Advertisement
ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಯವರು ಛತ್ತೀಸಗಢದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಅಜಿತ್ ಜೋಗಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಹಠಾತ್ ಮೈತ್ರಿ ಹಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರಮುಖ ಪ್ರಶ್ನೆಯೆಂದರೆ, ಮಾಯಾವತಿ ನಿಜಕ್ಕೂ ತಮ್ಮ ಜನಪ್ರಿಯತೆಯನ್ನು ತುಸು ಜಾಸ್ತಿಯೇ ಅಂದಾಜು ಮಾಡುತ್ತಿದ್ದಾರಾ ಅಥವಾ ಅವರು ಭಾರತೀಯ ಜನತಾ ಪಾರ್ಟಿಯ ಒತ್ತಡಕ್ಕೆ ಮಣಿದು ಹೀಗೆ ಮಾಡುತ್ತಿದ್ದಾರಾ? ಎನ್ನುವುದು.
Related Articles
Advertisement
ಆದರೆ ಮಾಯವತಿ ಹೀಗೆ ಮಾಡುತ್ತಿರುವುದೇಕೆ? ಬಿಜೆಪಿಯು ಮಾಯಾವತಿಯವರನ್ನು ನಿಯಂತ್ರಣದಲ್ಲಿಡಲು ಸಿಬಿಐನ ತೂಗುಗತ್ತಿಯನ್ನು ಬಳಸಿಕೊಳ್ಳುತ್ತಿದೆ, ಹೀಗಾಗಿ ಹೆದರಿದ ಮಾಯಾವತಿ ಮಹಾಘಟಬಂಧನ ಎನ್ನುವ ಪದ ಕೇಳಿ ಕಿವಿಮುಚ್ಚಿ ಕೊಳ್ಳುತ್ತಿದ್ದಾರೆ ಎನ್ನುವ ವದಂತಿಗಳೂ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಎಷ್ಟು ವಾಸ್ತವವಿದೆಯೋ ತಿಳಿಯದು. ಆದರೆ ತಪ್ಪು ಮಾಡದವನಿಗೆ ಹೆದರುವ ಅಗತ್ಯ ಇರುವುದಿಲ್ಲ ಎನ್ನುವುದೂ ಸತ್ಯವಲ್ಲವೇ? ಮಹಾಘಟಬಂಧನ್ ರೂಪು ಪಡೆಯುವ ಮೊದಲೇ ಅದನ್ನು ಪಂಕ್ಚರ್ ಮಾಡುವುದರಿಂದ ಬಿಜೆಪಿಗೆ ಹೆಚ್ಚು ಲಾಭವಿದೆ ಎನ್ನುವದನ್ನೂ ನಾವು ಮರೆಯಬಾರದು. ಏಕೆಂದರೆ ಪ್ರತಿಪಕ್ಷಗಳ ಒಗ್ಗಟ್ಟಿನಿಂದಾಗಿ ಲೋಕಸಭೆಗಾಗಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಮುಖ ಕ್ಷೇತ್ರಗಳಾದ ಗೋರಖ್‌ಪುರ ಮತ್ತು ಫುಲ್ಪುರವನ್ನು ಕಳೆದುಕೊಂಡದ್ದನ್ನು ನಾವು ನೋಡಿದ್ದೇವೆ.
ಉಪಚುನಾವಣೆಯ ವೇಳೆಯಲ್ಲಿ ಯಾವಾಗ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ಭಿನ್ನಾಭಿಪ್ರಾಯ ಕರಗಿತೋ, ಆಗ ಅವುಗಳೊಂದಿಗೆ ರಾಷ್ಟ್ರೀಯ ಲೋಕದಳ ಮತ್ತು ಕಾಂಗ್ರೆಸ್ ಕೂಡ ಜೊತೆಗೂಡಿದ್ದರಿಂದ ಬಿಜೆಪಿ ಸೋಲನುಭವಿಸ ಬೇಕಾಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಗೋರಖ್‌ಪುರ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯರ ಸಂಸದೀಯ ಕ್ಷೇತ್ರದಲ್ಲೇ ಬಿಜೆಪಿ ವಿಫಲವಾಯಿತು.
ಆಡಳಿತ ಪಕ್ಷವು ಉಪಚುನಾವಣೆಗಳಲ್ಲಿ ಸೋತದ್ದು-ಅದೂ ಪೂರ್ವ ಉತ್ತರಪ್ರದೇಶದಲ್ಲಿ- ಪ್ರತಿಪಕ್ಷಗಳ “ಅದೃಷ್ಟ’ವೇನೂ ಆಗಿರ ಲಿಲ್ಲ. ಮುಂದೆ ಬಿಜೆಪಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ರುವ ತನ್ನ ಬಲಿಷ್ಠ ನೆಲೆ ಕೈರಾನಾದಲ್ಲೂ ಇದೇ ರೀತಿಯ ಸೋಲನು ಭವಿಸಿದಾಗ ಕಮಲ ನಾಯಕತ್ವ ಗಾಬರಿಯಾಗಿದ್ದು ಸುಳ್ಳಲ್ಲ. ಉಪಚುನಾವಣೆಯಲ್ಲಿ ದೊರೆತ ಈ ಯಶಸ್ಸಿನಿಂದ ಪ್ರೇರಿತ ವಾದ ಪ್ರತಿಪಕ್ಷಗಳು ಲೋಕಸಭಾ ಚುನಾವಣೆಯಲ್ಲೂ ಇಂಥದ್ದೇ ಮಹಾಮೈತ್ರಿಯೊಂದನ್ನು ರಚಿಸಬೇಕೆಂದು ಬಯಸುತ್ತಿರುವುದು ಬಿಜೆಪಿಯ ನಾಯಕತ್ವಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಿರಲಿಕ್ಕೂ ಸಾಕು. ಈ ಮೈತ್ರಿಯನ್ನು ತಡೆಯುವುದಕ್ಕೆ ಏನಕೇನ ಪ್ರಯತ್ನಿಸು ವುದಕ್ಕೆ ಬಿಜೆಪಿಯ ನಾಯಕತ್ವ ನಿರ್ಧರಿಸಿಬಿಟ್ಟಿದೆ ಎನ್ನಲಾಗುತ್ತದೆ.
ಅಕ್ರಮ ಆಸ್ತಿ ಗಳಿಸಿದ ಆರೋಪದಲ್ಲಿ ಯಾವಾಗ ಮಾಯಾವತಿ ಮತ್ತು ಅಖೀಲೇಶ್ ಯಾದಾವ ಸಿಬಿಐನ ಕಣ್ಗಾವಲಿಗೆ ಬಂದರೋ, ಆಗ ಆಡಳಿತ ಪಕ್ಷ ಬಿಜೆಪಿಗೆ ಒತ್ತಡ ಹೇರುವುದು ಸುಲಭವಾಯಿತು. ಆದಾಗ್ಯೂ ಬಿಜೆಪಿಯ ಹಿರಿಯತಲೆಗಳು ಬಹಳ ವಿವೇಚನೆಯಿಂದ ತಮ್ಮ ಕಾರ್ಯಾಚರಣೆ ಅನುಷ್ಠಾನಕ್ಕೆ ತರಲು ಆರಂಭಿಸಿದ್ದೇ, ಅದರ ಫಲಿತಾಂಶಗಳು ಶೀಘ್ರವಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಶಿವಪಾಲ್ ಯಾದವ್ ಅವರು ಅಖೀಲೇಶರ ವಿರುದ್ಧ ಬಂಡಾಯವೆದ್ದದ್ದು ಮತ್ತು ನಂತರ ಅವರು ಸ್ವತಂತ್ರವಾಗಿ ಸಮಾಜವಾದಿ ಸೆಕ್ಯುಲರ್ ಫ್ರಂಟ್ ಸ್ಥಾಪಿಸಿಕೊಂಡು ಎಸ್‌ಪಿಗೆ ಪೆಟ್ಟುಕೊಟ್ಟದ್ದೆಲ್ಲ ಈ ತಂತ್ರದ ಫಲ ಎನ್ನಲಾಗುತ್ತದೆ. ಆದಾಗ್ಯೂ ಶಿವಪಾಲ್ ಮತ್ತು ಅಖೀಲೇಶ್ ನಡುವೆ ಸುಮಾರು ಎರಡು ವರ್ಷಗಳಿಂದಲೂ ಮುನಿಸು ಮಡುಗಟ್ಟಿತ್ತಾದರೂ, ಶಿವಪಾಲ್‌ರ ಘೋಷಣೆಯೊಂದಿಗೆ ಈ ಬಿರುಕು ದೇಶದ ಮುಂದೆ ಬಹಿರಂಗ ವಾಯಿತು. ಈ ವಿಭಜನೆಯಲ್ಲಿ ಅಮರ್ ಸಿಂಗ್ ಕೂಡ ಪಾತ್ರ ವಹಿಸಿದ್ದರು(ಬಿಜೆಪಿಯ ಸಹಮತಿಯೊಂದಿಗೆ) ಎನ್ನುವುದು ಸ್ಪಷ್ಟ.
ಮಹಾಘಟಬಂಧನದ ಕನಸಿಗೆ ಎರಡನೆಯ ದೊಡ್ಡ ಹೊಡೆತ ಬಿದ್ದಿರುವುದು ಮಾಯಾವತಿಯವರು ಛತ್ತೀಸ್‌ಗಢದಲ್ಲಿ ಅಜಿತ್‌ಜೋಗಿಯೊಂದಿಗೆ ಮೈತ್ರಿ ಘೋಷಿಸಿದಾಗ. ಅಷ್ಟೇ ಅಲ್ಲ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿನ ಎಲ್ಲಾ 230 ಸ್ಥಾನಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸುವುದಾಗಿ ಮಾಯಾವತಿ ಘೋಷಿಸಿದ್ದಾರೆ. ಅಲ್ಲಿ ಈಗ ಕಾಂಗ್ರೆಸ್ ತುಸು ಬಲಿಷ್ಠವಾಗಿದೆ ಎನ್ನುವ ಅಂಶವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಘೋಷಣೆ ಯನ್ನು ನಾವು ನೋಡಬೇಕು. ಈ ಮೂಲಕ ಮಾಯಾವತಿಯವರು ಕಾಂಗ್ರೆಸ್‌ಗೆ ನೇರವಾಗಿ “ನೋ’ ಎನ್ನುವ ಬದಲು, ಮೈತ್ರಿಯೇ ಸಾಧ್ಯವಾಗದಂಥ ಸನ್ನಿವೇಶವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಇದಕ್ಕಿಂತಲೂ ಮೊದಲೂ ಕೂಡ ಮಾಯಾವತಿ ಕಾಂಗ್ರೆಸ್‌ಗೆ ಅಡ್ಡಗಾಲುಹಾಕಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದ್ದರು ಎನ್ನುವುದು ಸುಳ್ಳಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ “ಗೌರವಯುತ ಪಾಲು’ ದೊರಕಿದರೆ ಮಾತ್ರ ಮಹಾಮೈತ್ರಿಗೆ ಮುಂದಾಗುವುದಾಗಿ ಅವರು ಹೇಳಿದ್ದೂ ಕೂಡ ಮಹಾಮೈತ್ರಿಯ ರಚನೆಗೆ ಫಸ್ಟ್ರೇಷನ್ ಒಡ್ಡುವ ಪರೋಕ್ಷ ನಡೆಯಾಗಿತ್ತು. ಮಾಯಾವತಿಯವರಿಗೆ ಉತ್ತರ ಪ್ರದೇಶದ 80 ಸ್ಥಾನಗಳ ಮಹಾ “ಪಾಲು’ ಬಯಸುತ್ತಾರೆ ಎನ್ನುವುದು ಓಪನ್ ಸೀಕ್ರೆಟ್. ಅತ್ತ ಅಖೀಲೇಶ್ ಯಾದವ್ ಮಾಯಾವತಿಯವರ ಡಿಮ್ಯಾಂಡ್‌ಗೆ ಒಪ್ಪಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಇನ್ನೊಂದೆಡೆ ಕೇವಲ ಪಶ್ಚಿಮ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಆರ್‌ಎಲ್‌ಡಿ ಮುಂದೆಯೂ ಬೇರೆ ಆಯ್ಕೆಯಿರಲಿಲ್ಲ. ಅಳಿದುಳಿದ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದಾದರೂ ಹೇಗೆ?
ಆದಾಗ್ಯೂ ಕಾಂಗ್ರೆಸ್ ಅನ್ನು ಈ ವಿಷಯದಲ್ಲಿ ದೂರುವಂತಿಲ್ಲ. ಏಕೆಂದರೆ ಹೇಳಿಕೇಳಿ ಅದೊಂದು ರಾಷ್ಟ್ರೀಯ ಪಕ್ಷ, ಹೀಗಿರುವಾಗ ಸ್ಥಳೀಯ ಪಕ್ಷಗಳಿಗೆ ಶರಣಾಗಿ ಅಳಿದುಳಿದ ಸ್ಥಾನದಲ್ಲಿ ಸ್ಪರ್ಧಿಸಿ ತನ್ನ ಮಾನವನ್ನು ಕಳೆದುಕೊಂಡೀತು ಹೇಗೆ? ಇನ್ನೊಂದೆಡೆ ಅತ್ತ ಬಿಎಸ್‌ಪಿಗಾಗಲಿ ಅಥವಾ ಎಸ್‌ಪಿಗಾಗಲಿ ಹೇಳಿಕೊಳ್ಳುವಂಥ ಪ್ಯಾನ್-ಇಂಡಿಯಾ ಅಸ್ತಿತ್ವವೆಲ್ಲಿದೆ?
ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಗೆಲ್ಲಲು ಮಾತ್ರ ಶಕ್ತವಾಗಿತ್ತು ಎನ್ನುವ ಅಂಶವನ್ನೇ ಮಾಯಾವತಿ ತಮ್ಮ ವಾದಕ್ಕೆ ಬಳಸಿಕೊಂಡರು. ಆದರೆ ಅದೇ 2014ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೇ ಒಂದೇ ಒಂದು ಸ್ಥಾನವೂ ದಕ್ಕಿರಲಿಲ್ಲ ಎನ್ನುವ ಸಂಗತಿಯನ್ನು ಅವರು ಮರೆತುಬಿಟ್ಟರಾ?
ಬಹುಶಃ ಉಪ-ಚುನಾವಣೆಯಲ್ಲಿನ ಗೆಲುವಿನಿಂದ ಅವರು ತಮ್ಮನ್ನು ತಾವು ಹೆಚ್ಚು ಅಂದಾಜು ಹಾಕಲಾರಂಭಿಸಿದ್ದಾರೆ ಎನಿಸುತ್ತದೆ. ಆದರೆ ಆ ಗೆಲುವು ಕೇವಲ ತಮ್ಮ ಪಕ್ಷದ ಗೆಲುವಾಗಿರಲಿಲ್ಲ, ಬದಲಾಗಿ ಕಾಂಗ್ರೆಸ್, ಎಸ್‌ಪಿ, ಆರ್‌ಎಲ್‌ಡಿ ಜೊತೆಗಿನ ಮೈತ್ರಿಯ ಫಲವಾಗಿತ್ತು ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. (ಮೂಲ-ಡೇಲಿ ಓ) ಶರತ್ ಪ್ರಧಾನ್