿಗೆ 40 ರಿಂದ 50 ಕಿ.ಮೀ. ವರೆಗಿನ ವೇಗದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಇದರಿಂದ ಕಡಲುಬ್ಬರ ಕಾಣಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಮೀನುಗಾರರು ಕಡಲಿಗೆ ತೆರಳಕೂಡದು ಎಂದು ಸೂಚಿಸಲಾಗಿದೆ. ಜು.26 ವರೆಗೆ ಇದೇ ಸ್ಥಿತಿಯಿರುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ 1,401.765 ಮಿ.ಮೀ. ಮಳೆ
ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ 1,401.765 ಮಿ.ಮೀ. ಮಳೆ ಲಭಿಸಿದೆ. ಜು.22ರಂದು ಬೆಳಗ್ಗೆ 10 ಗಂಟೆಯಿಂದ ಜು.23 ಬೆಳಗ್ಗೆ 10 ಗಂಟೆ ವರೆಗೆ 115.075 ಮಿಮೀ ಮಳೆ ಸುರಿದಿದೆ. ಮಳೆ ಸಂಬಂಧ ಜಿಲ್ಲೆಯಲ್ಲಿ ಈ ವರೆಗೆ 5 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ತಾಸುಗಳ ಅವ ಧಿಯಲ್ಲಿ 2 ಮನೆಗಳು ಪೂರ್ಣ ರೂಪದಲ್ಲಿ, 30 ಮನೆಗಳು ಭಾಗಶಃ ಹಾನಿಗೀಡಾಗಿವೆ. ಮಳೆಗಾಲ ಆರಂಭಗೊಂಡ ಅನಂತರ ಜಿಲ್ಲೆಯಲ್ಲಿ ಈ ವರೆಗೆ 4 ಮನೆಗಳು ಪೂರ್ಣ ರೂಪದಲ್ಲಿ, 122 ಮನೆಗಳು ಭಾಗಶಃಹಾನಿಗೊಂಡಿವೆ. 163 ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಕಡಲ್ಕೊರೆತ
ಸತತ ಮಳೆಯಿಂದಾಗಿ ಚೇರಂಗೈ ಕಡಪ್ಪುರ ದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ. ಇದರಿಂದ ಈ ಪ್ರದೇಶದ ಮರಳು ಸಮುದ್ರ ಪಾಲಾಗಿ ಭಾರೀ ಹೊಂಡಮಯವಾಗಿದೆ. ಇದಲ್ಲದೆ ಕಡಲ್ಕೊರೆತದಿಂದಾಗಿ ಈ ಪ್ರದೇಶದ ಜನರಿಗೆ ನಡೆದು ಹೋಗಲು ಕೂಡ ಸಾಧ್ಯವಾಗದೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next