Advertisement

ಓರಲ್‌ ಸಬ್‌ ಮ್ಯೂಕಸ್‌ ಫೈಬ್ರೋಸಿಸ್‌

11:08 PM Oct 05, 2019 | sudhir |

ಕೆನ್ನೆಗಳು ಪೆಡಸಾಗಿ ಬಾಯಿ ತೆರೆಯಲು ಕಷ್ಟವಾಗುವ ಸ್ಥಿತಿಯನ್ನು ಉಂಟುಮಾಡುವ ಕಾಯಿಲೆ ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌. ಮಸಾಲೆ, ಖಾರ ಪದಾರ್ಥಗಳನ್ನು ಸೇವಿಸುವ ಸಂದರ್ಭದಲ್ಲಿ ಉರಿಯ ಅನುಭವ ಮತ್ತು ಬಾಯಿ ತೆರೆಯಲು ಕಷ್ಟ ಹೆಚ್ಚುತ್ತ ಹೋಗುವ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಳ್ಳುತ್ತವೆ.

Advertisement

ಮಸಾಲೆ ಪದಾರ್ಥಗಳು ಮತ್ತು ಅಡಿಕೆಯನ್ನು ಮಿತಿಮೀರಿ ಸೇವಿಸುವುದು ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌ಗೆ ಸಾಮಾನ್ಯವಾದ ಕಾರಣಗಳು. ಆದರೆ ಅಡಿಕೆ ಜಗಿಯುವುದೇ ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌ಗೆ ಪ್ರಧಾನವಾದ ಕಾರಣ.

ದೇಶದಲ್ಲಿ ಅಡಿಕೆ ಹೆ‌ಚ್ಚು ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಜಗಿಯುವುದು ಹೆಚ್ಚು ಚಾಲ್ತಿಯಲ್ಲಿರುತ್ತದೆ. ಕರಾವಳಿಯಲ್ಲೂ ಇದೆ. ಇದೇ ಕಾರಣದಿಂದಾಗಿ ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌ ಪ್ರಕರಣಗಳು ಕೂಡ ಇಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ.

ಯಾವಾಗ ಎಚ್ಚರಿಕೆ ವಹಿಸಬೇಕು?
1. ರೋಗಿಯು ಅಡಿಕೆ, ಪಾನ್‌, ತಂಬಾಕು ಜಗಿಯುವ, ಮದ್ಯಪಾನ ಮಾಡುವ ಅತಿ ದೀರ್ಘ‌ಕಾಲದ ಇತಿಹಾಸ ಹೊಂದಿದ್ದು, ಬಾಯಿಯಲ್ಲಿ ಉರಿ ಮತ್ತು ಬಾಯಿ ತೆರೆಯಲು ಕಷ್ಟ ಅನುಭವಿಸುತ್ತಿದ್ದರೆ.

2. ಬಾಯಿ ತೆರೆಯಲು ಕಷ್ಟ ಹೆಚ್ಚುತ್ತ ಹೋಗುವುದು ಮತ್ತು ಬಕಲ್‌ ಮ್ಯುಕೋಸಾ ಪೆಡಸಾಗುತ್ತ ಹೋಗುವುದು ಇದರ ರೋಗಶಾಸ್ತ್ರದ ಪ್ರಧಾನ ಅಂಶ.

Advertisement

3. ಈ ರೋಗ ಲಕ್ಷಣಗಳ ಜತೆಗೆ ಬಾಯಿಯೊಳಗೆ ಹುಣ್ಣುಗಳು ಕೂಡ ಇರಬಹುದು.

ಈ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು?
1. ಈ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ರೋಗಿಯು ತತ್‌ಕ್ಷಣ ಅಡಿಕೆ, ಪಾನ್‌, ಸುಣ್ಣ (ಪಾನ್‌ ಜತೆಗೆ), ತಂಬಾಕು, ಮದ್ಯ ಸೇವನೆಯನ್ನು ನಿಲ್ಲಿಸಬೇಕು.

2. ಮಸಾಲೆ, ಖಾರವಾಗಿರುವ ಪದಾರ್ಥಗಳ ಸೇವನೆಯನ್ನು ನಿಲ್ಲಿಸಬೇಕು.

3. ಗಾಢ ಬಣ್ಣದ ಟೊಮೇಟೊ, ಬಸಳೆ, ಪಾಲಕ್‌, ಕ್ಯಾರೆಟ್‌ನಂತಹ ಆಹಾರ ವಸ್ತುಗಳ ಸೇವನೆಯನ್ನು ಹೆಚ್ಚಿಸಬೇಕು.

4. ರೋಗಿಯು ವಿಳಂಬ ಮಾಡದೆ ಮ್ಯಾಕ್ಸಿಲೊಫೇಶಿಯಲ್‌ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಅವರು ಬಯಾಪ್ಸಿ ನಡೆಸಿ ರೋಗದ ಗಂಭೀರತೆಯನ್ನು ಅನುಸರಿಸಿ ಚಿಕಿತ್ಸೆಯನ್ನು ಆರಂಭಿಸುತ್ತಾರೆ.

ಆದಷ್ಟು ಬೇಗನೆ ಚಿಕಿತ್ಸೆ ನೀಡಿ ಗುಣಪಡಿಸದೆ ಇದ್ದರೆ ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌ ತೊಂದರೆಯು ಕ್ಯಾನ್ಸರ್‌ ಆಗಿ ಪ್ರಗತಿ ಹೊಂದಬಹುದಾಗಿದೆ. ಆದ್ದರಿಂದ ಈ ಅನಾರೋಗ್ಯವನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆಗೆ ಒಳಗಾಗುವುದು ಅಗತ್ಯ ಎಂಬ ಅರಿವು ನಮ್ಮಲ್ಲಿರಬೇಕು.

ಡಾ| ಆನಂದ್‌ದೀಪ್‌ ಶುಕ್ಲಾ 
ಅಸೊಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next