Advertisement

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

03:57 PM Jun 21, 2024 | Team Udayavani |

ಬಾಯಿಯ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಕೆಲವು ತಪ್ಪು ಕಲ್ಪನೆಗಳನ್ನು ಸರಿಪಡಿಸಿ ನಿಜಾಂಶಗಳ ಬಗ್ಗೆ ತಿಳಿವಳಿಕೆ ಒದಗಿಸುವ ಮೂಲಕ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವಂತೆ ಮಾಡುವುದು ಈ ಲೇಖನದ ಉದ್ದೇಶ.

Advertisement

ಸುಳ್ಳು : ಬಾಯಿಯ ಆರೋಗ್ಯವು ಇತರ ದೇಹಾರೋಗ್ಯದ ಮೇಲೆ ಯಾವುದೇ ಪರಿಣಾಮ ಹೊಂದಿಲ್ಲ.

ನಿಜ: ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಅದರಿಂದ ಒಟ್ಟಾರೆ ದೇಹಾರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ದಂತವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಸುಳ್ಳು : ಗರ್ಭಧಾರಣೆಯ ಅವಧಿಯಲ್ಲಿ ಹಲ್ಲುಜ್ಜುವುದರಿಂದ ವಸಡುಗಳಿಂದ ರಕ್ತಸ್ರಾವ ಹೆಚ್ಚುತ್ತದೆ

ನಿಜ: ಗರ್ಭಧಾರಣೆಯ ಸಂದರ್ಭದಲ್ಲಿ ಹಾರ್ಮೋನ್‌ ಮಟ್ಟದಲ್ಲಿ ಏರುಪೇರು ಆಗುವುದರಿಂದ ವಸಡು ಕಾಯಿಲೆಗಳು ಉಲ್ಬಣಿಸಬಹುದಾಗಿದೆ. ಗರ್ಭ ಧರಿಸಿದ ಸಂದರ್ಭದಲ್ಲಿಯೂ ಹಲ್ಲುಜ್ಜುವುದನ್ನು ಮುಂದುವರಿಸಿ ಮತ್ತು ಹೆಚ್ಚಿನ ಸಲಹೆಗಳು ಮತ್ತು ಚಿಕಿತ್ಸೆಗಾಗಿ ದಂತವೈದ್ಯರನ್ನು ಸಂಪರ್ಕಿಸಿ.

Advertisement

ಸುಳ್ಳು : ಎಲ್ಲ ಹಾಲು ಹಲ್ಲುಗಳು ಮೂಡಿದ ಬಳಿಕವೇ ಹಲ್ಲುಜ್ಜಲು ಆರಂಭಿಸಬೇಕು.

ನಿಜ: ಶಿಶುವಿನ ಬಾಯಿಯಲ್ಲಿ ಮೊದಲ ಹಾಲು ಹಲ್ಲು ಮೂಡಿದ ಕೂಡಲೇ ಬೇಬಿ ಟೂತ್‌ಬ್ರಶ್‌ ಉಪಯೋಗಿಸಿ ಹಲ್ಲು/ ಹಲ್ಲುಗಳನ್ನು ಉಜ್ಜುವುದನ್ನು ಆರಂಭಿಸಬೇಕು.

ಸುಳ್ಳು : ಹಾಲುಹಲ್ಲುಗಳು ಬಿದ್ದುಹೋಗಿ ಹೊಸ ಹಲ್ಲುಗಳು ಮೂಡುವುದರಿಂದ ಅವುಗಳಲ್ಲಿ ದಂತಕುಳಿಗಳು ಉಂಟಾದರೆ ಚಿಕಿತ್ಸೆ ನೀಡಬೇಕಾಗಿಲ್ಲ.

ನಿಜ: ಹಾಲುಹಲ್ಲುಗಳಲ್ಲಿ ಉಂಟಾಗಿರುವ ಕುಳಿಗಳನ್ನು ಸರಿಪಡಿಸದೆ ಹೋದರೆ ಅವುಗಳು ಸಂಪೂರ್ಣ ನಾಶವಾಗಿ ಬಿದ್ದುಹೋಗಬಹುದು. ಹಾಲುಹಲ್ಲುಗಳನ್ನು ಅವಧಿಪೂರ್ವ ಕಳೆದುಕೊಳ್ಳುವುದರಿಂದ ಮಗುವಿನಲ್ಲಿ ಜಗಿಯುವುದಕ್ಕೆ, ಮಾತನಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು. ಅಲ್ಲದೆ ಮುಂದೆ ಮೂಡುವ ಶಾಶ್ವತ ಹಲ್ಲುಗಳು ಓರೆಕೋರೆಯಾಗಿ ಜೋಡಣೆಗೊಳ್ಳಬಹುದು.

ಸುಳ್ಳು : ನಿಮ್ಮ ಹಲ್ಲುಗಳು ಚೆನ್ನಾಗಿವೆ ಎಂದು ಅನ್ನಿಸುತ್ತಿದೆಯಾದರೆ ದಂತ ವೈದ್ಯರನ್ನು ಭೇಟಿ ಮಾಡಬೇಕಾಗಿಲ್ಲ.

ನಿಜ: ನಿಯಮಿತವಾಗಿ ದಂತವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭಾವ್ಯ ದಂತವೈದ್ಯಕೀಯ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದರಿಂದ ಸಮಸ್ಯೆ ಉಲ್ಬಣಗೊಂಡು ಭಾರೀ ಮತ್ತು ಅಧಿಕ ವೆಚ್ಚದ ಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.

ಸುಳ್ಳು : ಮೃದು (ಸಾಫ್ಟ್) ಬ್ರಶ್‌ಗಿಂತ ಹಾರ್ಡ್‌ ಬ್ರಶ್‌ ಹಲ್ಲುಜ್ಜುವುದಕ್ಕೆ ಹೆಚ್ಚು ಪರಿಣಾಮಕಾರಿ.

ನಿಜ: ಹಾರ್ಡ್‌ ಟೂತ್‌ಬ್ರಶ್‌ ತೀರಾ ದೊರಗಾಗಿದ್ದು, ಇದನ್ನು ಗಟ್ಟಿಯಾಗಿ ಒತ್ತಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲೆ ಇರುವ ಪದರ ಸವೆದುಹೋಗಬಹುದು. ಆದರೆ ಸಾಫ್ಟ್ ಬ್ರಶ್‌ ಉಪಯೋಗಿಸಿ ಹಲ್ಲುಜ್ಜುವುದರಿಂದ ಎನಾಮಲ್‌ ನಶಿಸಿಹೋಗದೆ ಹಲ್ಲುಗಳನ್ನು ಶುಚಿಯಾಗಿ ಇರಿಸಿಕೊಳ್ಳಲು ಸಾಧ್ಯ.

ಸುಳ್ಳು : ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುವುದು ಉತ್ತಮ.

ನಿಜ: ನೀವು ಎಷ್ಟು ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುತ್ತೀರೋ ಅಷ್ಟು ನಿಮ್ಮ ಹಲ್ಲುಗಳು ಮತ್ತು ವಸಡುಗಳಿಗೆ ಹಾನಿ ಉಂಟಾಗುತ್ತದೆ. ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುವುದರಿಂದ ಹಲ್ಲುಗಳ ಮೇಲ್ಪದರ ನಶಿಸಿಹೋಗಿ ಹಲ್ಲುಗಳು ಹೆಚ್ಚು ಸೂಕ್ಷ್ಮ ಸಂವೇದಿಯಾಗಬಹುದು.

ಸುಳ್ಳು : ಹಲ್ಲುಜ್ಜುವ ಬ್ರಶ್‌, ಟೂತ್‌ಪೇಸ್ಟ್‌ ಗಳ ಬದಲಾಗಿ ಹಲ್ಲುಪುಡಿಗಳನ್ನು ಉಪಯೋಗಿಸುವುದು ಉತ್ತಮ. ಹಲ್ಲುಜ್ಜುವ ಪುಡಿ/ ದಂತ ಮಂಜನ್‌ಗಳಲ್ಲಿ ಹಲ್ಲುಗಳ ಮೇಲ್ಪದರ ನಶಿಸುವಂತೆ ಮಾಡುವ ಅಂಶಗಳು ಹೆಚ್ಚು

ನಿಜ: ಪ್ರಮಾಣದಲ್ಲಿದ್ದು, ಇವುಗಳನ್ನು ಉಪಯೋಗಿಸುವುದರಿಂದ ಕಾಲಾಂತರದಲ್ಲಿ ಹಲ್ಲುಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಹಲ್ಲುಗಳನ್ನು ಬ್ರಶ್‌ ಮತ್ತು ಟೂತ್‌ಪೇಸ್ಟ್‌ ಉಪಯೋಗಿಸಿ ದಿನಂಪ್ರತಿ ಉಜ್ಜುವುದು ಉತ್ತಮ.

ಸುಳ್ಳು : ಸ್ಕೇಲಿಂಗ್‌ ಮಾಡುವುದರಿಂದ ಹಲ್ಲುಗಳು ದುರ್ಬಲವಾಗುತ್ತವೆ ಮತ್ತು ಸಡಿಲಗೊಳ್ಳುತ್ತವೆ.

ನಿಜ: ಹಲ್ಲುಗಳ ಮೇಲೆ ಶೇಖರಗೊಂಡಿರುವ ಜಿಗುಟು ಕೊಳೆ ಮತ್ತು ಮಡ್ಡಿಯನ್ನು ನಿರ್ಮೂಲಗೊಳಿಸುವುದಕ್ಕಾಗಿ ವಿಶೇಷ ಸಲಕರಣೆಗಳಿಂದ ಸ್ಕೇಲಿಂಗ್‌ ಮಾಡಲಾಗುತ್ತದೆ. ಇದರಿಂದ ಹಲ್ಲುಗಳು ಅಥವಾ ವಸಡುಗಳ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಸ್ಕೇಲಿಂಗ್‌ನಿಂದಾಗಿ ಕೆಲವು ದಿನಗಳ ಕಾಲ ಹಲ್ಲುಗಳು ಸೂಕ್ಷ್ಮ ಸಂವೇದಿಯಾಗಬಹುದು ಮತ್ತು ಸಡಿಲಗೊಂಡಂತೆ ಆಗಬಹುದು, ಆದರೆ ವಸಡುಗಳ ಆರೋಗ್ಯ ಸರಿಯಾದ ಕೂಡಲೇ ಇದು ಸರಿಹೋಗುತ್ತದೆ. ವಸಡುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿಯಮಿತವಾಗಿ ಸ್ಕೇಲಿಂಗ್‌ ಮಾಡುವುದನ್ನು ಉಪಯುಕ್ತ.

ಸುಳ್ಳು: ಹಲ್ಲು ಕೀಳುವುದರಿಂದ ದೃಷ್ಟಿ ದೋಷ ಉಂಟಾಗಬಹುದು.

ನಿಜ: ಹಲ್ಲು ಕೀಳುವುದರಿಂದ ದೃಷ್ಟಿ/ ದೃಷ್ಟಿಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಗೊತ್ತಿರುವ ಸಾಕ್ಷ್ಯಾಧಾರಗಳಿಲ್ಲ

ಸುಳ್ಳು: ಹಲ್ಲುನೋವಿದ್ದರೆ ತಂಬಾಕುಜಗಿಯುವುದು/ ಇರಿಸುವುದರಿಂದ ಕಡಿಮೆಯಾಗುತ್ತದೆ.

ನಿಜ: ಹಲ್ಲುನೋವಿಗೆ ತಂಬಾಕು ಪರಿಹಾರ ಎಂದು ಪರಿಗಣಿಸಲೇ ಬಾರದು. ಹಲ್ಲು ನೋವಿದ್ದರೆ ಹದ ಬಿಸಿಯಾದ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಬೇಕು ಅಥವಾ ವೈದ್ಯರು ಶಿಫಾರಸು ಮಾಡಿದಂತೆ ಔಷಧಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಆದಷ್ಟು ಬೇಗನೆ ಹಲ್ಲುನೋವಿಗೆ ಕಾರಣ ತಿಳಿದು ಸಮರ್ಪಕವಾದ ಚಿಕಿತ್ಸೆ ಪಡೆಯುವುದಕ್ಕಾಗಿ ದಂತವೈದ್ಯರನ್ನು ಕಾಣಬೇಕು.

ಸುಳ್ಳು: ಗುಲ್‌ ಮಂಜನ್‌, ಮಸಿ, ಇದ್ದಿಲು, ಇಟ್ಟಿಗೆಪುಡಿ, ಉಪ್ಪು, ಬೂದಿಗಳನ್ನು ಉಪಯೋಗಿಸುವುದರಿಂದ ಹಲ್ಲುಗಳಿಗೆ ಪ್ರಯೋಜನವಾಗುತ್ತದೆ

ನಿಜ: ಈ ವಸ್ತುಗಳು ಕೊರೆಯುವ ಗುಣ ಹೊಂದಿದ್ದು, ಹಲ್ಲುಗಳ ಮೇಲ್ಪದರ, ಸಂರಚನೆಗೆ ಹಾನಿ ಉಂಟುಮಾಡಬಲ್ಲವು. ಹೀಗಾಗಿ ಹಲ್ಲುಗಳನ್ನು ಶುಚಿಗೊಳಿಸಲು ಇವುಗಳನ್ನು ಉಪಯೋಗಿಸಬಾರದು. ಗುಲ್‌ ಮಂಜನ್‌ನಲ್ಲಿ ನಿಕೋಟಿನ್‌ ಇದ್ದು, ಇದನ್ನು ಉಪಯೋಗಿಸಿದರೆ ತಂಬಾಕು ಬಳಕೆಯ ಚಟಕ್ಕೆ ಒಳಗಾಗುವುದು ಸಾಧ್ಯ. ಆದ್ದರಿಂದ ಇದರ ಬಳಕೆಯನ್ನು ಮಾಡಲೇಬಾರದು.

ಸುಳ್ಳು: ವಯಸ್ಸಾಗುತ್ತಿದ್ದಂತೆ ಹಲ್ಲುಗಳು ಬಿದ್ದುಹೋಗುವುದು ಸಹಜ.

ನಿಜ: ನಿಮ್ಮ ಹಲ್ಲುಗಳ ಆಯುಷ್ಯವು ನೀವು ಅವುಗಳನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ ಎಂಬುದನ್ನು ಆಧರಿಸಿದೆ. ಉತ್ತಮ ಆಹಾರಶೈಲಿ, ಬಾಯಿಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ದಂತ ವೈದ್ಯಕೀಯ ತಪಾಸಣೆಗಳು ಹಲ್ಲುಗಳನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳುವುದಕ್ಕೆ ಮುಖ್ಯ. ಹಲ್ಲು ಮತ್ತು ವಸಡುಗಳ ಆರೈಕೆಯನ್ನು ಚೆನ್ನಾಗಿ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಜೀವನಪೂರ್ತಿ ಅವು ಚೆನ್ನಾಗಿರುತ್ತವೆ.

ಸುಳ್ಳು: ಮಗುವಿನಲ್ಲಿ ಸೀಳುತುಟಿ ಅಥವಾ ಅಂಗುಳ ದೋಷವು ಶಾಪದಿಂದ ಅಥವಾ ಗ್ರಹಣವನ್ನು ನೋಡಿದ್ದರಿಂದ ಉಂಟಾಗುತ್ತದೆ

ನಿಜ: ಶಿಶುವಿನಲ್ಲಿ ಸೀಳು ತುಟಿ ಅಥವಾ ಅಂಗುಳದಂತಹ ದೋಷವು ಗರ್ಭ ಧರಿಸಿದ ಸಮಯದಲ್ಲಿ ತಾಯಿಗೆ ಫೋಲಿಕ್‌ ಆ್ಯಸಿಡ್‌ನ‌ಂತಹ ಪೌಷ್ಟಿಕಾಂಶ ಕೊರತೆ, ಮದ್ಯಪಾನ/ ತಂಬಾಕು ಉಪಯೋಗಗಳಿಂದ; ನಿಕಟ ಸಂಬಂಧಿಗಳಲ್ಲಿ ವಿವಾಹದಿಂದ ಮತ್ತು ಕೆಲವು ನಿರ್ದಿಷ್ಟ ವಂಶವಾಹಿ ಕಾಯಿಲೆಗಳು ಮತ್ತು ಸಿಂಡ್ರೋಮ್‌ಗಳಿಂದ ಉಂಟಾಗುತ್ತದೆ.

ಸುಳ್ಳು:  ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುವುದು ಉತ್ತಮ.

ನಿಜ: ನೀವು ಎಷ್ಟು ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುತ್ತೀರೋ ಅಷ್ಟು ನಿಮ್ಮ ಹಲ್ಲುಗಳು ಮತ್ತು ವಸಡುಗಳಿಗೆ ಹಾನಿ ಉಂಟಾಗುತ್ತದೆ. ಗಟ್ಟಿಯಾಗಿ ಒತ್ತಿ ಬ್ರಶ್‌ ಮಾಡುವುದರಿಂದ ಹಲ್ಲುಗಳ ಮೇಲ್ಪದರ ನಶಿಸಿಹೋಗಿ ಹಲ್ಲುಗಳು ಹೆಚ್ಚು ಸೂಕ್ಷ್ಮ ಸಂವೇದಿಯಾಗಬಹುದು.

ಸುಳ್ಳು: ಹಲ್ಲುಜ್ಜುವ ಬ್ರಶ್‌, ಟೂತ್‌ಪೇಸ್ಟ್‌ಗಳ ಬದಲಾಗಿ ಹಲ್ಲುಪುಡಿಗಳನ್ನು ಉಪಯೋಗಿಸುವುದು ಉತ್ತಮ.

ನಿಜ: ಹಲ್ಲುಜ್ಜುವ ಪುಡಿ/ ದಂತ ಮಂಜನ್‌ಗಳಲ್ಲಿ ಹಲ್ಲುಗಳ ಮೇಲ್ಪದರ ನಶಿಸುವಂತೆ ಮಾಡುವ ಅಂಶಗಳು ಹೆಚ್ಚು ಪ್ರಮಾಣದಲ್ಲಿದ್ದು, ಇವುಗಳನ್ನು ಉಪಯೋಗಿಸುವುದರಿಂದ ಕಾಲಾಂತರದಲ್ಲಿ ಹಲ್ಲುಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಹಲ್ಲುಗಳನ್ನು ಬ್ರಶ್‌ ಮತ್ತು ಟೂತ್‌ಪೇಸ್ಟ್‌ ಉಪಯೋಗಿಸಿ ದಿನಂಪ್ರತಿ ಉಜ್ಜುವುದು ಉತ್ತಮ

 

Advertisement

Udayavani is now on Telegram. Click here to join our channel and stay updated with the latest news.

Next