ಬಂಗಾರಪೇಟೆ: ಸರ್ಕಾರ ಬಡವರಿಗೆ ಸೌಲಭ್ಯ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳು ವಂಚಿತರಾಗುತ್ತಾರೆ ಎಂಬುದಕ್ಕೆ ತಾಲೂಕಿನ ಬೂದಿಕೋಟೆಯಲ್ಲಿರುವ ಅಂಚೆ ಕಚೇರಿಯೇ ಸಾಕ್ಷಿ ಎಂಬಂತಿದೆ. ಕಮಿಷನ್: ತಾಲೂಕಿನ ಬೂದಿಕೋಟೆ ಗ್ರಾಮದ ಅಂಚೆ ಕಚೇರಿಯಲ್ಲಿ ನಿತ್ಯ ವೃದ್ಧರು, ವಿಕಲಚೇತನರು, ವಿಧವೆಯರಿಗೆ ಸರ್ಕಾರ ನೀಡುವ ಪಿಂಚಣಿ ಪಡೆಯಲು ಅಂಚೆ ಕಚೇರಿ ಸಿಬ್ಬಂದಿಗೆ ಕಮಿಷನ್ ನೀಡಬೇಕಿದೆ. ಕೊಡದಿದ್ದರೆ ಪಿಂಚಣಿ ನೀಡಲು ಸತಾಯಿಸುವರು ಎಂದು ಫಲಾನುಭವಿಗಳೇ ಆರೋಪಿಸುತ್ತಿದ್ದಾರೆ.
ಈ ಹಿಂದೆ ಪಿಂಚಣಿಯನ್ನು ಪೋಸ್ಟ್‌ಮೆನ್ ನೇರವಾಗಿ ಡ್ರಾ ಮಾಡಿ ಫಲಾನುಭವಿಗಳಿಗೆ ಕೊಡುತ್ತಿದ್ದರು. ಆಗ, ಸರ್ಕಾರ ನಿಗದಿಪಡಿಸಿದ್ದ ಹಣವನ್ನು ಫಲಾನುಭವಿಗೆ ಕಮಿಷನ್ ಪಡೆದು ಕೊಡುತ್ತಿದ್ದರು. ಈ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆ ಸರ್ಕಾರ ಫಲಾನುಭವಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವಂತೆ ಸೂಚಿಸಿತು.
ಖಾತೆ ಮೂಲಕ ಫಲಾನುಭವಿಗೆ ನೇರವಾಗಿ ಹಣ ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಬಹುತೇಕ ಗ್ರಾಮೀಣರಿಗೆ ಅಂಚೆ ಕಚೇರಿಗೆ ಹೋಗಿ ಹಣ ಡ್ರಾ ಮಾಡಲು ಓದು ಬರಹ ತಿಳಿಯದ ಕಾರಣ ಪೋಸ್ಟ್‌ಮೆನ್‌ಗಳೇ ಫಲಾನುಭವಿಗಳ ಪಾಸ್ ಪುಸ್ತಕ ಪಡೆದು ಅವರೇ ಸಹಿ ಮಾಡಿ ಹಣ ಡ್ರಾ ಮಾಡಿ ಮನೆ ಬಾಗಿಲಿಗೆ ಹಣ ತಲುಪಿಸುತ್ತಿದ್ದರು.ಆದರೆ, ಈಗಲೂ ಕಮಿಷನ್ ಇಲ್ಲದೆ ಹಣ ಕೊಡುವುದಿಲ್ಲ.
ಇದು ತಾಲೂಕಿನ ಎಲ್ಲಾ ಕಡೆ ಪೋಸ್ಟ್ ಮೆನ್‌ಗಳ ಹಗಲು ದರೋಡೆ. ಪಿಂಚಣಿ ಹಣವನ್ನೇ ನಂಬಿ ಜೀವಿಸುವವರಿಗೆ ನಿರಾಸೆ ಜತೆ ವಿಧಿ ಇಲ್ಲದೆ ಅವರು ಕೊಟ್ಟ ಹಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೋಸ್ಟ್ ಮಾಸ್ಟರ್‌ಗೆ ತಿಳಿದಿದ್ದರೂ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದ್ದಾರೆ.
ಬುಧವಾರ ಬೂದಿಕೋಟೆ ಹೋಬಳಿ ಕೇಂದ್ರದ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಹಣ ಪಡೆದು ವಂಚನೆ ಮಾಡುತ್ತಿದ್ದಾಗ ಸಾರ್ವಜನಿಕರು ಪ್ರಶ್ನೆ ಮಾಡಿದರೆ, ನಮಗೆ ಕೆಲಸ ಮಾಡಲು ನೀವು ತೊಂದರೆ ಕೊಡುತ್ತಿದ್ದೀರಿ ಪೊಲೀಸರಿಗೆ ದೂರು ಕೊಡ ಲಾಗುವುದೆಂದು ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ.
ಬೀಗ ಜಡಿದು ಪ್ರತಿಭಟನೆ: ಸಿಬ್ಬಂದಿ ದೌರ್ಜನ್ಯ ಖಂಡಿಸಿ ಫಲಾನುಭಗಳು ಮತ್ತು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದಾಗ ಮೌನಕ್ಕೆ ಶರಣಾ ದರು. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ ಹಗಲು ದರೋಡೆ ನಿಯಂತ್ರಿಸದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ʼಅಂಚೆ ಕಚೇರಿಯಲ್ಲೇ ಹಣ ಪಡೆಯಲು ಬರುವವರಿಗೆ ಅಲ್ಲಿನ ಸಿಬ್ಬಂದಿ ಚಲನ್ ಬರೆಯಲು ಬಾರದ ವ್ಯಕ್ತಿಗಳಿಗೆ ಚಲನ್ ಬರೆದಿದ್ದಕ್ಕೆ ಎಂದು ಹೇಳಿ 20-30ರೂ. ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ, 2 ಸಾವಿರ ಮೇಲೆ ಡ್ರಾ ಮಾಡುವವರಿಂದ 100-200 ರೂ. ಕಮಿಷನ್ ಕೊಡಬೇಕು.ʼ –
ವೆಂಕಟೇಶಪ್ಪ, ಫಲಾನುಭವಿ.