Advertisement

ಕರಾವಳಿಯಲ್ಲಿ “ಆರೆಂಜ್‌ ಅಲರ್ಟ್‌’: ಭಾರೀ ಮಳೆ ಮುನ್ಸೂಚನೆ

10:52 AM Jun 01, 2020 | mahesh |

ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಂಗಳ ವಾರದಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಪರಿಣಾಮ ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ “ಆರೆಂಜ್‌ ಅಲರ್ಟ್‌’ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಜೂ. 1 ಮತ್ತು 2ರಂದು ಕರಾವಳಿ ಭಾಗದಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗುಡುಗು ಮತ್ತು ಗಾಳಿ ಕೂಡ ಹೆಚ್ಚಾಗಿರಲಿದೆ ಎಂದು ತಿಳಿಸಿದೆ.

Advertisement

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ವಾಯುಭಾರ ಕುಸಿತ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಲಿದೆ. ಜೂ. 3ರಂದು ಗುಜರಾತ್‌ ರಾಜ್ಯದತ್ತ ಸಂಚರಿಸಲಿದೆ. ಇದು ಮುಂಗಾರು ಮೇಲೆ ಪರಿಣಾಮ ಬೀರಲಿದ್ದು, ಸೋಮವಾರ ಕೇರಳ ರಾಜ್ಯ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಇದಾದ ಮರುದಿನ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರದಂದು ಮಳೆಯಾದ ವರದಿಯಾಗಿದೆ.

ಜೂ.4ರಂದು ಜಿಲ್ಲೆಗೆ ಎನ್‌ಡಿಆರ್‌ಎಫ್‌
ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪ ವನ್ನು ಸಮರ್ಪಕವಾಗಿ ಎದುರಿಸಲು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್‌ ಜೂ. 4ರಂದು ದ.ಕ. ಜಿಲ್ಲೆಗೆ ಆಗಮಿ ಸಲಿದೆ. ಎನ್‌ಡಿಆರ್‌ಎಫ್‌ ದಕ್ಷಿಣ ವಲಯದ ಕಚೇರಿ ಆಂಧ್ರಪ್ರದೇಶದ ಗುಂಟೂರಿನಲ್ಲಿರುವುದರಿಂದ ತುರ್ತು ಸಂದರ್ಭ ಅತಿವೃಷ್ಟಿ ಪ್ರದೇಶಗಳಿಗೆ ತಲುಪಲು ವಿಳಂಬವಾಗುವ ಕಾರಣ ಈ ವರ್ಷವೂ ಮುಂಚಿತವಾಗಿಯೇ ಎನ್‌ಡಿಆರ್‌ಎಫ್‌ ತರಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಜೂ. 4ರಂದು ಜಿಲ್ಲೆಗೆ ಆಗಮಿಸಲಿದೆ.

ಕೊಡಗು: ಆರೆಂಜ್‌ ಅಲರ್ಟ್‌
ಕೊಡಗು ಜಿಲ್ಲೆಯಲ್ಲೂ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಜೂ. 1ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ದ.ಕ.: ತುರ್ತು ಸೇವೆಗೆ ಕಂಟ್ರೋಲ್‌ ರೂಂ
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಮುಂಜಾಗ್ರತಾ ದೃಷ್ಟಿಯಿಂದ ದ.ಕ. ಜಿಲ್ಲಾಡಳಿತ 24 ಗಂಟೆಗಳ ಕಂಟ್ರೋಲ್‌ ರೂಂ. ವ್ಯವಸ್ಥೆ ಕಲ್ಪಿಸಿದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077ಗೆ ಕರೆ ಮಾಡಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next