Advertisement

ಏಕರೂಪದ ವಲಯ ನಿಯಮಾವಳಿಗೆ ವಿರೋಧ

11:40 AM Aug 01, 2017 | Team Udayavani |

ಮಂಗಳೂರು: ಸರಕಾರದ ನಗರಾಭಿವೃದ್ಧಿ ಇಲಾಖೆಯು “ಏಕರೂಪದ ವಲಯ ನಿಯಮಾವಳಿ’ ಜಾರಿಗೊಳಿಸಲು ಮುಂದಾಗಿರುವುದರಿಂದ ಮಂಗಳೂರು ಸೇರಿದಂತೆ ಕರಾವಳಿ ಭಾಗಕ್ಕೆ ಬಹಳಷ್ಟು ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ, ಮಂಗಳೂರನ್ನು ಈ ನಿಯಮದಿಂದ ಕೈಬಿಡುವಂತೆ ಹಾಗೂ ಆಕ್ಷೇಪಣೆಗಳಿಗೆ ಇನ್ನಷ್ಟು ಕಾಲಾವಕಾಶ ಒದಗಿಸುವಂತೆ ನಗರಾಭಿವೃದ್ಧಿ ಸಚಿವರನ್ನು ಕೋರಲು ಮಂಗಳೂರು ಪಾಲಿಕೆ ನಿರ್ಧರಿಸಿದೆ.

Advertisement

ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಮಹಮ್ಮದ್‌ ಅವರು, ವಲಯ ನಿಯಮಾವಳಿ ಜಾರಿಗೆ ತರಲು ಸರಕಾರ ಉದ್ದೇಶಿಸಿದ್ದು, ಇದನ್ನು ರಾಜ್ಯವ್ಯಾಪಿಯಾಗಿ ಮಾಡಲು ಸಿದ್ಧತೆ ನಡೆಯುತ್ತಿದೆ. ಇದರಂತೆ ಆಕ್ಷೇಪಣೆ ಸಲ್ಲಿಸಲು ಜು. 31 ಕೊನೆಯ ದಿನ. ಆದರೆ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಏಕ ನಿವೇಶನ ಸಮಸ್ಯೆ ಈಗಾಗಲೇ ಬಹುದೊಡ್ಡದಾಗಿ ಕಾಡುತ್ತಿದೆ. ಇದರ ಮಧ್ಯೆ ವಲಯ ನಿಯಮಾವಳಿ ಜಾರಿಯಾದರೆ ಸಾಮಾನ್ಯ ಜನರಿಗೆ ಇನ್ನಷ್ಟು ಸಮಸ್ಯೆ ಆಗಲಿದೆ. ಹೀಗಾಗಿ ಆಕ್ಷೇಪಣೆ ಸಲ್ಲಿಸುವ ದಿನವನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಆಕ್ಷೇಪ: ಮೇಯರ್‌ಗೆ ಅವಕಾಶ
ಆಯುಕ್ತ ಮೊಹಮ್ಮದ್‌ ನಝೀರ್‌ ಮಾತನಾಡಿ, ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ತನ್ನದೇ ಆದ ಪ್ರತ್ಯೇಕ ವಲಯ ನಿಯಮಾವಳಿ ಇತ್ತು. ಮುಡಾ ಪರಿಷ್ಕೃತ ನಿಯಮಾವಳಿ 2013ರಲ್ಲಿ ಜಾರಿಯಾಗಿದ್ದು 2021ರ ವರೆಗೆ ಜಾರಿಯಲ್ಲಿರುತ್ತದೆ. ಈಗ ಸರಕಾರ ಏಕರೂಪದ ನಿಯಮಾವಳಿ ರಚನೆಗೆ ಮುಂದಾಗಿದೆ. ಪಾಲಿಕೆ ವತಿಯಿಂದ ಆಕ್ಷೇಪ ಸಲ್ಲಿಸು ವಂತಿಲ್ಲ. ಮೇಯರ್‌ ಸರಕಾರವನ್ನು ಕೋರಬಹುದು ಎಂದರು. ಮೇಯರ್‌ ಉತ್ತರಿಸಿ, ಏಕರೂಪ ವಲಯ ನಿಯಮಾವಳಿ ಸಂಬಂಧಿಸಿ ಶೀಘ್ರ ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು. ಆಕ್ಷೇಪ ಸಲ್ಲಿ ಸುವ ಅವಧಿ ಮುಗಿದಿದ್ದರೂ ಪಾಲಿಕೆ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲಿದೆ ಎಂದರು.

ಬಿಜೆಪಿ ಸದಸ್ಯರ ಧರಣಿ
ಮಂಗಳೂರಿನ ಲೈಟ್‌ಹೌಸ್‌ಹಿಲ್‌ನಿಂದ ಅಂಬೇಡ್ಕರ್‌ ವೃತ್ತದವರೆಗಿನ ರಸ್ತೆಗೆ ಮುಲ್ಕಿ ಸುಂದರರಾಮ್‌ ಶೆಟ್ಟಿ ಹೆಸರು ನಾಮಕರಣ ಮಾಡುವ ಸಂಬಂಧ ತರಲಾದ ತಡೆಯಾಜ್ಞೆ ಕುರಿತಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಡೆ ಯಾಜ್ಞೆ ತೆರವುಗೊಳಿಸುವಂತೆ ಹಾಗೂ ಈ ಹಿಂದೆ ಪಾಲಿಕೆಯಿಂದ ಸರ್ವಾನುಮತದಿಂದ ಅಂಗೀಕಾರವಾಗಿ ಸರಕಾರ ಒಪ್ಪಿಗೆ ನೀಡಿದ ಮೂಲ್ಕಿ ಸುಂದರ ರಾಮ ಶೆಟ್ಟಿ ಹೆಸರನ್ನೇ ಮರು ನಾಮಕರಣ ಮಾಡುವಂತೆ ಆಗ್ರಹಿಸಿ ಮೇಯರ್‌ ಪೀಠದ ಎದುರು ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಪ್ರಸ್ತುತ ಕೇಳಿಬಂದಿರುವ ಎಲ್ಲ ರೀತಿಯ ಗೊಂದಲ ಹಾಗೂ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆ ನಡೆಯಲಿದೆ. ಈ ಮೂಲಕ ನಾಮಕರಣ ವಿವಾದವನ್ನು ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ಪಾಲಿಕೆ ಮಾಡಲಿದೆ ಎಂದರು.

Advertisement

ಘನತ್ಯಾಜ್ಯ ಉತ್ಪಾದನೆಗೆ ಅನುಗುಣವಾಗಿ ವಾಣಿಜ್ಯ ಕಟ್ಟಡಗಳಿಗೆ 2017-18ನೇ ಸಾಲಿನಿಂದ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ವಿಧಿಸುವ ಘನತ್ಯಾಜ್ಯ ವಿಲೇವಾರಿ ಉಪ ಕರವನ್ನು ಕಡಿತಗೊಳಿಸಿ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next